ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಜಾತ್ಯತೀತ ಮೌಲ್ಯ ಎಲ್ಲಿ ಹೋಯಿತು: ಮುಖ್ಯಮಂತ್ರಿ ಸಿದ್ದರಾಮಯ್ಯ

Published 30 ಸೆಪ್ಟೆಂಬರ್ 2023, 14:40 IST
Last Updated 30 ಸೆಪ್ಟೆಂಬರ್ 2023, 14:40 IST
ಅಕ್ಷರ ಗಾತ್ರ

ಬೆಂಗಳೂರು: ‘ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ‘ಜಾತ್ಯತೀತ ಜನತಾದಳ (ಜೆಡಿಎಸ್‌) ವರಿಷ್ಠ ಎಚ್‌.ಡಿ. ದೇವೇಗೌಡರು ಹೇಳಿದ್ದರು. ಈಗ ಅವರೇ ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ. ಎಲ್ಲಿ ಹೋಯಿತು ಜಾತ್ಯತೀತ ಮೌಲ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಎಚ್‌ಬಿಆರ್‌ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಜೆಡಿಎಸ್‌ ಸಂಸ್ಥಾಪಕ ಸದಸ್ಯ ನಾನು’ ಎಂದರು.

‘ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು’ ಎಂದು ದೇವೇಗೌಡರು ಹೇಳಿದ್ದರು. ಆದರೆ, ಈಗ ‘ಜೆಡಿಎಸ್‌ ಉಳಿವಿಗಾಗಿ ಬಿಜೆಪಿ ಜೊತೆ ಸೇರುತ್ತಿದ್ದೇವೆ ಎನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ‘ಅಧಿಕಾರ ಇರಲಿ, ಇಲ್ಲದಿರಲಿ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕಾಂಗ್ರೆಸ್ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದರು.

‘ಜೆಡಿಎಸ್‌ಗೆ ಹೋಗಬೇಡ. ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಹೋಗು ಎಂದು ಬಿ.ಎಂ. ಫಾರೂಕ್‌ಗೆ (ವಿಧಾನ ಪರಿಷತ್‌ ಸದಸ್ಯ) ನಾನು ಮತ್ತು ಡಿ.ಕೆ. ಶಿವಕುಮಾರ್ ಎಷ್ಟು ಹೇಳಿದರೂ ಕೇಳಲಿಲ್ಲ. ಈಗ ಏನಾಗಿದೆ ನೋಡಿ’ ಎಂದೂ ಹೇಳಿದರು.

‘ನಮ್ಮ ಸಂವಿಧಾನ ಜಾತ್ಯತೀತತೆ, ಸೌಹಾರ್ದ ಎತ್ತಿ ಹಿಡಿದಿದೆ. ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್’ ಎಂದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ: ‘ನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ’ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಬ್ಯಾರೀಸ್ ಸೌಹಾರ್ದ ಭವನ ಸಮಿತಿಯ ಅಧ್ಯಕ್ಷ‌ ಸಯ್ಯದ್ ಮಹಮದ್ ಬ್ಯಾರಿ ಇದ್ದರು.

ಸಿದ್ದರಾಮಯ್ಯ ಡೋಂಗಿ ಸಮಾಜವಾದಿ

ಕುಮಾರಸ್ವಾಮಿ ಬೆಂಗಳೂರು: ‘ಜಾತ್ಯತೀತ ಕೋಮುವಾದ ಹೆಸರಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಅವರೊಬ್ಬ ಛದ್ಮವೇಷಧಾರಿ ಡೋಂಗಿ ಸಮಾಜವಾದಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ‘ಜಾತ್ಯತೀತ ತತ್ವಗಳನ್ನು ಎಂದೂ ಆಚರಣೆ ಮಾಡದ ಸಿದ್ದರಾಮಯ್ಯ ಜೆಡಿಎಸ್‌ನ ಜಾತ್ಯತೀತ ನಿಲುವಿನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರೂ ಸಿದ್ಧಸುಳ್ಳು ಹೇಳುವುದನ್ನು ಬಿಟ್ಟಿಲ್ಲ. ಜಾತಿ ಸಭೆಗಳನ್ನು ಆಯೋಜಿಸಿ ಕುಕ್ಕರ್‌ ಇಸ್ತ್ರಿಪೆಟ್ಟಿಗೆ ಹಂಚುವುದು ಅಹಿಂದ ಎಂದು ಹೇಳಿಕೊಂಡು ಜಾತಿಗೊಂದು ಧರ್ಮಕ್ಕೊಂದು ಸಮಾವೇಶ ನಡೆಸುವುದು ಜಾತ್ಯತೀತವೇ’ ಎಂದು ಪ್ರಶ್ನಿಸಿದ್ದಾರೆ. ‌ ‘ಬಿಜೆಪಿಯನ್ನು ಕೋಮುವಾದಿ ಎನ್ನುತ್ತಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುತ್ತಾ ಹೊಂದಾಣಿಕೆ ರಾಜಕಾರಣಕ್ಕೆ ಜಗತ್ಪ್ರಸಿದ್ಧಿ ಪಡೆದಿದ್ದಾರೆ. ಐಎನ್‌ಡಿಐಎ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ‘ಬಿ’ ಟೀಂಗಳನ್ನು ಇಟ್ಟುಕೊಂಡಿರುವ ಕಾಂಗ್ರೆಸ್‌ ಜಾತ್ಯತೀತವೇ? ಸ್ಟಾಲಿನ್ ಮಮತಾ ಬ್ಯಾನರ್ಜಿ ಫಾರೂಕ್ ಅಬ್ದುಲ್ಲಾ ನಿತೀಶ್‌ ಕುಮಾರ್‌ ಮೆಹಬೂಬಾ ಮುಫ್ತಿ ಉದ್ಧವ್ ಠಾಕ್ರೆ ಮೊದಲಾದವರು ಬಿಜೆಪಿ ಪಡಸಾಲೆಯಲ್ಲಿ ಇದ್ದವರು. ಅವರ ಪಕ್ಕದಲ್ಲಿ ಕುರ್ಚಿ ಹಾಕಿಕೊಂಡು ಕೂರಲು ಇವರಿಗೆ ನಾಚಿಕೆ ಆಗುವುದಿಲ್ಲವೇ? ನಮ್ಮ ನಿಷ್ಠೆ ಜನರಿಗಷ್ಟೇ. ನಮ್ಮ ಜಾತ್ಯತೀತ ನಿಲುವು ಪ್ರಶ್ನಿಸುವ ಯೋಗ್ಯತೆ ಸಿದ್ದರಾಮಯ್ಯ ಅವರಿಗೆ ಇದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT