ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್‌ನಲ್ಲಿ ‘ಅಪ್ಲೈಡ್‌ ಮೆಟೀರಿಯಲ್ಸ್‌’ನ ‍ಪ್ರಯೋಗಾಲಯ

Published 5 ಅಕ್ಟೋಬರ್ 2023, 16:06 IST
Last Updated 5 ಅಕ್ಟೋಬರ್ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ಉತ್ಕೃಷ್ಟತಾ ಕೇಂದ್ರ ಮತ್ತು ಆರ್ ಆ್ಯಂಡ್‌ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಪ್ರಯೋಗಾಲಯ ಸ್ಥಾಪಿಸುವ ಕುರಿತಂತೆ ಚಿಪ್ ತಯಾರಿಕಾ ಕಂಪನಿ ‘ಅಪ್ಲೈಡ್ ಮೆಟೀರಿಯಲ್ಸ್’ನ ಪ್ರತಿನಿಧಿಗಳ ಜೊತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬುಧವಾರ ಮಾತುಕತೆ ನಡೆಸಿತು.

ಕರ್ನಾಟಕಕ್ಕೆ ಹೂಡಿಕೆ ಸೆಳೆಯಲು ಪಾಟೀಲರ ನೇತೃತ್ವದ ನಿಯೋಗವು ಅಮೆರಿಕ ಪ್ರವಾಸದಲ್ಲಿದೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ‌ ನಿಯೋಗದಲ್ಲಿದ್ದರು.

ಪ್ರಯೋಗಾಲಯ ಸ್ಥಾಪನೆಗೆ ಅಗತ್ಯವಾದ ಪೂರ್ವಾನುಮತಿಗಳನ್ನು ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಂಪನಿಯ ಪ್ರತಿನಿಧಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಕಂಪನಿಯ ಅಧಿಕಾರಿಗಳಾದ ಪ್ರಭು ಜಿ. ರಾಜ ಮತ್ತು ಶ್ರೀನಿವಾಸ ಸತ್ಯ ಅವರು ಉತ್ಕೃಷ್ಟತಾ ಕೇಂದ್ರದ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಸೆಂಟರ್ ಸ್ಥಾಪಿಸಲು ನಾಲ್ಕು ವರ್ಷಗಳ ಅವಧಿಯಲ್ಲಿ ₹3,200 ಕೋಟಿ ಹೂಡಿಕೆ ಮಾಡುವುದಾಗಿ ‌ಕೆಲವು ದಿನಗಳ ಹಿಂದೆ ಕಂಪನಿ ತಿಳಿಸಿತ್ತು.

ಜುಪಿಟರ್ ನೆಟ್‌ವರ್ಕ್ಸ್‌ ಕಂಪನಿಯ ಪ್ರತಿನಿಧಿಗಳ ಜೊತೆ ನಡೆದ ಸಭೆಯಲ್ಲಿ ಆರ್ ಆ್ಯಂಡ್‌ ಡಿ ವಿಸ್ತರಣೆ ಮತ್ತು ಹಾರ್ಡ್‌ವೇರ್‌ ತಯಾರಿಕೆ ಕುರಿತು ಚರ್ಚೆ ನಡೆಯಿತು. ಡಿಸೈನ್ ಮತ್ತು ವೈರ್‌ಲೆಸ್‌ ಉತ್ಪನ್ನಗಳಿಗಾಗಿ 2024ರ ಮಾರ್ಚ್ ಹೊತ್ತಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವ ಬಗ್ಗೆಯೂ ಮಾತುಕತೆ ನಡೆಯಿತು.‌

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಯುವಜನರಿಗೆ ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ, ಐಒಟಿ ಮತ್ತು ಸೈಬರ್ ಸೆಕ್ಯುರಿಟಿ ವಿಷಯಗಳಲ್ಲಿ ಕೌಶಲಗಳನ್ನು ಕಳಿಸಿ ತರಬೇತಿ ನೀಡುವ ಕುರಿತು ಚರ್ಚಿಸಲಾಯಿತು. ಹಾರ್ಡ್ ಡಿಸ್ಕ್ ಡ್ರೈವ್ ಅಭಿವೃದ್ಧಿಗೆ ಹೆಸರಾದ ವೆಸ್ಟ್ರನ್ ಡಿಜಿಟಲ್ ಕಂಪನಿಯ ಪ್ರತಿನಿಧಿಗಳು ಅಬಕಾರಿ ಸುಂಕಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್, ಐಟಿಬಿಟಿ‌ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ ಕೌರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT