ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ, ಸೋರಿಕೆ, ಕಳ್ಳತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ

Published 14 ಸೆಪ್ಟೆಂಬರ್ 2023, 10:06 IST
Last Updated 14 ಸೆಪ್ಟೆಂಬರ್ 2023, 10:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಅವರು ಈ ಸೂಚನೆ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ 19.2 ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚಿದೆ ಎಂದು ಮೆಚ್ವುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಇಷ್ಟಕ್ಕೆ ಸಮಾಧಾನಪಟ್ಟುಕೊಳ್ಳದೆ ತೆರಿಗೆ ವಂಚನೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ, ತೆರಿಗೆ ಸಂಗ್ರಹ ಗುರಿ ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಅದನ್ನು ಸಾಧಿಸಿ ತೋರಿಸಿ ಎಂದರು.

ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ15 ರಷ್ಟು ಮಾತ್ರ ಇದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ 9.4 ರಷ್ಟಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಶೇ 24ರ ಬೆಳವಣಿಗೆ ಗುರಿಯನ್ನು ನೀಡಲಾಗಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಈ ಗುರಿ ದಾಟಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಅಲದೆ, ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟಲು ನಿರ್ದೇಶನ ನೀಡಿದರು.

ಗುರಿಗಿಂತ ಹೆಚ್ಚಿನ ಸಾಧನೆಯಾಗಬೇಕು. ಹಿಂದೆ ಉಳಿದವರು ಎಲ್ಲ ಪ್ರಯತ್ನ ಮಾಡಬೇಕು. ಜಾಗೃತ ದಳದವರು ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ. ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯವಾಗಿರುವಂತೆ ಕ್ರಮ ವಹಿಸಿ ಎಂದರು.

ತೆರಿಗೆ ಕಳ್ಳತನ ತಡೆಯುವುದಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಪ್ರಯತ್ನದಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರಲು ಸಾಧ್ಯ. ಅನೇಕ ಭಾಗಗಳಲ್ಲಿ ಅನೇಕ ಉತ್ಪನ್ನಗಳಲ್ಲಿ ತೆರಿಗೆ ವಂಚನೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಸಾಮೂಹಿಕ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಹಣಕಾಸು ಇಲಾಖೆ ಹೆಚ್ಚುವರಿಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಪಿ.ಸಿ. ಜಾಫರ್‌ ಹಾಗೂ ಎಂ.ಟಿ. ರೇಜು, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಸೀರ್‌ ಅಹ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT