ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮನ್ನಣೆಗಾಗಿ ‘ಗ್ಲೋಬಲ್ ಬೆಂಗಳೂರು’: ಶಾಸಕರು, ಸಂಸದರ ಜತೆ ಡಿಸಿಎಂ ಚರ್ಚೆ

ನಗರದ ಅಭಿವೃದ್ಧಿಗಾಗಿ ಶಾಸಕರು, ಸಂಸದರ ಜತೆ ಉಪಮುಖ್ಯಮಂತ್ರಿ ಚರ್ಚೆ
Published 6 ಜೂನ್ 2023, 1:10 IST
Last Updated 6 ಜೂನ್ 2023, 1:10 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿಗೆ ಮತ್ತೆ ವಿಶ್ವಮಟ್ಟದ ಮನ್ನಣೆ ಸಿಗಬೇಕು. ‘ಬ್ರ್ಯಾಂಡ್‌ ಬೆಂಗಳೂರು’ ‘ಬೆಟರ್‌ ಬೆಂಗಳೂರು’ ಆಗಬೇಕು. ಅದಕ್ಕಾಗಿ ‘ಗ್ಲೋಬಲ್‌ ಬೆಂಗಳೂರು’ ನಿರ್ಮಾಣ ಮಾಡಬೇಕಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಸುಮಾರು ಮೂರು ತಾಸು ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ನಾರಾಯಣ ಮೂರ್ತಿ ನೇತೃತ್ವದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಲಹಾ ಸಮಿತಿ ಮಾಡಲಾಗಿತ್ತು. ಅದೇ ರೀತಿ ಬೆಂಗಳೂರಿನ ಬಗ್ಗೆ ಕಾಳಜಿ ಉಳ್ಳವರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದೇನೆ. ಬೆಂಗಳೂರು ಅಭಿವೃದ್ಧಿ ಕುರಿತು ಸಲಹಾ ಸಮಿತಿಯೊಂದನ್ನು ರೂಪಿಸಲಾಗುವುದು’ ಎಂದು ಅವರು ಹೇಳಿದರು.

‘ಬೆಂಗಳೂರು ಅಂತರರಾಷ್ಟ್ರೀಯ ನಗರ. ಅದರ ಘನತೆ ಮತ್ತು ವೈಭವವನ್ನು ನಾವು ಪುನರ್‌ಸ್ಥಾಪಿಸಬೇಕು. ಬಿಜೆಪಿ ನಾಯಕರೇ ಈ ಹಿಂದಿನ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಸರ್ಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಅನೇಕ ನಾಯಕರು ಅಭಿಪ್ರಾಯಪಟ್ಟಿದ್ದು, ಈ ವಿಚಾರವಾಗಿ ಸಭೆಯಲ್ಲಿ ಸಲಹೆಗಳನ್ನು ನೀಡಿದ್ದಾರೆ’ ಎಂದರು.

‘ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣದ ವಿಚಾರವಾಗಿ ಮಾಸ್ಟರ್‌ ಪ್ಲಾನ್‌ ಕೇಳಿದ್ದೇನೆ. ರಾಜಕಾಲುವೆ ಒತ್ತುವರಿ, ಹೂಳು ತೆಗೆಯುವ ಕೆಲಸದ ಕುರಿತು ಮಾಹಿತಿ ಮತ್ತು ದಾಖಲೆ ಕೇಳಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆಯುವ ಪ್ರತಿ ಕಾಮಗಾರಿಯ ವಿಚಾರದಲ್ಲಿ ಅಧಿಕಾರಿಗಳು ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ಇರಬೇಕು. ಪ್ರತಿ ವಾರ್ಡ್‌ ಮಟ್ಟದಲ್ಲಿ ಎಷ್ಟು ರಸ್ತೆ ಇದೆ. ಯಾವ ಇಲಾಖೆಯಿಂದ ಯಾವ ಕೆಲಸ ಆಗುತ್ತಿದೆ ಎಂಬ ಬಗ್ಗೆ ವಾರ್ಡ್‌ ಮಟ್ಟದ ವರದಿ ನೀಡಬೇಕು. ಯಾವುದೇ ಕೆಲಸ ಆರಂಭವಾಗುವ ಮುನ್ನ, ಆರಂಭವಾದ ನಂತರ ಹಾಗೂ ಕೆಲಸ ಮುಗಿದ ನಂತರ ಫೋಟೊ ಹಾಗೂ ವಿಡಿಯೊ ದಾಖಲಾತಿ ಇರಬೇಕು. ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರಲು ಈ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಕೆಲಸ ಮಾಡದೇ ಬಿಲ್ ಬರೆಯುವ ಪದ್ಧತಿಗೆ ತಿಲಾಂಜಲಿ ಹಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ಕಸ ವಿಲೇವಾರಿ ಕುರಿತು ಸಭೆಯಲ್ಲಿದ್ದ ಅನೇಕರು ಸಲಹೆ ನೀಡಿದ್ದಾರೆ. ಹೀಗಾಗಿ ಕಸ ತೆಗೆದುಕೊಂಡು ಹೋಗುವ ವಾಹನಗಳ ಮಾಹಿತಿ ಇರಬೇಕು. ಇದಕ್ಕಾಗಿ ವ್ಯವಸ್ಥೆ ರೂಪಿಸಲು ಪಾಲಿಕೆ, ಸಾರಿಗೆ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಕಸ ವಿಲೇವಾರಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ನೀಡಿರುವ ಸಲಹೆಗಳ ಬಗ್ಗೆ ಗಮನಹರಿಸುತ್ತೇನೆ’ ಎಂದರು.

‘ಬಿಡಿಎ ಕಾಂಪ್ಲೆಕ್ಸ್‌ಗಳಲ್ಲಿ ಅನೇಕ ಮಳಿಗೆಗಳು ಖಾಲಿ ಇವೆ. ಇವುಗಳನ್ನು ರೀಮಾಡೆಲಿಂಗ್ ಮಾಡಲು ಒತ್ತು ನೀಡುತ್ತೇನೆ. ಕೆಲವು ವಾರ್ಡ್‌ಗಳಿಗೆ ವಾರ, 15 ದಿನಗಳಾದರೂ ನೀರು ಪೂರೈಸುತ್ತಿಲ್ಲ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪುಲಕೇಶಿನಗರದ ಶಾಸಕರು ಸೇರಿದಂತೆ ಹಲವರು ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿ ಕ್ಷೇತ್ರವಾರು ಜನಸಂಖ್ಯೆ, ನಿಗದಿಯಾದ ನೀರಿನ ಪ್ರಮಾಣದ ಕುರಿತು ಪರಿಶೀಲನೆ ನಡೆಸುತ್ತೇನೆ’ ಎಂದು ಅವರು ಹೇಳಿದರು.

ಬಿಬಿಎಂಪಿ ಚುನಾವಣೆ
ಕಾನೂನು ತೊಡಕು ‘ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಕೆಲವು ವಿಚಾರಗಳಿವೆ. ಕಾನೂನಾತ್ಮಕವಾಗಿ ಇರುವ ಅಡೆತಡೆಗಳನ್ನು ನಿವಾರಿಸಿಕೊಂಡು ನಂತರ ತೀರ್ಮಾನ ಮಾಡುತ್ತೇವೆ’ ಎಂದು ಶಿವಕುಮಾರ್‌ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌ ಶಾಸಕರು ಈ ಹಿಂದೆ ಮಾಡಿರುವ ವಾರ್ಡ್‌ಗಳ ಕ್ಷೇತ್ರ ಪುನರ್‌ವಿಂಗಡಣೆ ಸರಿಯಾಗಿ ಆಗಿಲ್ಲ. ಮತ್ತೊಮ್ಮೆ ಮಾಡಬೇಕು ಎಂದು ಒತ್ತಾಯಿಸಿದರು. ಬಿಬಿಎಂಪಿಯನ್ನು ಮೂರು ಪಾಲಿಕೆಗಳಾಗಿ ವಿಂಗಡಿಸಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದರು. ಒತ್ತುವರಿ ತೆರವು ಹಸ್ತಕ್ಷೇಪ ಇಲ್ಲ: ‘ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಧಿಕಾರಿಗಳು ಅವರ ಕೆಲಸ ಮಾಡಲಿದ್ದಾರೆ’ ಎಂದು ಶಿವಕುಮಾರ್‌ ಹೇಳಿದರು. ನಿರ್ಣಯಕ್ಕೆ ಸೂಚನೆ: ಈಜಿಪುರ ಮೇಲ್ಸೇತುವೆ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು. ಈ ಬಗ್ಗೆ ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಅವರಿಗೆ ಸೂಚನೆ ಕೊಟ್ಟರು.
ಸಭೆಯಿಂದ ಹೊರನಡೆದ ಬಿಜೆಪಿ ಶಾಸಕರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಿಗದಿತ ಸಮಯಕ್ಕೆ ಬರಲಿಲ್ಲ ಎಂದು ಅಸಮಾಧಾನಗೊಂಡ ಬಿಜೆಪಿಯ ಕೆಲವು ಶಾಸಕರು ಸಭೆಯಿಂದಲೇ ಹೊರ ನಡೆದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ಬೆಂಗಳೂರಿನ ಶಾಸಕರು ವಿಧಾನ ಪರಿಷತ್‌ ಸದಸ್ಯರು ಮತ್ತು ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಶಾಸಕರು ಸಮಯಕ್ಕೆ ಸರಿಯಾಗಿ ಹಾಜರಿದ್ದರು. ಆದರೆ ಶಿವಕುಮಾರ್‌ ಅವರು ಒಂದು ಗಂಟೆ ತಡವಾಗಿ ಸಭೆಗೆ ಬಂದರು. ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಬೈರತಿ ಬಸವರಾಜ ಮತ್ತು ಎಸ್‌.ಆರ್‌. ವಿಶ್ವನಾಥ್‌ ಮಧ್ಯಾಹ್ನ 12 ಗಂಟೆಗೆ ಸಭಾಂಗಣದಿಂದ ಎದ್ದು ಹೊರ ನಡೆದರು. ‘ಭಾನುವಾರ ಸಂಜೆ ವಾಟ್ಸ್‌ ಆ್ಯಪ್‌ ಮೂಲಕ ನಮಗೆ ಸಭೆಯ ಆಹ್ವಾನ ಕಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ನಾವು ಬಂದಿದ್ದೇವೆ. ಉಪ ಮುಖ್ಯಮಂತ್ರಿಯವರು ವಿಳಂಬವಾಗಿ ಬರುವ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಈ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ‘ನಾವು ಕೂಡ ಸಚಿವರಾಗಿ ಕೆಲಸ ಮಾಡಿದ್ದೇವೆ. ಸಚಿವರು ಬರುವುದು ತಡವಾದರೆ ತಿಳಿಸಬೇಕಿತ್ತು. ನಮಗೆ ಬೇರೆ ಕಾರ್ಯಕ್ರಮಗಳಿವೆ. ಆದ್ದರಿಂದ ಅಧಿಕಾರಿಗಳಿಗೆ ತಿಳಿಸಿ ಹೊರ ಬಂದಿದ್ದೇವೆ. ಇದು ಸಭೆಯ ಬಹಿಷ್ಕಾರವಲ್ಲ’ ಎಂದರು. ಬಿಜೆಪಿ ಸಂಸದರಾದ ಪಿ.ಸಿ. ಮೋಹನ್‌ ತೇಜಸ್ವಿ ಸೂರ್ಯ ಶಾಸಕರಾದ ಕೆ. ಗೋಪಾಲಯ್ಯ ಎಂ. ಕೃಷ್ಣಪ್ಪ ಎಲ್‌.ಎ. ರವಿಸುಬ್ರಮಣ್ಯ ಸಿ.ಕೆ. ರಾಮಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಧಿಕಾರಿಗಳ ಅಮಾನತಿಗೆ ಸೂಚನೆ
ಅಪಾರ್ಟ್‌ಮೆಂಟ್‌ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು ಎಂಜಿನಿಯರ್‌ಗಳನ್ನು ಸೋಮವಾರ ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ‘ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಸಲಹೆ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದೀರಿ’ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಸರಿಯಾಗಿ ಉತ್ತರ ನೀಡಲಿಲ್ಲ. ಹೊಸಕೆರೆಹಳ್ಳಿ ಕೆರೆಯನ್ನು ಭಾಗ ಮಾಡಿ ರಸ್ತೆ ನಿರ್ಮಿಸಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಿವಕುಮಾರ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT