ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭ್ಯರ್ಥಿಗಳ ತೀರ್ಮಾನವಿಲ್ಲ; ಚುನಾವಣೆಗೆ ಬಿಜೆಪಿ ಸಿದ್ಧ’

ಇದೇ 27, 29 ರಂದು ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಭೆ
Last Updated 25 ಸೆಪ್ಟೆಂಬರ್ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಯಾವುದೇ ನಿರ್ಣಯ ಹೊರಬೀಳದ ಕಾರಣ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಪ್ರಮುಖ ನಾಯಕರ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.

ಉಪ ಚುನಾವಣೆಯನ್ನೇ ಮುಂದೂಡಬೇಕು ಎಂಬ ಮನವಿ ಕೋರ್ಟ್‌ ಮುಂದಿರುವುದರಿಂದ ಶುಕ್ರವಾರದ ಒಳಗೆ ತೀರ್ಪು ಹೊರಬೀಳಬಹುದು. ಅಲ್ಲಿಯವರೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಧಾರ ಮಾಡುವುದು ಬೇಡ ಎಂಬುದಾಗಿ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ,ಇದೇ 27 ರಂದು ಬೆಂಗಳೂರಿನಲ್ಲಿ ಮತ್ತು 29 ರಂದು ಹುಬ್ಬಳ್ಳಿಯಲ್ಲಿ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖರ ಸಭೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕದ ಎಂಟು ಕ್ಷೇತ್ರಗಳು ಮತ್ತು ಹುಬ್ಬಳ್ಳಿಯಲ್ಲಿ ಏಳು ಕ್ಷೇತ್ರಗಳ ಉಪ ಚುನಾವಣೆಗಳ ಬಗ್ಗೆ ಚರ್ಚೆ ನಡೆಯಲಿದೆ. ಆ ಸಭೆಯಲ್ಲಿ ಪಕ್ಷದ ಎಲ್ಲ ಪ್ರಮುಖರು ಭಾಗವಹಿಸುವರು ಭಾಗವಹಿಸುವರು ಎಂದರು.

‘ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಮಂಡಲ ಮಟ್ಟದವರೆಗೂ ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿರುತ್ತಾರೆ. ಚುನಾವಣೆ ನಡೆಯುವುದೇ ಅಂತಿಮವಾದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರವನ್ನು ಅಂತಿಮ ದಿನದ ಮೊದಲು ಸಲ್ಲಿಸುವರು’ ಎಂದು ಅರವಿಂದ ಹೇಳಿದರು.

ಸಂವಿಧಾನದ 370ನೇ ವಿಧಿ ರದ್ಧತಿ ಕುರಿತು ಜನ ಜಾಗೃತಿ ಸಭೆಗಳು ರಾಜ್ಯದಲ್ಲಿ 61 ಕಡೆಗಳಲ್ಲಿ ನಡೆದಿವೆ. ಇನ್ನೂ 56 ಕಡೆಗಳಲ್ಲಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೂತ್‌ ಮಟ್ಟದಲ್ಲಿ ಪಕ್ಷದ ಸಮಿತಿಗಳ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 5,000 ಬೂತ್‌ಗಳಲ್ಲಿ ಈ ಕಾರ್ಯ ಅಂತಿಮಗೊಂಡಿದೆ. ಎಲ್ಲ 58 ಸಾವಿರ ಬೂತ್‌ಗಳಲ್ಲಿ ಸಮಿತಿಗಳ ರಚನೆ ಆಗಲಿದೆ ಎಂದರು.

ಇಂದು ಜೆಡಿಎಸ್‌ ಸಭೆ

ಜೆಡಿಎಸ್‌ ಪಕ್ಷದ ರಾಜ್ಯ ಸಂಸದೀಯ ಮಂಡಳಿ ಸಭೆ ಗುರುವಾರ ಇಲ್ಲಿ ನಡೆಯಲಿದ್ದರೂ, ಉಪಚುನಾವಣೆಯ ಎಲ್ಲಾ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಇನ್ನೂ ಯಾವುದೇ ತೀರ್ಮಾನ ಪ್ರಕಟವಾಗದ ಕಾರಣ ಕೆಲವು ದಿನ ಕಾದು ನೋಡುವ ತಂತ್ರವನ್ನು ಪಕ್ಷದ ನಾಯಕರು ಮಾಡಿದ್ದಾರೆ.

21 ನಾಮಪತ್ರ ಸಲ್ಲಿಕೆ

ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಂದುವರಿದಿದ್ದು, ಮೂರನೇ ದಿನವಾದ ಬುಧವಾರದ ವರೆಗೆ ಒಟ್ಟು 21 ನಾಮಪತ್ರಗಳು ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT