ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ.29ರಿಂದ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಸಮ್ಮೇಳನ: ಪ್ರಿಯಾಂಕ್ ಖರ್ಗೆ

Published 23 ಜನವರಿ 2024, 15:47 IST
Last Updated 23 ಜನವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಇದೇ 29ರಿಂದ 31ರವರೆಗೆ ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌ ಮತ್ತು ಗೇಮಿಂಗ್‌ ಸಮ್ಮೇಳನ ‘ಜಿಎಎಫ್‌ಎಕ್ಸ್–2024’ ಹಮ್ಮಿಕೊಳ್ಳಲಾಗಿದೆ’ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘2012ರಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ನೀತಿಯನ್ನು ಮೊದಲ ಬಾರಿ ರೂಪಿಸಿದ ರಾಜ್ಯ ಕರ್ನಾಟಕ. ಈ ಉದ್ಯಮದಲ್ಲಿ ವಿಶ್ವಮಟ್ಟದಲ್ಲಿ ಪ್ರಸಿದ್ಧವಾದ ಸಮ್ಮೇಳನಗಳಲ್ಲಿ ಜಿಎಎಫ್‌ಎಕ್ಸ್ ಕೂಡಾ ಒಂದಾಗಿದ್ದು, 2016ರಿಂದ ರಾಜ್ಯದಲ್ಲಿ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ’ ಎಂದರು.

‘ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮತ್ತು ಭಾರತೀಯ ಸ್ಟುಡಿಯೋಗಳ ಮಳಿಗೆಗಳು ಇರಲಿವೆ. ಸಾಧಕರು, ವಿಮರ್ಶಕರು ತಮ್ಮ ಸಾಧನೆಗಳನ್ನು ಪ್ರದರ್ಶಿಸಲಿದ್ದಾರೆ. ಗುಂಪು ಚರ್ಚೆಗಳು, ಪ್ರದರ್ಶನಗಳು, ನೀತಿ ಸಂಬಂಧಿಸಿದ ಚರ್ಚೆಗಳು ಇರಲಿವೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ 115 ಗೋಷ್ಠಿಗಳು, 22 ಅಂತರರಾಷ್ಟ್ರೀಯ ಭಾಷಣಗಾರರ ಸಹಿತ 130 ಭಾಷಣಗಾರರು, 10 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದರು.

‘ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಕರ್ನಾಟಕ ಶೇ 20ರಷ್ಟು ಪಾಲು ಹೊಂದಿದೆ. ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌ ಮತ್ತು ಗೇಮಿಂಗ್‌ ಸಂಬಂಧಿಸಿದ ಅನೇಕ ಸಂಸ್ಥೆಗಳು ರಾಜ್ಯದಲ್ಲಿವೆ. ಚಾರ್ಲಿ 777 ಮತ್ತು ವಿಕ್ರಾಂತ್ ರೋನಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ‌ವಿಷುಯಲ್ ಎಫೆಕ್ಟ್‌ಗಳ ಅಬ್ಬರವನ್ನು ಗಮನಿಸಬಹುದಾಗಿದೆ. ಕಳೆದ ವರ್ಷ ನಡೆದ ಜಿಎಎಫ್‌ಎಕ್ಸ್ ಸಮ್ಮೇಳನದಲ್ಲಿ ಪ್ರತಿದಿನ 4,500 ಜನರು ಭಾಗವಹಿಸಿದ್ದರು. ಈ ಬಾರಿ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿದೆ. ಜೊತೆಗೆ, ಈ ಉದ್ಯಮದ ವ್ಯಾಪಾರದ ಬೆಳವಣಿಗೆಗೆ ಉತ್ತೇಜನ ಸಿಗುವ ಸಾಧ್ಯತೆಯಿದೆ’ ಎಂದರು.

ಸಮ್ಮೇಳನಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ http://gafx.in/ ಕ್ಲಿಕ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT