ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ದಕ್ಷಿಣವೇ ಮುಳುವು: ಗಾಂಧಿ ಮೊಮ್ಮಗ ರಾಜಮೋಹನ ಭವಿಷ್ಯ

Last Updated 31 ಜನವರಿ 2019, 20:13 IST
ಅಕ್ಷರ ಗಾತ್ರ

ಧಾರವಾಡ: ‘ಬರಲಿರುವ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಗೆ ದಕ್ಷಿಣ ಭಾರತವೇ ಮುಳುವಾಗಲಿದೆ’ ಎಂದು ಗಾಂಧೀಜಿ ಮೊಮ್ಮಗ ಪ್ರೊ.ರಾಜಮೋಹನ ಗಾಂಧಿ ಹೇಳಿದರು.

’ದೇಶದಲ್ಲಿ ಕೋಮುಭಾವನೆಗಳು ಎದ್ದಾಗ, ಪಟ್ಟಭದ್ರ ಹಿತಾಸಕ್ತಿಗಳಿಗೆ ಜನರೇ ಪಾಠ ಕಲಿಸಿದ ಉದಾಹರಣೆಗಳು ಸಾಕಷ್ಟಿವೆ. ಭಾರತಕ್ಕೆ ಗಾಂಧಿ ಕಂಡ ಹಿಂದುತ್ವ ಬೇಕಿದೆಯೇ ಹೊರತು, ಬಿಜೆಪಿ ಬಯಸುವ ಹಿಂದುತ್ವ ಅಲ್ಲ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಹಾತ್ಮ ಗಾಂಧೀಜಿ ಅವರು ನೈಜ ಹಿಂದುತ್ವವನ್ನು ಪ್ರತಿಪಾದಿಸಿದ್ದರು. ಆ ಹಿಂದುತ್ವ ಎಂದೂ ಈ ದೇಶದಲ್ಲಿ ದ್ವೇಷದ ಭಾವನೆ ಬಿತ್ತಿರಲಿಲ್ಲ. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದ್ವೇಷದ ಹಿಂದುತ್ವವನ್ನು ಬಿತ್ತುತ್ತಿದೆ. ಇದಕ್ಕಾಗಿ ಗುಜರಾತ್ ರಾಜ್ಯವನ್ನು ಹಿಂದೂರಾಷ್ಟ್ರದ ಮಾದರಿಯನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿದೆ. ಗುಜರಾತಿನ ಜನ ಎಂದಿಗೂ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ಸಚಿವ ಹೆಗಡೆ ಹೇಳಿಕೆ ಖಂಡಿಸಬೇಕಿತ್ತು: ‘ರಾಹುಲ್ ಗಾಂಧಿ ತಂದೆ ಮುಸ್ಲಿಂ ಎಂದ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಕರ್ನಾಟಕದ ಜನ ಖಂಡಿಸಿ ಪ್ರತಿಭಟಿಸಬೇಕಿತ್ತು. ರಾಹುಲ್ ತಂದೆ ಒಬ್ಬ ಹಿಂದೂ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಜತೆಗೆ, ದೇಶದಲ್ಲಿರುವ ಯಾರಿಗೂ ಮುಸ್ಲಿಂ ತಂದೆ ಇರಬಾರದೇ? ಹೀಗೆ ಸತ್ಯವನ್ನು ಮರೆಮಾಚಿ ಸುಳ್ಳಿನ ಸಾಮ್ರಾಜ್ಯ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಲೇ ಬಂದಿದೆ ಎಂದು ಗಾಂಧಿ ಹೇಳಿದರು.

ಅಪಚಾರದ ಬಗ್ಗೆ ಚಕಾರವಿಲ್ಲ: ‘ದೇಶಕ್ಕೆ ಬರುವ ವಿದೇಶಿ ಗಣ್ಯರನ್ನು ಸಾಬರಮತಿ ಆಶ್ರಮಕ್ಕೆ ಕರೆತರುವ ಪ್ರಧಾನಿ ಮೋದಿ, ಅಲ್ಲಿರುವ ಚರಕ ಹಾಗೂ ಗಾಂಧಿಯ ಸರಳತೆ ಪ್ರತಿಪಾದಿಸುವ ಅನೇಕ ವಸ್ತುತೋರಿಸುತ್ತಾರೆ. ಆದರೆ ದೇಶದಲ್ಲಿ ಗಾಂಧಿ ಮತ್ತು ಅವರ ತತ್ವಕ್ಕೆ ಆಗುತ್ತಿರುವ ಅಪಚಾರ ಕುರಿತು ಚಕಾರ ಎತ್ತುವುದಿಲ್ಲ ಎಂದರು.

**

ಪತ್ರಕರ್ತೆ ಗೌರಿ ಹಂತಕರ ಪತ್ತೆಯಲ್ಲಿ ಕರ್ನಾಟಕ ಪೊಲೀಸರು ಪ್ರಗತಿ ಸಾಧಿಸಿದ್ದಾರೆ. ಆದರೆ ನ್ಯಾಯಾಲಯದ ನಿರ್ದೇಶನವಿದ್ದರೂ ಮಹಾರಾಷ್ಟ್ರ ಪೊಲೀಸರ ಕೆಲಸ ತೃಪ್ತಿಕರವಾಗಿಲ್ಲ.

– ಡಾ. ಜಿ.ಎನ್.ದೇವಿ, ಭಾಷಾತಜ್ಞ

**

ಪ್ರಜಾಪ್ರಭುತ್ವ ರಕ್ಷಣೆಗೆ ದೇಶವ್ಯಾಪಿ ‘ದಕ್ಷಿಣಾಯಣ’

ಡಾ. ರಾಜೇಂದ್ರ ಚೆನ್ನಿ ಮಾತನಾಡಿ,‘ದೇಶದಲ್ಲಿ ವಿಚಾರವಾದಿಗಳ ಹತ್ಯೆಯಾದಾಗ, ಅದನ್ನು ಪ್ರತಿರೋಧಿಸಿ ಪ್ರಶಸ್ತಿ ವಾಪಸಾತಿ ಆಂದೋಲನದ ಮೂಲಕ ಹುಟ್ಟಿಕೊಂಡ ಸಾಂಸ್ಕೃತಿಕ ವೇದಿಕೆ ‘ದಕ್ಷಿಣಾಯಣ‘ ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪುವ ಕೆಲಸ ಆರಂಭಿಸಲಿದೆ. ಇದಕ್ಕಾಗಿ ದೇಶದ ವಿವಿಧ ರಾಜ್ಯಗಳ 70 ಸದಸ್ಯರ ತಂಡ ಸುದೀರ್ಘ ಚರ್ಚೆಯ ಮೂಲಕ ಹೋರಾಟದ ರೂಪುರೇಷೆ ಸಿದ್ಧಗೊಳಿಸಿದೆ’ ಎಂದರು.

‘ಈ ಹೊರಾಟವು ಹೊಸದಾಗಿ ಹಲವು ರಾಜ್ಯಗಳಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನು ಒಪ್ಪಿಕೊಂಡಿದೆ. ಆಯಾ ರಾಜ್ಯಗಳ ಸಂಘಟನೆಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ರೂಪಿಸಲು ಸ್ವತಂತ್ರವಾಗಿವೆ. ಹಾಗೆಯೇ ‘ದಕ್ಷಿಣಾಯಣ‘ ಹೊರತುಪಡಿಸಿ ಇತರ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲು ನಿರ್ಧರಿಸಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT