ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ: ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿಳಂಬ

ಕಾಂಗ್ರೆಸ್‌ನಿಂದ ನಜೀರ್‌ ಅಹಮದ್, ವೇಣುಗೋಪಾಲ್‌?
Last Updated 21 ಸೆಪ್ಟೆಂಬರ್ 2018, 19:07 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಮೂರು ಸ್ಥಾನಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೇ ದಿನವಾದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಹೆಸರು ಅಂತಿಮಗೊಳಿಸಿಲ್ಲ.

ತೆರವಾಗಿರುವ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಇಟ್ಟುಕೊಂಡು ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಚುನಾವಣಾ ಆಯೋಗ ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಸಲು ಅಧಿಸೂಚನೆಗಳನ್ನು ಹೊರಡಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ 118 ಶಾಸಕರ ಬಲವನ್ನು ಹೊಂದಿರುವುದರಿಂದ ಮೂರೂ ಸ್ಥಾನಗಳು ದೋಸ್ತಿ ಪಕ್ಷಗಳಿಗೆ ಸುಲಭದ ತುತ್ತಾಗಿವೆ. ಬಿಜೆಪಿಗೆ ಒಂದು ಸ್ಥಾನವನ್ನೂ ಗೆಲ್ಲುವುದು ಕಷ್ಟವಾಗಿದೆ. ಆದ್ದರಿಂದ ನಾಮಕಾವಸ್ತೆ ಎಂಬಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆದರೆ, ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಅಂತಿಮಗೊಳಿಸಿಲ್ಲ.

ರಾಜ್ಯ ಕಾಂಗ್ರೆಸ್‌ ನಾಯಕರು ಈಗಾಗಲೇ ಅಭ್ಯರ್ಥಿಗಳ ಪಟ್ಟಿಯೊಂದನ್ನು ಹೈಕಮಾಂಡ್‌ಗೆ ನೀಡಿದೆ. ನಜೀರ್‌ ಅಹಮದ್‌ ಮತ್ತು ಎಂ.ಸಿ.ವೇಣುಗೋಪಾಲ್‌ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಲೇ ಹೆಸರುಗಳನ್ನು ಬಹಿರಂಗಗೊಳಿಸಿದರೆ, ಅಸ ಮಾಧಾನದಿಂದ ಶಾಸಕರು ಅಡ್ಡ ಮತದಾನ ಮಾಡಬಹುದು ಎಂಬ ಕಾರಣಕ್ಕೆ ಹೆಸರನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಅಲ್ಲದೆ, ಮುಖ್ಯಮಂತ್ರಿ ಚಂದ್ರು, ಪ್ರಕಾಶ್‌ ರಾಥೋಡ್‌ ಅಥವಾ ವಿ.ಆರ್‌.ಸುದರ್ಶನ್‌ ಅವರನ್ನು ನಾಮಕರಣ ಮಾಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ಬರಗೂರು ರಾಮಚಂದ್ರಪ್ಪ ಅವರ ಬದಲಿಗೆ ಸಿದ್ದರಾಮಯ್ಯ ಒತ್ತಡದ ಮೇರೆಗೆ ಚಂದ್ರುಗೆ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಜೆಡಿಎಸ್‌ನಲ್ಲಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮಾತುಕತೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ. ವೈ.ಎಸ್‌.ವಿ.ದತ್ತ, ರಮೇಶ್‌ ಬಾಬು ಅವರ ಹೆಸರುಗಳು ಪ್ರಧಾನವಾಗಿ ಕೇಳಿ ಬಂದಿದೆ. ವಿಧಾನಪರಿಷತ್ತಿನಲ್ಲಿ ಸದ್ಯಕ್ಕೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವವರು ಇಲ್ಲ. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಶನಿವಾರ, ಭಾನುವಾರ ಸರ್ಕಾರಿ ರಜೆ ಇರುವುದರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೋಮವಾರ ಒಂದೇ ದಿನ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT