ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ ಅವೈದಿಕರ ದೇವ; ನಿಷೇಧ ಸಮ್ಮತವಲ್ಲ

ಮಾಂಸ ಮಾರಾಟ ನಿಷೇಧಕ್ಕೆ ವಿರೋಧ
Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತುಮಕೂರು/ಚಿಕ್ಕನಾಯಕನಹಳ್ಳಿ: ತುಮಕೂರು ಮಹಾನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಫೆ.13ರ ಶಿವರಾತ್ರಿ ಹಬ್ಬದಂದು ಮಾಂಸ ಮಾರಾಟವನ್ನು ಸ್ಥಳೀಯ ಆಡಳಿತಗಳು ನಿಷೇಧಿಸಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಹುಟ್ಟು ಹಾಕಿದೆ. ಶಿವ ವೈದಿಕರಲ್ಲದವರ ದೇವ. ಇದಕ್ಕೆ ಕಾನೂನು ಮುದ್ರೆ ಸಮ್ಮತವಲ್ಲ ಎನ್ನುವ ಅಭಿಪ್ರಾಯ ತೀವ್ರವಾಗಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫೆ.12ರ ಸಂಜೆ 5ರಿಂದ 13ರ ಮಧ್ಯರಾತ್ರಿ 12ರವರೆಗೆ ಮಾಂಸಾಹಾರ ನಿಷೇಧಿಸಿ ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಆದೇಶ ಹೊರಡಿಸಿದ್ದಾರೆ. 

ಚಿಕ್ಕನಾಯಕನಹಳ್ಳಿ ಪುರಸಭೆ ಈಗಾಗಲೇ ಮಾಂಸ ಮಾರಾಟ ಸ್ಥಳಗಳಲ್ಲಿ ‘ಶಿವರಾತ್ರಿ ದಿನ ಮಾರಾಟ ಇಲ್ಲ’ ಎಂದು ಸಾರ್ವಜನಿಕವಾಗಿ ಪ್ರಕಟಣೆ ಅಂಟಿಸಿದೆ. ಪುರಸಭೆಯ ಈ ಕ್ರಮವನ್ನು ಕೆಲವರು ಪ್ರಶ್ನಿಸಿದ್ದಾರೆ.

ನಿಷೇಧಕ್ಕೆ ಫೇಸ್‌ಬುಕ್‌ನಲ್ಲಿ ಚಿಕ್ಕನಾಯಕನಹಳ್ಳಿಯ ಯುವಲೇಖಕ ಕಂಟಲಗೆರೆ ಗುರುಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಭಕ್ತಿ ಅವರವರ ಭಾವಕ್ಕೆ ಬಿಟ್ಟದ್ದು. ನಿಮ್ಮ ಭಕ್ತಿಯನ್ನು ಹೀಗೆ ಪ್ರಕಟಿಸಬೇಕು ಎಂಬುದು ಹೇರಿಕೆ ಆಗುತ್ತದೆ. ಅಷ್ಟರಲ್ಲೂ ಶಿವ ಸಸ್ಯಾಹಾರಿ ಎಂದು ಹೇಳಿದವರು ಯಾರು. ಬೇಡರಕಣ್ಣಪ್ಪ ತನ್ನ ಬೇಟೆಯ ಮಾಂಸವನ್ನು ಶಿವನಿಗೆ ನೈವೇದ್ಯವಾಗಿಸಿದ ಬಹುದೊಡ್ಡ ಶಿವ ಭಕ್ತಿಯ ಮಾದರಿ ಕಣ್ಣ ಮುಂದಿದೆ’ ಎಂದು ಹೇಳಿದ್ದಾರೆ.

‘ಸ್ವಯಂ ಪ್ರೇರಣೆಯಿಂದ ಅಂದು ಮಾಂಸ ನಿಷೇಧಿಸಿಕೊಂಡು ಭಕ್ತಿ ಸಮರ್ಪಿಸುವುದು ಒಂದು ಮಾದರಿ. ಆದರೆ ಅದಕ್ಕೆ ಕಾನೂನು ಮುದ್ರೆ ತೊಡಿಸಿರುವುದು ಅಪಾಯಕಾರಿಯಾದುದು. ಗಾಂಧಿ, ಮಹಾವೀರ ಮುಂತಾದವರ ಜಯಂತಿಯಂದು ಮಾಂಸ ನಿಷೇಧಿಸಿದರೆ ಒಂದು ನಂಬಿಕೆ, ತಾತ್ವಿಕತೆಗೆ ಗೌರವಿಸಿದಂತಾಗುತ್ತದೆ. ಆದರೆ ಭಕ್ತಿಗೆ ಇಲ್ಲದ ಗುಣವನ್ನು ಆಪಾದಿಸಿ ನಿಷೇಧಿಸುವುದು ಎಳೆಸುತನದ ನಿರ್ಧಾರ’ ಎಂದು ತಿಳಿಸಿದ್ದಾರೆ.

‘ಶಿವರಾತ್ರಿ ಮಂಗಳವಾರ ಬಂದಿದೆ. ಶಕ್ತಿ ದೇವತಾರಾಧನೆಯಲ್ಲಿ ವಿಶೇಷ ಮಹತ್ವವಿರುವ ದಿನ. ಶಕ್ತಿ ದೇವತಾ ಆರಾಧನೆಯಲ್ಲಿ ಬಲಿಗೆ ಪ್ರಾಮುಖ್ಯ ಇದೆ’ ಎಂದು ಗುರುಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

‘ಅಧಿಕಾರಿಗಳಿಗೆ ತಲೆಕೆಟ್ಟಿರಬೇಕು. ನಮ್ಮ ಶಿವ ನಮ್ಮ ನೈವೇದ್ಯ ಇದರಲ್ಲಿ ಇವರ ತಕರಾರೇನು. ಶಿವನಿಗೆ ಮಾಂಸದ ಎಡೆಯಿಟ್ಟವರು ನಾವು’ ಎಂದು ಅನಿಲ್ ಕುಮಾರ್ ಚಿಕ್ಕದಾಳವಟ್ಟ ಎಂಬುವವರು ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದಾರೆ.

‘ಪ್ರತಿ ಶಿವರಾತ್ರಿ ಹಬ್ಬದಲ್ಲಿ ಮಾಂಸ ಮಾರಾಟ ನಿಷೇಧ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಅಂದು ನಗರಸಭೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. 12 ರಂದು ಈ ಬಗ್ಗೆ ಅಧಿಕೃತವಾಗಿ ಪ್ರಚಾರ ನಡೆಸುತ್ತೇವೆ’ ಎಂದು ಶಿರಾ ನಗರಸಭೆ ಪೌರಾಯುಕ್ತ ಗಂಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

'ಭಕ್ತಿ ಎಂಬುದು ಆಹಾರ ಪದ್ಧತಿಯನ್ನು ಮೀರಿದ ಭಾವ. ಶಿವನ ಆಚರಣೆಯಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರಕ್ಕೆ ಸಮಾನ ಸ್ಥಾನ ಇದೆ ಎಂಬುದಕ್ಕೆ ಬೇಡರ ಕಣ್ಣಪ್ಪನ ಭಕ್ತಿಯೇ ಸಾಕ್ಷಿ. ಆಚರಣೆ, ಆಹಾರ ಪದ್ಧತಿ ವೈಯಕ್ತಿಕ ವಿಷಯ. ಕಾನೂನು ನಿರ್ಬಂಧದ ಅವಶ್ಯಕತೆ ಇಲ್ಲ’ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ ತಿಳಿಸಿದರು.

* ಒಂದು ವರ್ಷದಲ್ಲಿ 16 ದಿನ ಮಾಂಸ ಮಾರಾಟಕ್ಕೆ ನಿಷೇಧ ಇದೆ. ಕಳೆದ 13 ವರ್ಷಗಳಿಂದ ಶಿವರಾತ್ರಿಯಂದು ಪುರಸಭೆ ಮಾಂಸ ಮಾರಾಟ  ನಿಷೇಧಿಸುತ್ತಾ ಬರುತ್ತಿದೆ. 

– ಮಂಜುಳಾದೇವಿ, ಚಿಕ್ಕನಾಯಕನಹಳ್ಳಿ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT