ಬೆಂಗಳೂರು: ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಅಸಾಂವಿಧಾನಿಕವಾಗಿದ್ದು ತನಿಖೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ’ ಎಂದು ಆಕ್ಷೇಪಿಸಿ ಬಿಜೆಪಿ ಮುಖಂಡ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯಲ್ಲಿ ನನ್ನನ್ನೂ ಮಧ್ಯಂತರ ಪ್ರತಿವಾದಿಯನ್ನಾಗಿ ಸೇರ್ಡಡೆ ಮಾಡಿಕೊಳ್ಳಬೇಕು’ ಎಂದು ಕೋರಿ ಯತ್ನಾಳ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ ಬುಧವಾರ (ನ.29) ವಿಚಾರಣೆ ನಡೆಸಲಿದ್ದು, ನ್ಯಾಯಪೀಠ ಈ ಮಧ್ಯಂತರ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಯತ್ನಾಳ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ ವಕಾಲತ್ತು ವಹಿಸಿದ್ದಾರೆ.
ಅರ್ಜಿಯಲ್ಲಿ ಏನಿದೆ?: ‘ಶಿವಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾ ಮಾಡಿದ ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಸಿಬಿಐ ತನಿಖೆ ಈಗಾಗಲೇ ಶೇ 90ರಷ್ಟು ಪೂರ್ಣಗೊಂಡಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮೋದನೆ ಹಿಂಪಡೆದಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಈ ಮೂಲಕ ಶಿವಕುಮಾರ್ ಅವರನ್ನು ರಕ್ಷಿಸಲು ಹೆಜ್ಜೆ ಇರಿಸಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ರಾಜ್ಯ ಸರ್ಕಾರದ ಈ ನಡೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು ಮತ್ತು ಈ ನೆಲದ ಕಾನೂನಿಗೆ ವಿರುದ್ಧವಾಗಿದೆ. ಸಂವಿಧಾನದ 144ನೇ ವಿಧಿಗೆ ತದ್ವಿರುದ್ಧವಾದ ಈ ಕ್ರಮದಿಂದ ಸಾರ್ವಜನಿಕ ಆತ್ಮಸಾಕ್ಷಿಗೆ ಆಘಾತ ಉಂಟಾಗಿದೆ. ಪ್ರಕರಣದ ಕಾನೂನು ಸಿಂಧುತ್ವವನ್ನು ಕೋರ್ಟ್ ನಿರ್ಧರಿಬೇಕಾಗಿದ್ದು ಇಂತಹ ಸಂದರ್ಭದಲ್ಲಿ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆಯುವ ನಿರ್ಧಾರವು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಆದ್ದರಿಂದ, ಈ ಎಲ್ಲಾ ನೆಲೆಗಳಲ್ಲಿ ನನ್ನ ವಾದವನ್ನೂ ಆಲಿಸಬೇಕು’ ಎಂದು ಯತ್ನಾಳ ಕೋರಿದ್ದಾರೆ.
* ಡಿಕೆಶಿ ಮೇಲ್ಮನವಿ ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆ
* ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ?
ಸಿಜೆಐಗೆ ಮನವಿ
‘ಸಿಬಿಐ ತನಿಖೆ ಹಿಂಪಡೆದಿರುವ ಸಚಿವ ಸಂಪುಟದ ನಿರ್ಧಾರ ಪ್ರಾಮಾಣಿಕತೆಯ ಮೌಲ್ಯಗಳು ಹಾಗೂ ರಾಜ್ಯಾಡಳಿತದ ಸಮಗ್ರತೆಯನ್ನು ನಾಶ ಮಾಡಿದಂತಾಗಿದೆ‘ ಎಂದು ಆರೋಪಿಸಿರುವ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ‘ ತನ್ನ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೂ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.