ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ಘಟಿಕೋತ್ಸವ: ಎಚ್‌.ಡಿ.ದೇವೇಗೌಡಗೆ ಗೌರವ ಡಾಕ್ಟರೇಟ್‌ ಪ್ರದಾನ

Published 17 ಅಕ್ಟೋಬರ್ 2023, 15:44 IST
Last Updated 17 ಅಕ್ಟೋಬರ್ 2023, 15:44 IST
ಅಕ್ಷರ ಗಾತ್ರ

ಬೆಂಗಳೂರು: ನವ್ಯ ಶಿಕ್ಷಣವು ಕೊಠಡಿಯ ಮಿತಿದಾಟಿ ಜಗತ್ತನ್ನೇ ಒಂದು ಶಾಲೆಯಾಗಿಸಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಕೋನ ವಿಸ್ತಾರವಾಗಬೇಕಿದೆ ಎಂದು ಝೆರೋದಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ 58ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. 

ಸಾಂಪ್ರದಾಯಿಕ ಶಿಕ್ಷಣದಾಚೆಗೂ ವಿದ್ಯಾರ್ಥಿಗಳು ದೃಷ್ಟಿಹರಿಸಬೇಕು. ತಂತ್ರಜ್ಞಾನ ಮತ್ತು ಶಿಕ್ಷಣದ ವೇಗ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ವಿಶ್ವದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಇದೆ. ಸಾಂಪ್ರದಾಯಿಕ ಶಿಕ್ಷಣದ ಹೊರಗೆ ಜಗತ್ತಿಗೆ ಅಗತ್ಯವಿರುವ ಕೌಶಲ ಸಿಗುತ್ತಿದೆ. ಉದ್ಯೋಗದ ಭರವಸೆ ಮೂಡಿಸಿದೆ ಎಂದರು.

299 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 113 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. 204 ಅಭ್ಯರ್ಥಿಗಳಿಗೆ ಪಿ.ಎಚ್‌ಡಿ ಪ್ರದಾನ ಮಾಡಲಾಯಿತು. 28,871 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದರು. ಅವರಲ್ಲಿ 20,056 ಉನ್ನತ ಶ್ರೇಣಿ, 4,807 ಪ್ರಥಮ ದರ್ಜೆ, 874 ದ್ವಿತೀಯ ದರ್ಜೆ ಮತ್ತು 137 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಪದವಿ ಪೂರೈಸಿದ್ದಾರೆ. 

ಕುಲಪತಿ ಎಸ್.ಎಂ.ಜಯಕರ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಪಾಲ ಥಾವರ್ ಚಂದ್‌ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಉಪಸ್ಥಿತರಿದ್ದರು.

ಬೆಂಗಳೂರು ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ 58ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರಾದ ಜೆ.ವಿನುತಾ ಅಸ್ಮಾ ಬಾನು ಅಬ್ದುಲ್‌ ವಹೀದ್‌ ಶ್ವೇತಾ ಉದಯಕುಮಾರ ಮುರಗೋಡ. 
ಬೆಂಗಳೂರು ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ 58ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರಾದ ಜೆ.ವಿನುತಾ ಅಸ್ಮಾ ಬಾನು ಅಬ್ದುಲ್‌ ವಹೀದ್‌ ಶ್ವೇತಾ ಉದಯಕುಮಾರ ಮುರಗೋಡ. 
ನೈತಿಕ ಶಿಕ್ಷಣ ಅಗತ್ಯ: ದೇವೇಗೌಡ
ವಿದ್ಯೆ ಜತೆಗೆ ಸಂಸ್ಕಾರವಿದ್ದಾಗ ಮಾತ್ರ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ನೈತಿಕ ಶಿಕ್ಷಣ ಇಂದಿನ ಅಗತ್ಯ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಪ್ರತಿಪಾದಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಸ್ವೀಕರಿಸಿದ ನಂತರ ಅವರು ಮಾತನಾಡಿದರು.  ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯ. ಪದವಿ ಪಡೆದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕೃತಿಯನ್ನೂ ಬೆಳೆಸಿಕೊಳ್ಳಬೇಕು ಸಂಸ್ಕಾರವಿಲ್ಲದ ಶಿಕ್ಷಣ ಕಾಗದದ ಪ್ರಮಾಣಪತ್ರವಾಗೇ ಉಳಿಯುತ್ತದೆ. ಮನುಷ್ಯ ಗಳಿಸಿದ ಹಣವನ್ನು ಧರ್ಮ ಕಾರ್ಯಗಳಿಗೆ ಬಳಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT