ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ: ಓವೈಸಿ

Last Updated 25 ಅಕ್ಟೋಬರ್ 2022, 11:19 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ ಇದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಆತಂಕ ವ್ಯಕ್ತಪಡಿಸಿದರು.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಎಐಎಂಐಎಂ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮಂಗಳವಾರ ನಗರಕ್ಕೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಬ್ ಕಾ ಸಾತ್, ಸಬ್ ಕಾ ವಿಕಾಸ್‌’ ಎಂಬುದು ಬರೀ ಬಿಜೆಪಿ ಭಾಷಣಕ್ಕೆ ಸೀಮಿತವಾಗಿದೆ. ಬಿಜೆಪಿ ಮುಸ್ಲಿಮರ ವಿರುದ್ಧ ಇದೆ ಎಂದು ದೂರಿದರು.

ಬಿಜೆಪಿ ಹಲಾಲ್ ಕಟ್ ವಿವಾದ ಎಬ್ಬಿಸಿ, ಹಲಾಲ್‌ ಮಾಂಸದ ಬಗ್ಗೆ ಜನರು ಕೆಟ್ಟ ದೃಷ್ಟಿಯಲ್ಲಿ ನೋಡುವಂತೆ ಮಾಡಲಾಗುತ್ತಿದೆ. ಬಿಜೆಪಿ ಹಲಾಲ್ ಕಮಿಷನ್ ಪಡೆಯುತ್ತಿದೆ. ಹಲಾಲ್‌ ಕಮಿಷನ್ ಪಡೆಯುತ್ತಿರುವ ಬಗ್ಗೆ ವಿಡಿಯೊ ಸಾಕ್ಷಿಗಳಿವೆ ಎಂದು ಓವೈಸಿ ಆರೋಪಿದರು.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಇಲ್ಲ. ನಮ್ಮ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದು ಹೇಳಿದರು.

ಎಐಎಂಐಎಂ ಬಿಜೆಪಿ ‘ಬಿ’ ಟೀಂ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಬಿಜೆಪಿ ಟೀಂ ಅಲ್ಲವೇ ಅಲ್ಲ. ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ, ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿಗೆ ಅವರ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಕಾರಣ. ಕರ್ನಾಟಕ, ಗೋವಾ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಓಡಿ ಹೋಗಿದ್ದಾರೆ ಎಂದು ಆರೋಪಿಸಿದರು.

ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರೇ ನಾನು ಜವಾಬ್ದಾರನಾ? ರಾಜಸ್ತಾನದ ಕಾಂಗ್ರೆಸ್‌ನಲ್ಲಿ ಈಗಲೂ ತಿಕ್ಕಾಟ ನಡೆಯುತ್ತಿವೆ, ಇದಕ್ಕೆಲ್ಲ ನಾವು ಕಾರಣರಲ್ಲ. ನಾವು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಕಳಪೆ ನಾಯಕತ್ವದಿಂದಲೇ ಮೋದಿ ಎರಡು ಬಾರಿ ಪ್ರಧಾನಿಯಾಗಿದ್ದು ಎಂದು ಓವೈಸಿ ಟೀಕಿಸಿದರು.

ನಾವು ಎಲ್ಲಿಯೂ ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪದೇ ಪದೇ ಪಾಕಿಸ್ತಾನ ಹೆಸರು ಉಲ್ಲೇಖ ಮಾಡ್ತಾರೆ, ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಪಾಕಿಸ್ತಾನ ಮೇಲೆ ಪ್ರೀತಿ ಏಕೆ ಇದೇ ಎಂಬುದು ಅವರಿಗೆ ಮಾತ್ರ ಗೊತ್ತು, ನನಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಯತ್ನಾಳಗೆ ಹೇಳಿ‌ಕೊಟ್ಟಿರಬಹುದು. ಅದಕ್ಕಾಗಿ ಪದೇ ಪದೇ ಪಾಕಿಸ್ತಾನ ಹೆಸರು ಹೇಳ್ತಾರೆ ಎಂದು ವಾಗ್ದಾಳಿ ಮಾಡಿದರು.

ಭಾರತದ ಭೂಭಾಗವನ್ನು ಚೀನಾ ಸೇನೆ ಅತಿಕ್ರಮಿಸಿದೆ. ಆದರೆ, ಪ್ರಧಾನಿ ಮೋದಿ ಅವರು ಚೀನಾಕ್ಕೆ ಏಕೆ ಎಚ್ಚರಿಕೆ ನೀಡುತ್ತಿಲ್ಲ. ಬಿಜೆಪಿಯವರು ಏಕೆ ಚೀನಾ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಯತ್ನಾಳ ಅವರ ಹೇಳಿಕೆಗಳೇ ಸಾಕ್ಷಿ. ಬಿಜೆಪಿ ಭ್ರಷ್ಟಾಚಾರಕ್ಕೆ ಕಾರಣ ಏನೆಂಬುದು ಯತ್ನಾಳ ಬಹಿರಂಗಪಡಿಸಬೇಕು ಎಂದರು.

ಸವಾಲು: ರಾಜ್ಯ ಸರ್ಕಾರ ಮದರಸಾಗಳ ಸಮೀಕ್ಷೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇವಲ ಒಂದು ಧರ್ಮ, ಸಮುದಾಯಕ್ಕೆ ಸೇರಿದ ಮದರಸಾಗಳ ಸರ್ವೆ ಮಾಡುವ ಬದಲು, ದೇಶಾದ್ಯಂತ ಆರ್‌ಎಸ್‌ಎಸ್‌ ನಡೆಸುತ್ತಿರುವ ಶಿಶುಮಂದಿರ, ಶಾಲೆಗಳು, ಕ್ರಿಶ್ಚಿಯನ್‌ ಮಿಷನರಿ ಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆ, ಕಾಲೇಜುಗಳ ಸ್ಥಿತಿಗತಿ ಬಗ್ಗೆಯೂ ಸಮಗ್ರ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT