ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌ ಲಾಕರ್‌ನಲ್ಲಿ ಹಣ, ಆಭರಣ ಪತ್ತೆ

ಐ.ಟಿಗೆ ಮಾಹಿತಿ ನೀಡಿದ ಬೌರಿಂಗ್‌ ಆಡಳಿತ ಮಂಡಳಿ
Last Updated 21 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಮೂರು ಲಾಕರ್‌ಗಳಲ್ಲಿ ರಹಸ್ಯವಾಗಿ ಇಡಲಾಗಿದ್ದ ₹ 3.90 ಕೋಟಿ ನಗದು, 7.90 ಕೋಟಿ ಮೌಲ್ಯದ ವಜ್ರದ ಆಭರಣ, ಭಾರಿ ಬೆಲೆ ಬಾಳುವ ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಹಾಗೂ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

₹ 2000 ಮುಖಬೆಲೆಯ 3.73 ಕೋಟಿ ಹಾಗೂ ₹ 500 ಮುಖಬೆಲೆಯ 17 ಲಕ್ಷ ನಗದು, 650 ಗ್ರಾಂ ಚಿನ್ನ, ಸಹಿ ಮಾಡಿರುವ 10 ಖಾಲಿ ಚೆಕ್‌ ಪುಸ್ತಕಗಳು, ದೇವನಹಳ್ಳಿ, ಬೇಲೂರು ಸುತ್ತಮುತ್ತಲ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದ ಡಜನ್‌ಗೂ ಹೆಚ್ಚು ಫೈಲ್‌ಗಳನ್ನು ಜಪ್ತಿ ಮಾಡಲಾಗಿದೆ.ಕೆಲವು ಚೆಕ್‌ಗಳಲ್ಲಿ ₹ 50 ಕೋಟಿ, ₹ 30 ಕೋಟಿ ಎಂದು ನಮೂದಿಸಲಾಗಿದೆ.

ಇವು ಅವಿನಾಶ್‌ ಅಮರಲಾಲ್‌ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಸೇರಿದ್ದು. ಶಾಂತಿ ನಗರದಲ್ಲಿ ಅವರು ಟೈರ್‌ ಅಂಗಡಿ ಹೊಂದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ, ಉದ್ಯಮಿಗೆ ಸೇರಿರುವ ಬೆಂಗಳೂರು ಮತ್ತು ಮಂಗಳೂರಿನ ಮನೆಗಳ ಮೇಲೂ ಐ.ಟಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಡಳಿತ ಮಂಡಳಿ ಕೊಟ್ಟ ಮಾಹಿತಿಯಿಂದಲೇ ಪ್ರಕರಣ ಬಯಲಿಗೆ ಬಂದಿದೆ. ಈಚಿನ ವರ್ಷಗಳಲ್ಲಿ ಐ.ಟಿ. ಕಣ್ಣಿಗೆ ಬಿದ್ದಿರುವ ಅತೀ ದೊಡ್ಡ ಪ್ರಕರಣ ಇದಾಗಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳ ಜೊತೆಗೂ ಅವಿನಾಶ್‌ ಅವರಿಗೆ
ಸಂಪರ್ಕ ಇರಬಹುದು ಎಂದು ಶಂಕಿಸಲಾಗಿದೆ.

ಲಾಕರ್‌ಗಳನ್ನು ನವೀಕರಿಸಿಕೊಳ್ಳುವಂತೆ ಕ್ಲಬ್‌ ಆಡಳಿತ ಮಂಡಳಿ ಫೆಬ್ರುವರಿಯಲ್ಲಿ ಸದಸ್ಯರಿಗೆ ನೋಟಿಸ್‌ ಕಳುಹಿಸಿತ್ತು. ಜುಲೈ ಮೊದಲ ವಾರ ಕೊನೆಯ ನೋಟಿಸ್‌ ನೀಡಿತ್ತು. ಜುಲೈ 16ರೊಳಗಾಗಿ ನವೀಕರಣ ಮಾಡಿಕೊಳ್ಳದ ಸದಸ್ಯರ ಲಾಕರ್‌ಗಳನ್ನು ಬಲವಂತವಾಗಿ ತೆರೆಯುವುದಾಗಿಯೂ ಹೇಳಿತ್ತು. ಆದರೂ ನವೀಕರಣ ಮಾಡಿಕೊಳ್ಳದ ಲಾಕರ್‌ಗಳನ್ನು ತೆರೆಯುವ ಪ್ರಕ್ರಿಯೆ ಆರಂಭಿಸಲಾಗಿತ್ತು.

ಗುರುವಾರ, 69, 71 ಮತ್ತು 78ನೇ ಸಂಖ್ಯೆಯ ಲಾಕರ್‌ಗಳನ್ನು ತೆರೆದಾಗ ಐದು ಚೀಲಗಳು ಪತ್ತೆಯಾದವು. ಅವುಗಳಲ್ಲಿ ಹಣ, ಆಭರಣ, ಖಾಲಿ ಚೆಕ್‌ ಪುಸ್ತಕಗಳು, ಕಾಗದ ಪತ್ರಗಳನ್ನು ಇಡಲಾಗಿತ್ತು. ಕೂಡಲೇ ಕ್ಲಬ್‌ ಆಡಳಿತ ಮಂಡಳಿಯು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಅವರಿಗೆ ವಿಷಯ ತಿಳಿಸಿತು. ಅವರು ಸಂಬಂಧಪಟ್ಟ ಠಾಣೆಯ ಪೊಲೀಸ್‌ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದರು. ಅವರ ಸಮ್ಮುಖದಲ್ಲಿ ವಿಡಿಯೊ ಮಾಡಿ, ಚೀಲಗಳನ್ನು ಬೀರುವಿನಲ್ಲಿಟ್ಟು ಸೀಲ್‌
ಮಾಡಿಸಲಾಯಿತು.

ಶುಕ್ರವಾರ ಬೆಳಿಗ್ಗೆ ಪೊಲೀಸರ ಸಲಹೆಯಂತೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ತಲುಪಿಸಲಾಯಿತು.

ಹಣ ಇಟ್ಟುಕೊಳ್ಳಿ, ಫೈಲ್‌ ಕೊಡಿ: ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಲಾಕರ್‌ಗಳನ್ನು ತೆರೆದ ಸುದ್ದಿ ತಿಳಿಯುತ್ತಿದ್ದಂತೆ ಅವಿನಾಶ್‌ ಅಮರಲಾಲ್‌, ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ಅವರನ್ನು ಭೇಟಿ ಮಾಡಿ ಚೀಲಗಳನ್ನು ಕೊಡುವಂತೆ ಮನವಿ ಮಾಡಿದರು.

ಈಗಾಗಲೇ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿರುವುದರಿಂದ ಇಲಾಖೆಯನ್ನು ಸಂಪರ್ಕಿಸುವಂತೆ ಶ್ರೀಕಾಂತ್‌ ಸಲಹೆ ನೀಡಿದರು. ಅಲ್ಲಿಂದ ಕದಲದ ಅಮರಲಾಲ್‌, ‘ಬೇಕಾದರೆ ಹಣ, ಆಭರಣವನ್ನು ನೀವೇ ಇಟ್ಟುಕೊಳ್ಳಿ. ಫೈಲ್‌ಗಳನ್ನು ಮಾತ್ರ ಹಿಂತಿರುಗಿಸಿ’ ಎಂದು ಪರಿಪರಿಯಾಗಿ ಬೇಡಿದರು. ಅವರ ಮಾತಿಗೆ ಕಾರ್ಯದರ್ಶಿ ಕಿವಿಗೊಡಲಿಲ್ಲ ಎನ್ನಲಾಗಿದೆ.

ಕೆಲವು ಪ್ರಭಾವಿ ವ್ಯಕ್ತಿಗಳ ಮೂಲಕವೂ ಶ್ರೀಕಾಂತ್‌ ಅವರ ಮೇಲೆ ಅವಿನಾಶ್‌ ಒತ್ತಡ ತಂದರು. ಅದಕ್ಕೂ ಜಗ್ಗದ ಕಾರ್ಯದರ್ಶಿ, ಕರೆಗಳನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದರು ಎಂದು ಗೊತ್ತಾಗಿದೆ.

ರಹಸ್ಯ ಬಯಲಾಗಿದ್ದು ಹೇಗೆ?: ಕ್ಲಬ್‌, ಆಟವಾಡಲು ಬರುವ ಸದಸ್ಯರ ಅನುಕೂಲಕ್ಕಾಗಿ ಲಾಕರ್‌ ಸೌಲಭ್ಯ ಒದಗಿಸಿದೆ. ಟೆನಿಸ್‌, ಬ್ಯಾಡ್ಮಿಂಟನ್‌ ಕೋರ್ಟ್‌, ಬಿಲಿಯರ್ಡ್ಸ್‌ ರೂಮ್‌, ಕಾರ್ಡ್‌ ರೂಂನಲ್ಲಿ 672 ಲಾಕರ್‌ಗಳಿವೆ. ಇವುಗಳಲ್ಲಿ ಸದಸ್ಯರು ಟೀ ಶರ್ಟ್‌, ಶೂ, ರ‍್ಯಾಕೆಟ್‌ ಮೊದಲಾದ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಶುಲ್ಕ ನೀಡಿ ಈ ಲಾಕರ್‌ಗಳನ್ನು ಪ್ರತಿ ವರ್ಷ ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು.

ಹಣ ಇಟ್ಟುಕೊಳ್ಳಿ, ಫೈಲ್‌ ಕೊಡಿ

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಲಾಕರ್‌ಗಳನ್ನು ತೆರೆದ ಸುದ್ದಿ ತಿಳಿಯುತ್ತಿದ್ದಂತೆ ಅವಿನಾಶ್‌ ಅಮರಲಾಲ್‌, ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ಅವರನ್ನು ಭೇಟಿ ಮಾಡಿ ಚೀಲಗಳನ್ನು ಕೊಡುವಂತೆ ಮನವಿ ಮಾಡಿದರು.

ಈಗಾಗಲೇ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿರುವುದರಿಂದ ಇಲಾಖೆಯನ್ನು ಸಂಪರ್ಕಿಸುವಂತೆ ಶ್ರೀಕಾಂತ್‌ ಸಲಹೆ ನೀಡಿದರು. ಅಲ್ಲಿಂದ ಕದಲದ ಅಮರಲಾಲ್‌, ‘ಬೇಕಾದರೆ ಹಣ, ಆಭರಣವನ್ನು ನೀವೇ ಇಟ್ಟುಕೊಳ್ಳಿ. ಫೈಲ್‌ಗಳನ್ನು ಮಾತ್ರ ಹಿಂತಿರುಗಿಸಿ’ ಎಂದು ಪರಿಪರಿಯಾಗಿ ಬೇಡಿದರು. ಅವರ ಮಾತಿಗೆ ಕಾರ್ಯದರ್ಶಿ ಕಿವಿಗೊಡಲಿಲ್ಲ ಎನ್ನಲಾಗಿದೆ.

ಕೆಲವು ಪ್ರಭಾವಿ ವ್ಯಕ್ತಿಗಳ ಮೂಲಕವೂ ಶ್ರೀಕಾಂತ್‌ ಅವರ ಮೇಲೆ ಅವಿನಾಶ್‌ ಒತ್ತಡ ತಂದರು. ಅದಕ್ಕೂ ಜಗ್ಗದ ಕಾರ್ಯದರ್ಶಿ, ಕರೆಗಳನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದರು ಎಂದು ಗೊತ್ತಾಗಿದೆ.

* ಕ್ಲಬ್‌ ಸದಸ್ಯರಾದ ಅವಿನಾಶ್ ಹಣ, ಆಭರಣ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅನಧಿಕೃತವಾಗಿ ಲಾಕರ್‌ನಲ್ಲಿ ಇಟ್ಟಿದ್ದರು

–ಎಚ್‌.ಎಸ್‌. ಶ್ರೀಕಾಂತ್‌, ಬೌರಿಂಗ್‌ ಕ್ಲಬ್‌ ಕಾರ್ಯದರ್ಶಿ

***

ಒಟ್ಟು 5187 ಸದಸ್ಯರು

672 ಲಾಕರ್‌ಗಳು

***

₹ 3.90 ಕೋಟಿ ಹಣ

₹6.90 ಕೋಟಿ ವಜ್ರ

650 ಗ್ರಾಂ ಚಿನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT