ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಕೈಬಿಟ್ಟ ಅತಿಥಿ ಉಪನ್ಯಾಸಕರು

ಗೌರವಧನ ಇನ್ನೂ ₹3,000 ಹೆಚ್ಚಳಕ್ಕೆ ಒಪ್ಪಿಗೆ; ಮಹಿಳೆಯರಿಗೆ ಮೂರು ತಿಂಗಳ ಮಾತೃತ್ವ ರಜೆ
Published 6 ಜನವರಿ 2024, 16:23 IST
Last Updated 6 ಜನವರಿ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಗೌರವಧನದಲ್ಲಿ ಇನ್ನೂ  ₹3,000 ವರೆಗೆ ಹೆಚ್ಚಳ ಹಾಗೂ ಮಹಿಳೆಯರಿಗೆ ಮಾತೃತ್ವ ರಜೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದು, ಮುಷ್ಕರ ಕೈಬಿಟ್ಟು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲು ಅತಿಥಿ ಉಪನ್ಯಾಸಕರು ಒಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಯವರು ಸಭೆ ನಡೆಸಿದರು. ಅತಿಥಿ ಉಪನ್ಯಾಸಕರ ಗೌರವಧನವನ್ನು ₹5,000ದವರೆಗೆ ಹೆಚ್ಚಿಸಲು ಕಳೆದ ವಾರ ನಿರ್ಧರಿಸಲಾಗಿತ್ತು. ₹ 8,000ಗಳವರೆಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಸಮಯದಲ್ಲಿ ಮೂರು ತಿಂಗಳವರೆಗೆ ವೇತನ ಸಹಿತ ಮಾತೃತ್ವ ರಜೆ ನೀಡಬೇಕೆಂಬ ಬೇಡಿಕೆಗೂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು. ಮುಷ್ಕರ ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡಿದರು.

‘ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರಕ್ಕೆ ಕಾಳಜಿ ಇದೆ. ಆದರೆ, ಸೇವಾ ಭದ್ರತೆ ಒದಗಿಸಬೇಕೆಂಬ ಬೇಡಿಕೆ ಈಡೇರಿಸಲು ಕಾನೂನು ತೊಡಕು ಇದೆ. ಆದ್ದರಿಂದ ಅದನ್ನು ಈಡೇರಿಸುವುದು ಅಸಾಧ್ಯ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಿದೆ’ ಎಂದರು.

ಹೆರಿಗೆ ರಜೆಗೆ ಒಪ್ಪಿಗೆ: ಮಹಿಳಾ ಅತಿಥಿ ಉಪನ್ಯಾಸಕರಿಗೆ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಮೂರು ತಿಂಗಳವರೆಗೆ ವೇತನಸಹಿತ ಹೆರಿಗೆ ರಜೆ ನೀಡಲು ಸರ್ಕಾರ ಒಪ್ಪಿಕೊಂಡಿದೆ.

ಕೌನ್ಸೆಲಿಂಗ್‌ ಕೈಬಿಟ್ಟು ಹಾಲಿ ಇರುವ ಸ್ಥಳದಲ್ಲೇ ಅತಿಥಿ ಉಪನ್ಯಾಸಕರು ಮುಂದುವರಿಯಲು ಅವಕಾಶ ನೀಡಬೇಕೆಂಬ ಬೇಡಿಕೆಗೂ ಸಮ್ಮತಿ ಸೂಚಿಸಿದೆ. ಇಚ್ಛೆ ಇರುವವರು ಹಾಲಿ ಇರುವ ಕಾಲೇಜಿನಲ್ಲೇ ಮುಂದುವರಿಯಬಹುದು. ಉಳಿದಂತೆ ಕಳೆದ ವಾರ ನಡೆದ ಸಭೆಯಲ್ಲಿ ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನು ಮುಂದುವರಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಎಸ್. ಶ್ರೀಕರ್‌, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT