ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ ಸಮೀಕ್ಷೆಗೆ ಬಂತು ಡ್ರೋನ್ ಸರ್ವೆ..! ರಾಜ್ಯದಲ್ಲಿ ಮೊದಲ ಪ್ರಯೋಗ ಯಶಸ್ವಿ

ಕೃಷಿ ಇಲಾಖೆ ಒತ್ತಡ ಕಡಿಮೆ
Last Updated 6 ಸೆಪ್ಟೆಂಬರ್ 2018, 11:08 IST
ಅಕ್ಷರ ಗಾತ್ರ

ಕೊಪ್ಪಳ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಶೇ 75ರಷ್ಟು ಬೆಳೆಗಳು ಒಣಗಿದ್ದು, ಡ್ರೋನ್ ಸರ್ವೆ ಮೂಲಕ ಪರಿಶೀಲನೆ ನಡೆದಿದ್ದು, ರೈತರಿಗೆ ವರದಾನವಾಗಿದೆ.

ಕೃಷಿ ಇಲಾಖೆ ಈ ಮೊದಲಿನಿಂದಲು ಅನುಸರಿಸಿಕೊಂಡು ಬಂದಿದ್ದ ಹಳೆಯ ಮಾದರಿ ವ್ಯವಸ್ಥೆಗೆ ಹೆಚ್ಚು ದಿನ ಹಿಡಿಯುತ್ತಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯ್ತಿ ಸಿಬ್ಬಂದಿ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಷ್ಟರ ಹೊತ್ತಿಗೆ ಎರಡನೇ ಹಂಗಾಮು ಮುಗಿದಿರುತ್ತಿತ್ತು.

ಆದರೆ ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಜ್ಞರು ನೀಡಿದ ಸಲಹೆ ಮೇರೆಗೆ ಈಗ ಡ್ರೋನ್ ಸರ್ವೆ ಕಾರ್ಯ ನಡೆಯುತ್ತಿದ್ದು, ಬೆಳೆ ಹಾನಿ ಪರಿಹಾರ ಸಕಾಲದಲ್ಲಿ ರೈತರಿಗೆ ದೊರೆಯಲಿದೆ ಎಂಬ ಆಶಾ ಭಾವನೆ ಮೂಡಿದೆ.

ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ 'ಡ್ರೋನ್ಸಮೀಕ್ಷೆ ಒಂದು ವೈಜ್ಞಾನಿಕ ವಿಧಾನವಾಗಿದ್ದು, ಕಡಿಮೆ ಅವಧಿಯಲ್ಲಿ ಪ್ರದೇಶವಾರು ಎಲ್ಲ ಮಾಹಿತಿಗಳನ್ನು ನಿಖರವಾಗಿ ತಿಳಿಯಲು ಸಾಧ್ಯ. ಅಲ್ಲದೆ ಬೆಳೆ ಒಣಗಿ ಹತ್ತು ದಿನಗಳ ನಂತರ ಮಳೆ ಬಂದರೆ ಹಸಿರು ಚಿಗಿತು ಬರವೇ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಉಂಟಾಗುತ್ತದೆ. ಆದ್ದರಿಂದ ಅಂಕಿ, ಅಂಶ, ಸಮಯ, ಪ್ರದೇಶ ಸೇರಿದಂತೆ ಚಿತ್ರೀಕರಣ ಮಾಡುವುದರಿಂದ ಹಾನಿಯ ಅಂದಾಜು ದೊರೆಯುತ್ತದೆ' ಎನ್ನುತ್ತಾರೆ.

'ಆದರೆ ಇದರಿಂದ ನೇರವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಬರುವುದಿಲ್ಲ. ಇದು ಸಾಕ್ಷಿ ಮಾತ್ರ. ಮತ್ತೆ ಇಲಾಖೆಯಲ್ಲಿ ಅಂಕಿ-ಅಂಶ ಸಿದ್ಧಪಡಿಸಿ ಸರ್ಕಾರಕ್ಕೆ ನಾವು ಶಿಫಾರಸ್ಸು ಮಾಡಬೇಕು' ಎಂದು ಹೇಳುತ್ತಾರೆ.

ಮೊದಲು ರೈತರ ಹೊಲಕ್ಕೆ ತೆರಳಿ ಅಧ್ಯಯನ ನಡೆಸಿ ಬರಬೇಕಾಗುತ್ತಿತ್ತು. ಸಮಯ, ಹಣ ಕೂಡಾ ವ್ಯರ್ಥ್ಯವಾಗುತ್ತಿತ್ತು. 100 ಗ್ರಾಮಗಳಿದ್ದರೆ ವಿವಿಧ ಭಾಗದ 10 ಗ್ರಾಮಗಳ ಆಯ್ಕೆ ಮಾಡಿ ಡ್ರೋನ್ಮೂಲಕ ಸಮೀಕ್ಷೆ ನಡೆಸಿದರೆ ಅಲ್ಲಿನ ಪರಿಸ್ಥಿತಿಈಗ ನಿಖರವಾಗಿ ತಿಳಿಯುತ್ತಿದೆ ಎನ್ನುತ್ತಾರೆ.

ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಕಳೆದ ಎಂಟು ದಿನಗಳಿಂದ ಸಮೀಕ್ಷೆ ನಡೆಯುತ್ತಿದ್ದು, ಕೇಂದ್ರ ಅಧ್ಯಯನ ತಂಡ ಶೀಘ್ರದಲ್ಲಿ ಜಿಲ್ಲೆಗೆ ಬರಲಿದೆ. ಅಲ್ಲಿಯೂ ಡ್ರೋನ್ ಸಾಕ್ಷಿ ಆಗಲಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಒಂದು ಪ್ರದೇಶ ಪರ ಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರ ಐದು ಮಾನದಂಡಗಳನ್ನು ನಿಗದಿ ಪಡಿಸಿದೆ. ಶೇ 50ರಷ್ಟು ತೇವಾಂಶ ಕೊರತೆ, ಮಳೆ ಕೊರತೆ,ಬೆಳೆ ಹಾನಿ,ಅಂತರ್ಜಲ ಕೊರತೆ, ಅಂಕಿ-ಅಂಶಗಳ ಆಧಾರದ ಮೇಲೆ ಬರ ಘೋಷಣೆ ಮಾಡಲಾಗುತ್ತಿದೆ. ಈ ಎಲ್ಲ ಅಂಶಗಳು ಜಿಲ್ಲೆಯಲ್ಲಿ ಇದ್ದರೂ ಇನ್ನೂ ಬರ ಘೋಷಣೆ ಮಾಡದೇ ಇರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT