ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ತಣಿಸಲು ಆರ್‌.ಅಶೋಕ ಯತ್ನ

Published 10 ಡಿಸೆಂಬರ್ 2023, 22:30 IST
Last Updated 10 ಡಿಸೆಂಬರ್ 2023, 22:30 IST
ಅಕ್ಷರ ಗಾತ್ರ

ಬೆಳಗಾವಿ: ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರ ಮೇಲಿನ ಶಾಸಕರ ಮುನಿಸು ಎರಡನೇ ವಾರವೂ ಮುಂದುವರಿಯಲಿದೆಯೇ ಎಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದೆ. ವಿಧಾನಸಭೆಯಲ್ಲಿ ತಮ್ಮ ಕಾರ್ಯ ವೈಖರಿ ಬಗ್ಗೆ ತಮ್ಮದೇ ಶಾಸಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ಅಶೋಕ ಅವರು, ಸಿಟ್ಟಿಗೆದ್ದಿರುವ ಹಲವರನ್ನು ಸಂಪರ್ಕಿಸಿ ಸಮಾಧಾನಪಡಿಸುವ ಕಸರತ್ತು ನಡೆಸಿದ್ದಾರೆ.

ಸದನದ ಒಳಗೆ ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನಿಲ್‌ಕುಮಾರ್, ಬಸನಗೌಡ ಪಾಟೀಲ ಯತ್ನಾಳ ಅವರು ಸರ್ಕಾರದ ವಿರುದ್ಧ ಆಕ್ರಮಣಕಾರಿ ನಡೆ ತೋರಿಸುವ ಮೂಲಕ ಅಶೋಕ ಅವರನ್ನು ಪೇಚಿಗೆ ಸಿಲುಕಿಸಿದ್ದರು. ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಅಶೋಕ ಅವರಿಗಿಂತ ತಾವು ಹೆಚ್ಚು ಸಮರ್ಥರು ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದರು. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಗಸಾಲೆಯಲ್ಲಿ ನೇರವಾಗಿ ಕಿಡಿ ಕಾರಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಅಶೋಕ ಅವರು ಸಿಟ್ಟಿಗೆದ್ದಿರುವ ಶಾಸಕರನ್ನು ಸಂಪರ್ಕಿಸಿ ಸಮಾಧಾನಪಡಿಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಸುನಿಲ್‌ಕುಮಾರ್‌, ಅಶ್ವತ್ಥನಾರಾಯಣ ಅವರನ್ನು ಸಂಪರ್ಕಿಸಿದ್ದಾರೆ. ‘ನಿಮ್ಮ ಕೈಬಿಡುವುದಿಲ್ಲ’ ಎಂದು ಯತ್ನಾಳ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಸಮಸ್ಯೆಗೆ ಮೂಲ ಕಾರಣ. ಕಲಾಪದ ಆರಂಭಕ್ಕೂ ಮೊದಲೇ ಚರ್ಚೆ ಮಾಡಿ ಯಾವ ವಿಷಯದಲ್ಲಿ ನಮ್ಮ ಕಾರ್ಯತಂತ್ರ ಏನಾಗಿರಬೇಕು ಎಂಬುದನ್ನು ಚರ್ಚಿಸಬೇಕು. ವಿರೋಧ ಪಕ್ಷದ ನಾಯಕ ಸ್ಥಾನ ಅವರಿಗೆ ಹೊಸದು. ಹೀಗಾಗಿ ಹಿರಿಯ ಶಾಸಕರ ಜತೆ ಚರ್ಚೆ ನಡೆಸುವುದು ಅಗತ್ಯ. ಶಾಸಕರು ಧರಣಿಗೆ ಹೊರಟಾಗ, ಇವರು ಸಭಾತ್ಯಾಗ ಮಾಡೋಣ ಎನ್ನುತ್ತಾರೆ. ಇದು ಮುಜುಗರಕ್ಕೆ ಕಾರಣವಾಗುತ್ತಿದೆ‘ ಎಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದ ಶಾಸಕರ ಹಿತವನ್ನು ರಕ್ಷಿಸುವುದರ ಜತೆಗೆ ಸರ್ಕಾರದ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ನಡೆದುಕೊಳ್ಳಬೇಕು. ಆಡಳಿತ ಪಕ್ಷದವರ ಬಗ್ಗೆ ಮೃದು ಧೋರಣೆಯ ಅಗತ್ಯವಿಲ್ಲ. ಅವರು ಇವೆಲ್ಲ ಲೋಪ ಸರಿಪಡಿಸಿಕೊಂಡಿದ್ದೇ ಆದರೆ ವಿರೋಧಪಕ್ಷದ ನಾಯಕರನ್ನು ಮೀರಿ ನಾವು ಹೆಜ್ಜೆ ಇಡುವ ಅವಶ್ಯಕತೆಯೇ ಉದ್ಧವಿಸುವುದಿಲ್ಲ’ ಎಂದು ಅವರು ಹೇಳಿದರು.

‘ಎರಡನೇ ವಾರದ ಕಲಾಪ ಹೆಚ್ಚು ಬಿಸಿಯೇರಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗುವುದು. ಈ ಸಂದರ್ಭದಲ್ಲಿ ಒಗ್ಗಟ್ಟಿನ ನಡೆ ಅತಿ ಮುಖ್ಯ. ಮೊದಲ ವಾರ ನಾವು ನಾಲ್ಕೈದು ಶಾಸಕರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೆವು.  ಮೊದಲ ಬಾರಿ ಆಯ್ಕೆ ಆಗಿ ಬಂದ ಶಾಸಕರಿಗೆ ತಮ್ಮ ಕ್ಷೇತ್ರದ ಸಮಸ್ಯೆಗಳೆಲ್ಲವೂ ಸದನದ ಒಳಗೇ ಇತ್ಯರ್ಥ ಆಗುತ್ತದೆೆ ಎಂಬ ಭಾವನೆ ಇರುತ್ತದೆ. ಎಲ್ಲವೂ ಇಲ್ಲೇ ಇತ್ಯರ್ಥ ಆಗುವುದಿಲ್ಲ ಎಂಬುದು ಅರ್ಥವಾಗಲು ಸ್ವಲ್ಪ ಸಮಯಬೇಕಾಗುತ್ತದೆ’ ಎಂದರು.

ಶಾಸಕಾಂಗ ಪಕ್ಷ ಸಭೆ?

ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ಸೋಮವಾರ ತೀರ್ಮಾನ ಆಗಲಿದೆ. ಆದರೆ ಶಾಸಕರಿಗೆ ಈ ಕುರಿತು ಸ್ಪಷ್ಟ ಮಾಹಿತಿ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT