ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಎಂ ಬೇಡಿಕೆ ಮತ್ತೆ ಮುನ್ನೆಲೆಗೆ.. ಸಮುದಾಯವಾರು ಹುದ್ದೆಗೆ ಚರ್ಚೆ

Published 24 ಜೂನ್ 2024, 20:18 IST
Last Updated 24 ಜೂನ್ 2024, 20:18 IST
ಅಕ್ಷರ ಗಾತ್ರ

ಬೆಂಗಳೂರು:‌ ರಾಜ್ಯದಲ್ಲಿ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರೇ ಈ ವಿಚಾರವಾಗಿ ಧ್ವನಿ ಎತ್ತಲು ಆರಂಭಿಸಿದ್ದಾರೆ.

ಸಚಿವ ಕೆ.ಎನ್‌. ರಾಜಣ್ಣ ಅವರು ಲೋಕಸಭೆ ಚುನಾವಣೆಗೂ ಮೊದಲೇ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಹೇಳಿಕೆ ನೀಡಿದ್ದರು. ‘ಈ ರೀತಿ ಹುದ್ದೆ ನೀಡುವುದರಿಂದ ಆಯಾ ಸಮುದಾಯಗಳು ಪಕ್ಷದ ಜೊತೆ ನಿಲ್ಲಲಿದ್ದು, ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಸಚಿವರಾದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಕೂಡಾ ಸಹಮತ ವ್ಯಕ್ತಪಡಿಸಿದ್ದರು. 

ಆಗ ಮಧ್ಯಪ್ರವೇಶಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ರಾಜ್ಯದಲ್ಲಿ ಇನ್ನೂ ಮೂರು ಉಪಮುಖ್ಯಮಂತ್ರಿ (ಡಿಸಿಎಂ) ಪ್ರಸ್ತಾವ ಇಲ್ಲ’ ಎಂದು‌ ಸ್ಪಷ್ಟಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ‘ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಊಹಾಪೋಹದ ಸುದ್ದಿ’ ಎಂದಿದ್ದರು. ಹೀಗಾಗಿ, ಈ ವಿಚಾರ ಚುನಾವಣೆಯ ಸಂದರ್ಭದಲ್ಲಿ ತಣ್ಣಗಾಗಿತ್ತು.

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೆ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ. ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷೆಯಂತೆ ಸ್ಥಾನಗಳು ಬಂದಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಬೇಡಿಕೆಗೆ ಮತ್ತೆ ಬಲ ಬಂದಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಸಿದ್ದರಾಮಯ್ಯ ಬಣದಲ್ಲಿರುವ ಸತೀಶ ಜಾರಕಿಹೊಳಿ, ಬಿ.ಝೆಡ್. ಜಮೀರ್‌ ಅಹಮದ್‌ಖಾನ್‌ ಅವರು ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದು, ಅದಕ್ಕೆ ಕೆ.ಎನ್‌. ರಾಜಣ್ಣ ದನಿಗೂಡಿಸಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಈ ಪೈಕಿ, ಜಿ. ಪರಮೇಶ್ವರ (ಎಸ್‌ಸಿ), ಸತೀಶ ಜಾರಕಿಹೊಳಿ (ಎಸ್‌ಟಿ), ಎಂ.ಬಿ. ಪಾಟೀಲ (ಲಿಂಗಾಯತ), ಜಮೀರ್‌ ಅಹಮ್ಮದ್‌ ಖಾನ್‌ (ಮುಸ್ಲಿಂ), ಕೆ.ಎನ್‌. ರಾಜಣ್ಣ (ಎಸ್‌ಟಿ), ರಾಮಲಿಂಗಾರೆಡ್ಡಿ (ರೆಡ್ಡಿ) ಪ್ರಮುಖರು. 

‘ಎಲ್ಲ ಸಚಿವರೂ ಡಿಸಿಎಂ ಆಗಲಿ’

‘ಉಪ ಮುಖ್ಯಮಂತ್ರಿ ಹುದ್ದೆ ಬಯಸುವವರು ವರಿಷ್ಠರ ಬಳಿ ಹೋಗಿ ಕೇಳಲಿ. ಯಾರೂ ಬೇಡ ಅಂದಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನೂ ಕೇಳಲಿ, ಯಾರು ಬೇಡ ಅಂದವರು? ಹೆಚ್ಚುವರಿ ಉಪ ಮುಖ್ಯಮಂತ್ರಿ ಮಾಡುವುದರಿಂದ ಎಲ್ಲವೂ ಸರಿಯಾಗುತ್ತದೆ ಎನ್ನುವುದಾದರೆ ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟು‌ ಎಲ್ಲ ಸಚಿವರೂ ಉಪ ಮುಖ್ಯಮಂತ್ರಿ ಆಗಲಿ. ಹಾಗೆ ಮಾಡಲು ಆಗುತ್ತದೆಯೇ?’

ಪ್ರಿಯಾಂಕ್‌ ಖರ್ಗೆ, ಪಂಚಾಯತ್‌ರಾಜ್‌ ಸಚಿವ

‘ಇನ್ನೂ ಐದು ಡಿಸಿಎಂ ಮಾಡಿದರೆ ಒಳ್ಳೆಯದು’

‘ಉಪ ಮುಖ್ಯಮಂತ್ರಿ ಸ್ಥಾನ ಚರ್ಚೆಯ ಬಗ್ಗೆ ಮಾಹಿತಿಯಿಲ್ಲ. ಪಕ್ಷ ತೀರ್ಮಾನ ಮಾಡಿ ಇನ್ನೂ ಐದು ಉಪ ಮುಖ್ಯಮಂತ್ರಿಗಳನ್ನು ಮಾಡಿದರೆ ಒಳ್ಳೆಯದು. ಇಲ್ಲಿ ಡಿ.ಕೆ. ಶಿವಕುಮಾರ್ ಅವರ ವಿಚಾರ ಮಾತ್ರ ಅಲ್ಲ. ಎಂಟು ಬಾರಿ ಗೆದ್ದ ರಾಮಲಿಂಗಾರೆಡ್ಡಿ ಇದ್ದಾರೆ. ಎಂಟು ವರ್ಷ ಪಕ್ಷದ ಅಧ್ಯಕ್ಷರಾಗಿದ್ದ ಪರಮೇಶ್ವರ ಇದ್ದಾರೆ. ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ, ಸತೀಶ ಜಾರಕಿಹೊಳಿ‌, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ. ಪಾಟೀಲ ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಪ್ರಬಲ ನಾಯಕ ಜಮೀರ್ ಅಹ್ಮದ್ ಸಾಹೇಬರು ಇದ್ದಾರೆ. ಒಕ್ಕಲಿಗರಲ್ಲಿ ಹಿರಿಯ ನಾಯಕ ಕೃಷ್ಣ ಬೈರೇಗೌಡ ಇದ್ದಾರೆ. ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ದೇಶಪಾಂಡೆ ಕೂಡ ಇದ್ದಾರೆ. ಅವರೆಲ್ಲರನ್ನೂ ಮಾಡಬಹುದು. ಎಲ್ಲ ಸಮುದಾಯಗಳಿಗೂ ಅವಕಾಶ ನೀಡಬೇಕಲ್ಲವೇ? ಸಾಮಾಜಿಕ ನ್ಯಾಯ ಮತ್ತು ಪಕ್ಷ ಬಲವರ್ಧನೆಗಾಗಿ’ 

ಡಿ.ಕೆ. ಸುರೇಶ್‌, ಮಾಜಿ ಸಂಸದ

‘ಹೈಕಮಾಂಡ್‌ ತೀರ್ಮಾನಿಸಲಿದೆ’

‘ಹೊಸ ಡಿಸಿಎಂ ಹುದ್ದೆ ಗಳನ್ನು ಸೃಷ್ಟಿಸುವುದರ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳ ಲಿದೆ.‌ ಸಚಿವರಾದ ಪರಮೇಶ್ವರ, ಸತೀಶ ಜಾರಕಿಹೊಳಿ, ಕೆ.ಎನ್‌. ರಾಜಣ್ಣ ಅವರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರ ಬಗ್ಗೆ ಅವರ ಅಭಿಪ್ರಾಯಗಳನ್ನು ಹೇಳಿದ್ದಾರೆ. ನಾನು ಮತ್ತು ಪೌರಾಡಳಿತ ಸಚಿವ ರಹೀಂ ಖಾನ್‌ ಕೂಡ ಅಭಿಪ್ರಾಯ ತಿಳಿಸಿದ್ದೇವೆ. ಆದರೆ, ಅಂತಿಮವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುವುದು ಪಕ್ಷದ ಹೈಕಮಾಂಡ್‌’ 

ಬಿ.ಜೆಡ್‌. ಜಮೀರ್‌ ಅಹಮ್ಮದ್‌ ಖಾನ್‌, ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ (ಬೀದರ್‌ನಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT