ಬೆಂಗಳೂರು: ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್ ನಗರದಲ್ಲಿ ‘ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ)’ ಏರ್ಪಡಿಸಿರುವ 12ನೇ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಸಚಿವರು ಮತ್ತು ಅಧಿಕಾರಿಗಳ 40ಕ್ಕೂ ಹೆಚ್ಚು ಮಂದಿಯ ದಂಡು ಅಣಿಯಾಗಿದೆ.
ಇದೇ 30, 31 ಮತ್ತು ಸೆ. 1ರಂದು ಸಮ್ಮೇಳನ ನಡೆಯಲಿದೆ. ಸಚಿವರು ಮತ್ತು ಅಧಿಕಾರಿಗಳ ಅಮೆರಿಕ ಪ್ರವಾಸದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕಾನೂನು ಸಚಿವ ಎಚ್.ಕೆ. ಪಾಟೀಲ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ವಿವಿಧ ನಿಗಮಗಳ ಅಧ್ಯಕ್ಷರು ಸಮ್ಮೇಳನಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ‘ಅಕ್ಕ’ದ ಆಹ್ವಾನದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯು ದಲಿತ ಸಮುದಾಯದ 17 ಕಲಾವಿದರನ್ನೂ ಕರೆದೊಯ್ಯಲಿದೆ.
ತಂಗಡಗಿ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎಂ.ಎನ್. ಅಜಯ್ ನಾಗಭೂಷಣ್, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್. ಮಧುಸೂದನ ರೆಡ್ಡಿ, ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಬಿ. ಶಿವಸ್ವಾಮಿ, ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಮತ್ತು ‘ಗ್ಯಾರಂಟಿ’ಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತೆರಳಲಿದ್ದಾರೆ.
ಎಚ್.ಸಿ. ಮಹದೇವಪ್ಪ ನೇತೃತ್ವದ ತಂಡದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕರಾದ ವಸುಂಧರಾ, ಸಚಿವರ ಆಪ್ತ ಸಹಾಯಕ ಗೋಪಾಲ್, ಜಂಟಿ ನಿರ್ದೇಶಕ ದೇವರಾಜ್ ಇದ್ದಾರೆ.
ಚಲುವರಾಯಸ್ವಾಮಿ ನೇತೃತ್ವದ ತಂಡವು ಅಮೆರಿಕದ ಅಯೋವಾ ರಾಜ್ಯದ ಸೆಂಟ್ ಬೂನ್ ನಗರದಲ್ಲಿ ಇದೇ 27ರಿಂದ 29ರವರೆಗೆ ನಡೆಯಲಿರುವ ‘ಫಾರ್ಮ್ ಪ್ರೋಗ್ರೆಸ್ ಶೋ– 2024’ ಮತ್ತು ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲಿದೆ.
ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ಅಧ್ಯಕ್ಷ ಬಿ.ಎಚ್. ಹರೀಶ, ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ಬಂಥನಾಳ, ಹೆಚ್ಚುವರಿ ಕೃಷಿ ನಿರ್ದೇಶಕ ವೆಂಕಟರಮಣ ರೆಡ್ಡಿ, ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ. ಪ್ರಭಾಕರ ತಂಡದಲ್ಲಿದ್ದಾರೆ. ತಂಡದ ಪ್ರವಾಸಕ್ಕೆ ಸುಮಾರು ₹ 85.15 ಲಕ್ಷ ವೆಚ್ಚವಾಗಲಿದೆ ಎಂದೂ ಪ್ರಸ್ತಾವದಲ್ಲಿದೆ. ಇಲಾಖೆಯ ಮಳಿಗೆ ತೆರೆಯಲು ₹ 25 ಲಕ್ಷದ ಪ್ರಾಯೋಕತ್ವಕ್ಕೂ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಅಪ್ಪಾಜಿ ನಾಡಗೌಡ ನೇತೃತ್ವದ ತಂಡದಲ್ಲಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ. ಪ್ರಶಾಂತ್, ಮಹಾ ಪ್ರಬಂಧಕ (ಹಣಕಾಸು ಮತ್ತು ಮಾರುಕಟ್ಟೆ) ಕೆ.ಎಲ್. ರವೀಶ, ಸಹಾಯಕ ಮಹಾ ಪ್ರಬಂಧಕ (ಮಾರುಕಟ್ಟೆ) ಬಿ.ಎನ್. ಅರವಿಂದ್ ಇದ್ದಾರೆ. ಈ ತಂಡ ಇದೇ 27ರಿಂದ ಸೆ. 5ರವರೆಗಿನ ಅಮೆರಿಕ ಪ್ರವಾಸ ಕೈಗೊಳ್ಳಲಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ದಲಿತ ಕಲಾವಿದರಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ
ದಲಿತ ಸಮದಾಯದ 17 ಕಲಾವಿದರ ಪ್ರಯಾಣ ವೀಸಾ ನವೀಕರಣ ಪೋಷಾಕು ಇತರೆ ವೆಚ್ಚಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಯಡಿ ಹಣ ನೀಡಲು ಆದೇಶಿಸಲಾಗಿದೆ. ತಲಾ ₹ 2.55 ಲಕ್ಷದಂತೆ ಒಟ್ಟು ₹ 43.55 ಲಕ್ಷವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2024–25ರಲ್ಲಿ ಬಳಕೆಯಾಗದ ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನದಿಂದ ಭರಿಸಲು ಆ.20ರಂದೇ ಆದೇಶ ಹೊರಡಿಸಿದೆ.
ನ್ಯೂಯಾರ್ಕ್ ಸಾನ್ ಫ್ರಾನ್ಸಿಸ್ಕೊದಲ್ಲಿ ರೋಡ್ ಶೋ
ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಒಂಬತ್ತು ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಸೆ. 3ರಂದು ನ್ಯೂಯಾರ್ಕ್‌ನಲ್ಲಿ ಸೆ. 5ರಂದು ಸಾನ್ ಫ್ರಾನ್ಸಿಸ್ಕೊದಲ್ಲಿ ಅಂತರರಾಷ್ಟ್ರೀಯ ರೋಡ್ ಶೋ ನಡೆಯಲಿದೆ.
ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ ನಿರ್ದೇಶಕ ಕೆ.ವಿ. ರಾಜೇಂದ್ರ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ಅಧ್ಯಕ್ಷ ಅನಿಲ್ ಚಿಕ್ಕಮಾದು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಸಂಕಿನ್‌ಮಠ ಸಚಿವರ ಆಪ್ತ ಕಾರ್ಯದರ್ಶಿ ಶಿವಪುತ್ರ ಬಾಬುರಾವ್ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಹೆಸರು ಪಟ್ಟಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.