ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಕಮಲ ಪಾಳಯದ ಅಭ್ಯರ್ಥಿಗಳ ಪಟ್ಟಿ ಪ್ರಕಟ
Published 11 ಮೇ 2024, 16:09 IST
Last Updated 11 ಮೇ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ವಿಧಾನ ಪರಿಷತ್‌ಗೆ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ. ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಿಜೆಪಿಯು ಒಂದು ಕ್ಷೇತ್ರವನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಅಭ್ಯರ್ಥಿಗಳ ಹೆಸರುಗಳನ್ನು ಶನಿವಾರ ರಾತ್ರಿ ಪ್ರಕಟಿಸಿದೆ. 

ಜೂನ್‌ 3ರಂದು ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಂಗಳೂರು ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ಈ ಪೈಕಿ ಹಾಲಿ ಸದಸ್ಯರಾದ ಅ.ದೇವೇಗೌಡ ಹಾಗೂ ವೈ.ಎ.ನಾರಾಯಣಸ್ವಾಮಿ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ. ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ ಅವರು ನೈರುತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರು. ಈ ಬಾರಿ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಈ ವರ್ಷದ ಮಾರ್ಚ್‌ 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರನ್ನು ಕೈ ಪಾಳಯಕ್ಕೆ ಕಣಕ್ಕೆ ಇಳಿಸಲಿದೆ.

ಈ ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಜೆಡಿಎಸ್‌ ನಾಯಕರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದರು. ಇದಕ್ಕೆ ವರಿಷ್ಠರು ಒಪ್ಪಿಲ್ಲ. ಈ ಕ್ಷೇತ್ರಕ್ಕೆ ಮೈಸೂರು ವಿವಿಯ ಸಿಂಡಿಕೇಟ್‌ ಮಾಜಿ ಸದಸ್ಯ ಈ.ಸಿ.ನಿಂಗರಾಜು ಅವರು ಬಿಜೆಪಿಯ ಅಭ್ಯರ್ಥಿ. 

ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ಲೈಂಗಿಕ ಹಗರಣವು ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಬೇಡ ಎಂದು ಪಕ್ಷದ ಕೆಲವು ನಾಯಕರು ಪ್ರತಿಪಾದಿಸಿದ್ದರು. ಈ ಮಧ್ಯೆ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಚರ್ಚೆ ನಡೆಸಿ, ಪ್ರಜ್ವಲ್‌ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು. ಶಾ ಅವರು ಎರಡೂ ಪಕ್ಷಗಳ ಮಧ್ಯೆ ಮೈತ್ರಿ ಮುಂದುವರೆಸುವ ಬಗ್ಗೆ ಸೂಚನೆ ನೀಡಿದ್ದರು. 

ಬಿಜೆಪಿ ಅಭ್ಯರ್ಥಿಗಳು 

ಬೆಂಗಳೂರು ಪದವೀಧರರ ಕ್ಷೇತ್ರ: ಅ.ದೇವೇಗೌಡ 

ಆಗ್ನೇಯ ಶಿಕ್ಷಕರ ಕ್ಷೇತ್ರ: ವೈ.ಎ.ನಾರಾಯಣಸ್ವಾಮಿ 

ಈಶಾನ್ಯ ಪದವೀಧರರ ಕ್ಷೇತ್ರ: ಅಮರನಾಥ ಪಾಟೀಲ

ನೈರುತ್ಯ ಪದವೀಧರರ ಕ್ಷೇತ್ರ: ಧನಂಜಯ ಸರ್ಜಿ 

ದಕ್ಷಿಣ ಶಿಕ್ಷಕರ ಕ್ಷೇತ್ರ: ಈ.ಸಿ.ನಿಂಗರಾಜು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT