ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರೀಕ್ಷಾ ವ್ಯವಸ್ಥೆ ಹಾಳುಗೆಡವಿದ ಸರ್ಕಾರ: ಅರುಣ್‌ ಶಹಾಪುರ

Published 14 ಮೇ 2024, 15:14 IST
Last Updated 14 ಮೇ 2024, 15:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದೆ. ಶಿಕ್ಷಣ ಇಲಾಖೆಗೆ ಪರೀಕ್ಷೆಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದೇ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಅನಗತ್ಯವಾಗಿ ಗೊಂದಲಕ್ಕೆ ತಳ್ಳಿದೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ, ಬಿಜೆಪಿ ಮುಖಂಡ ಅರುಣ್‌ ಶಹಾಪುರ ಟೀಕಿಸಿದರು.

10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ತಲಾ ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಯಾವ ಪರೀಕ್ಷೆ, ಯಾರು ಬರೆದವರು, ಯಾರಿಂದ ಮೌಲ್ಯಮಾಪನ ಎಂಬ ದೊಡ್ಡ ಗೊಂದಲವಿದೆ. ಮೂರು ಪರೀಕ್ಷೆಗಳನ್ನು ಪುಕ್ಸಟ್ಟೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲೇಬೇಕು. ಮೊದಲ ಪರೀಕ್ಷೆಗೆ ₹410, ಎರಡನೇ ಪರೀಕ್ಷೆಗೆ ₹510, ಮೂರನೇ ಪರೀಕ್ಷೆಗೆ ₹710 ಪಾವತಿಸಬೇಕು. ಸರ್ಕಾರ ಪರೀಕ್ಷೆಯನ್ನು ಉದ್ಯಮವನ್ನಾಗಿ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಹಣ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ವರ್ಷದಲ್ಲಿ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನೇ ಹಾಳುಗೆಡವಿದೆ. ರಾಜ್ಯ ಪಠ್ಯಕ್ರಮದಡಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. 1 ಕೋಟಿ ಮಕ್ಕಳ ಭವಿಷ್ಯ ಅತಂತ್ರಕ್ಕೆ ತಳ್ಳುವ ಕೆಲಸ ನಡೆದಿದೆ. ಇಲಾಖೆ ನಿಭಾಯಿಸುವಲ್ಲಿ ಸಚಿವ ಮಧುಬಂಗಾರಪ್ಪ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಬಿಇಒ, ಡಿಡಿಪಿಐ ಮತ್ತು ಕಮಿಷನರ್‌ಗಳ ಮೂಲಕ ಒತ್ತಡ ಹೇರಿ ವೆಬ್‌ಕಾಸ್ಟಿಂಗ್‌ ನಡೆಸಲಾಯಿತು. ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಿದ್ದರಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ಸಿಟ್ಟಿಂಗ್ ಸ್ಕ್ವಾಡ್‌, ಫ್ಲೈಯಿಂಗ್‌ ಸ್ಕ್ವಾಡ್‌, ವೆಬ್‌ ಕಾಸ್ಟಿಂಗ್‌ ಮೂಲಕ 10ನೇ ತರಗತಿ ಪರೀಕ್ಷೆ ಎಂದರೆ ಅದು ಯುಪಿಎಸ್‌ಸಿ ಪರೀಕ್ಷೆಗಿಂತ ದೊಡ್ಡದೇ ಎಂದು ಅವರು ಪ್ರಶ್ನಿಸಿದರು.

5,8,9 ಮತ್ತು 11ನೇ ತರಗತಿ ಪರೀಕ್ಷೆಗಳೂ ಗೊಂದಲಕ್ಕೆ ಒಳಗಾದವು. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ವಿಚಾರ ವಿದ್ಯಾರ್ಥಿಗಳು, ಪಾಲಕರಿಗೆ ತಲೆ ನೋವಿನ ವಿಚಾರವಾಗಿ ಪರಿಣಮಿಸಿತು. ಹೈಕೋರ್ಟ್‌, ಸುಪ್ರೀಂಕೋರ್ಟ್‌, ವಿಭಾಗೀಯ ಪೀಠ ಮೆಟ್ಟಿಲು ಹತ್ತಿ ಸರ್ಕಾರ ಛೀಮಾರಿ ಹಾಕಿಸಿಕೊಂಡಿತು ಎಂದೂ ಟೀಕಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT