ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಭಾಧ್ಯಕ್ಷರ ಕುರಿತ ಹೇಳಿಕೆ: ಜಮೀರ್ ವಜಾಗೆ ಆಗ್ರಹಿಸಿ ಬಿಜೆಪಿ–ಜೆಡಿಎಸ್‌ ಧರಣಿ

Published 11 ಡಿಸೆಂಬರ್ 2023, 16:00 IST
Last Updated 11 ಡಿಸೆಂಬರ್ 2023, 16:00 IST
ಅಕ್ಷರ ಗಾತ್ರ

ವಿಧಾನಸಭೆ: ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ಸಭಾಧ್ಯಕ್ಷ ಹುದ್ದೆಯ ಕುರಿತು ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ನೀಡಿರುವ ಹೇಳಿಕೆಯನ್ನು ವಿರೋಧಿಸಿ, ಅವರನ್ನು ಸಚಿವ ಸ್ಥಾನದಿಂದ  ವಜಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಸೋಮವಾರ ಧರಣಿ ನಡೆಸಿದರು.

ಪ್ರಶ್ನೋತ್ತರ ವೇಳೆ ಜಮೀರ್ ಪ್ರಶ್ನೆಯೊಂದಕ್ಕೆ ಉತ್ತರ ಹೇಳಲು ನಿಂತಾಗ ಬಿಜೆಪಿ ಸದಸ್ಯರು ಅದಕ್ಕೆ ಅವಕಾಶ ನೀಡಲಿಲ್ಲ. ‘ಜಮೀರ್ ಅವರಿಗೆ ಮಾತನಾಡಲು ಬಿಡುವುದಿಲ್ಲ’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. 

‘ಸಂವಿಧಾನದ ಹುದ್ದೆಗೆ  ಜಮೀರ್‌ ಅಗೌರವ ತೋರಿದರೂ ಕಾಂಗ್ರೆಸ್‌ ಪಕ್ಷವಾಗಲಿ, ರಾಜ್ಯ ಸರ್ಕಾರವಾಗಲಿ ಕ್ಷಮೆ ಕೇಳಿಲ್ಲ. ಸಭಾಧ್ಯಕ್ಷರೂ ಸುಮ್ಮನೆ ಇದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಜಮೀರ್‌ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲೇಬೇಕು‘ ಎಂದು ಒತ್ತಾಯಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಜಾಗ ಧಾವಿಸಿ, ಧರಣಿ ಆರಂಭಿಸಿದರು. ಆರಂಭದಲ್ಲಿ ಆರ್ಭಟದಲ್ಲೇ ಧರಣಿ, ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಸಂಜೆ ವೇಳೆ ದಣಿದು ಹೋಗಿದ್ದರು. ಸಂಜೆ 7.40ಕ್ಕೆ ಕಲಾಪ ಮುಂದೂಡುವ ಮುನ್ನ ಸಭಾಧ್ಯಕ್ಷ ಖಾದರ್ ಅವರು, ನಿಲುವಳಿ ಸೂಚನೆಗೆ ಮನವಿ ಕೊಟ್ಟಿದ್ದೀರಿ. ನಿಯಮ 69ರ ಅಡಿ ಚರ್ಚೆಗೆ ಅವಕಾಶ ಕೊಡುತ್ತೇನೆ. ಧರಣಿ ವಾಪಸ್ ತೆಗೆದುಕೊಂಡು, ನಿಮ್ಮ ಆಸನಗಳಿಗೆ ಹೋಗಿ ಎಂದು ಹೇಳಿದರು. ಅದಕ್ಕೆ ಒಪ್ಪಿದ ಬಿಜೆಪಿ ಸದಸ್ಯರು, ಧರಣಿ ವಾಪಸ್ ಪಡೆದರು.

ಜಮೀರ್ ವಜಾ ಮಾಡಿ:

ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು, ‘ಜಮೀರ್ ಅವರನ್ನು ವಜಾ ಮಾಡಿ’ ಎಂದು ಘೋಷಣೆಗಳನ್ನು ಆರಂಭಿಸಿದರು. ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

ಈ ಮಧ್ಯೆ ಸಭಾಧ್ಯಕ್ಷರು ಪ್ರಶ್ನೋತ್ತರ, ಮಸೂದೆಗಳ ಅಂಗೀಕಾರ ಮತ್ತು ಇತರ ಕಲಾಪವನ್ನು ನಡೆಸಿದರು. ಬಿಜೆಪಿ ಸದಸ್ಯರ ಘೋಷಣೆಗಳು ಮತ್ತು ಕೂಗಾಟ ಹೆಚ್ಚು ಫಲ ನೀಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಧರಣಿ ಕೈಬಿಡುವಂತೆ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.

ಬಿಜೆಪಿಯವರು ಗದ್ದಲ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಮಧ್ಯ ಪ್ರವೇಶಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್, ‘ಏಕಾಏಕಿ ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸುವುದು ಸರಿಯಲ್ಲ. ಬರಗಾಲದ ವಿಷಯ ಮತ್ತು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡದೇ ಈ ರೀತಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿ 10 ನಿಮಿಷಗಳ ಅವಧಿಗೆ ಕಲಾಪವನ್ನು ಮುಂದೂಡಿದರು.

ಖಾದರ್ ಅವರು ಬಿಜೆಪಿ ನಾಯಕರನ್ನು ತಮ್ಮ ಕೊಠಡಿಗೆ ಕರೆಸಿ ಸಂಧಾನ ನಡೆಸಿದರೂ ಫಲ ನೀಡಲಿಲ್ಲ. ‘ಜಮೀರ್ ಅವರ ವಜಾ ಆಗಲೇಬೇಕು’ ಎಂದು ಬಿಜೆಪಿ ಪಟ್ಟು ಹಿಡಿಯಿತು.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಜಮೀರ್ ಅಹಮದ್ ಅವರು ಪೀಠಕ್ಕೆ ಅಗೌರವ ಆಗುವ ಯಾವುದೇ ಮಾತುಗಳನ್ನು ಆಡಿಲ್ಲ. ಬಿಜೆಪಿಯವರು ರಾಜಕೀಯ ಮತ ಬೇಟೆಗಾಗಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಇದು ನಾಚಿಕೆಯ ಸಂಗತಿ. ಸಮಾಜಕ್ಕೆ ಬೆಂಕಿ ಇಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಧರಣಿಯಲ್ಲಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು, ‘ಇನ್ನು ಮುಂದೆ ಸದನದಲ್ಲಿ ಸಭಾಧ್ಯಕ್ಷರಿಗೆ ಅಲೈಕು ಸಲಾಂ, ಜೀ ಹುಜೂರ್‌, ಜಹಾಂಪನ ಎಂದೂ ಹೇಳಬೇಕಾಗುತ್ತದೆ’ ಎಂದು ವ್ಯಂಗ್ಯ ಮಾಡಿದರು.

‘ಸಭಾಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಒನ್‌ ಸೈಡ್‌ ಒನ್‌ ಸೈಡ್‌’, ‘ಖಾದರ್‌ ಸಾಬ್‌ ಜರಾ ಸುನೋ’, ‘ಜಮೀರ್ ವಜಾ ಮಾಡಿ ಖಾದರ್ ಮಂತ್ರಿ ಮಾಡಿ’ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರೆ, ‘ಜಮೀರ್‌ ಕರ್ನಾಟಕದ ಜಿನ್ನಾ. ಜಿನ್ನಾದ್ದೂ ಪೋಟೊ ಹಾಕಿಸಿ’ ಎಂದರು ಯತ್ನಾಳ.

ಕಳೆದ ವಾರ ಧರಣಿ ಮತ್ತು ಸಭಾತ್ಯಾಗದಲ್ಲಿ ಪಾಲ್ಗೊಳ್ಳದ ಶಾಸಕ ಎಸ್‌.ಟಿ.ಸೋಮಶೇಖರ್‌ ಸೋಮವಾರ ಧರಣಿಯಲ್ಲಿ ಭಾಗವಹಿಸಿದ್ದರು. ರಮೇಶ ಜಾರಕಿಹೊಳಿ ಕಲಾಪಕ್ಕೆ ಬಂದಿದ್ದರೂ ಧರಣಿಯ ವೇಳೆ ಹೊರ ಹೋದವರು ಮತ್ತೆ ಬರಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT