ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ತವರಿಗೆ ಮರಳುವವರ ಸಂಖ್ಯೆ ಹೆಚ್ಚಳ

ಹೊರ ರಾಜ್ಯದಿಂದ 144 ಮಂದಿ, ಹೊರ ಜಿಲ್ಲೆಯಿಂದ ಅಂದಾಜು 4 ಸಾವಿರ ಜನರ ಆಗಮನ!
Last Updated 10 ಮೇ 2020, 4:15 IST
ಅಕ್ಷರ ಗಾತ್ರ

ಮಡಿಕೇರಿ: ವ್ಯಾಪಾರ, ವಿದ್ಯಾಭ್ಯಾಸ, ನೆಂಟರಿಷ್ಟರ ಮನೆಗೆ ತೆರಳಿದ್ದವರು ಲಾಕ್‌ಡೌನ್‌ನಿಂದ ಹೊರ ರಾಜ್ಯ, ಹೊರ ಜಿಲ್ಲೆಯಲ್ಲೇ ಸಿಲುಕಿಕೊಂಡಿದ್ದ ಕೊಡಗಿನ ಜನರು ಜಿಲ್ಲೆಗೆ ಮರಳುತ್ತಿದ್ದಾರೆ. ಮೇ 5ರಿಂದ ಕೊಡಗು ಜಿಲ್ಲೆಯ ಗಡಿ ಗ್ರಾಮಗಳಾದ ಕೊಪ್ಪ ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ ಮೂಲಕ ಜಿಲ್ಲೆ ಪ್ರವೇಶಿಸುತ್ತಿದ್ದು ಅವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ.

ಮಹಾರಾಷ್ಟ್ರ, ಗುಜರಾತ್‌, ದೆಹಲಿ, ತಮಿಳುನಾಡು ಹಾಗೂ ರಾಜಸ್ತಾನ ರಾಜ್ಯಗಳು ಹೈರಿಸ್ಕ್‌ ಪಟ್ಟಿಯಲ್ಲಿವೆ. ಅಲ್ಲಿಂದ ಬರುವವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಅದಕ್ಕಾಗಿಯೇ ಜಿಲ್ಲೆಯ ಹಾಸ್ಟೆಲ್‌, ವಸತಿ ಶಾಲೆಗಳನ್ನು ಗುರುತಿಸಲಾಗಿದೆ.

ಮೇ 5ರಿಂದ ಇದುವರೆಗೂ 144 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರಿಗೆ ಜಿಲ್ಲಾಡಳಿತವೇ ಊಟದ ವ್ಯವಸ್ಥೆ ಮಾಡಿದೆ. ಹಾಸ್ಟೆಲ್‌ಗಳಲ್ಲಿ ಊಟ ತಯಾರು ಮಾಡಲಾಗುತ್ತಿದೆ.

ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ ಮಾಡಲು ಶುಕ್ರವಾರ ಮಧ್ಯಾಹ್ನ ಆದೇಶದ ಬಂದಿದ್ದು, ಮನೆಗೆ ಹೋದವರನ್ನು ವಾಪಸ್‌ ‘ಸಾಂಸ್ಥಿಕ ಸಂಪರ್ಕ ತಡೆ’ ಕೇಂದ್ರಕ್ಕೆ ಕರೆತರಲಾಗುತ್ತಿದೆ. ಸೇವಾಸಿಂಧು ವೆಬ್‌ಸೈಟ್‌ನಲ್ಲಿ 600 ಮಂದಿ, ಹೊರ ರಾಜ್ಯದಿಂದ ಕೊಡಗಿಗೆ ಬರಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೊರ ಜಿಲ್ಲೆಯಿಂದಲೂ ಕೊಡಗಿಗೆ

ಇನ್ನು ಹೊರ ಜಿಲ್ಲೆಯಿಂದಲೂ ಕೊಡಗಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕುಶಾಲನಗರದ ಚೆಕ್‌ಪೋಸ್ಟ್ ಕಡೆಯಿಂದ ಜಿಲ್ಲೆಯ ಒಳಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಗೇಟ್‌ ಮೂಲಕವೇ 3 ಸಾವಿರ ಜನರು ಒಳಕ್ಕೆ ಬಂದಿದ್ದರೆ, ಸಂಪಾಜೆ ಚೆಕ್‌ಪೋಸ್ಟ್‌ ಮೂಲಕ 1 ಸಾವಿರ ಜನರು ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊರ ಜಿಲ್ಲೆಯಿಂದ ಬಂದವರನ್ನು ಮನೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ. ಆದರೆ, ಹೊರ ರಾಜ್ಯದಿಂದ ಬಂದವರ ಕೈಗೆ ಮೊಹರು (ಸೀಲ್‌) ಹಾಕಿ, ಸೀದಾ ಕ್ವಾರಂಟೈನ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ, ಬೀದರ್‌, ವಿಜಯಪುರ, ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಸಿರು ವಲಯದಲ್ಲಿ ಆತಂಕ

ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಕೋವಿಡ್‌ 19 ಸೋಂಕು ಪ್ರಕರಣಗಳಿಲ್ಲ. ಜಿಲ್ಲೆಯು ಹಸಿರು ವಲಯದಲ್ಲಿದ್ದು ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಕೃಷಿ ಚಟುವಟಿಕೆ, ಆರ್ಥಿಕ ಚಟುವಟಿಕೆಗೆ ವಿನಾಯಿತಿ ನೀಡಲಾಗಿದೆ. ಜಿಲ್ಲೆಯ ಒಳಗೇ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ.

ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಆತಂಕ ತಂದೊಡ್ಡಿದೆ. ಜಿಲ್ಲೆಯು ಹಸಿರು ವಲಯದ ವ್ಯಾಪ್ತಿಯಲ್ಲೇ ಉಳಿಯುವುದೇ ಎಂಬ ಸಂಶಯವೂ ಕಾಡಲಾರಂಭಿಸಿದೆ.

ಮಾರ್ಚ್‌ 15ರಿಂದ ಇದುವರೆಗೂ ಕೊಡಗು ಜಿಲ್ಲಾಡಳಿತ ಬಹಳ ಎಚ್ಚರಿಕೆ ಹೆಜ್ಜೆಯನ್ನಿಟ್ಟು ಕೆಲಸ ಮಾಡಿದೆ. ಕೊರೊನಾ ವ್ಯಾಪಿಸದಂತೆ ಅಧಿಕಾರಿಗಳು ಶ್ರಮಿಸಿದ್ದಾರೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಹಗಲಿರುಳು ಕೆಲಸ ಮಾಡಿ ಅನಾಹುತ ತಪ್ಪಿಸಿದ್ದಾರೆ. ಜಿಲ್ಲೆ ಜನರೂ ಸಹಕಾರ ನೀಡಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರೂ ಮನೆಯಿಂದ ಹೊರಗೆ ಬಾರದ ಮನೆಯಲ್ಲಿ ಇರಬೇಕು. ಆಗ ಮಾತ್ರ ಕೊಡಗಿಗೆ ಮತ್ತಷ್ಟು ಯಶಸ್ಸು ಸಿಗಲು ಸಾಧ್ಯವೆಂದು ಜನರು ಹೇಳುತ್ತಾರೆ.

ಕೋವಿಡ್‌ 19 ಅಂಕಿಅಂಶಗಳು
**********************
* 892 – ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ ಪ್ರಕರಣಗಳು
* 829 – ನೆಗೆಟಿವ್‌ ವರದಿ ಬಂದ ಪ್ರಕರಣಗಳು
* 62 – ‍ಪ್ರಯೋಗಾಲಯದ ವರದಿ ನಿರೀಕ್ಷೆಯಲ್ಲಿ ಪ್ರಕರಣಗಳು
* 50 – ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಿರುವ ಪ್ರಕರಣಗಳು
* 1 – ಜಿಲ್ಲೆಯಲ್ಲಿ ಗುಣವಾದ ಪ್ರಕರಣ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT