ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 5ರಷ್ಟು ರಿಯಾಯಿತಿ ಬೇಕೇ– ಇಂದೇ ತೆರಿಗೆ ಕಟ್ಟಿ

Last Updated 29 ಏಪ್ರಿಲ್ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯಬೇಕೇ? ಹಾಗಾದರೆ ಮಂಗಳವಾರವೇ (ಏ.30) ತೆರಿಗೆ ಕಟ್ಟಿ. ಆಸ್ತಿ ತೆರಿಗೆ ಪಾವತಿದಾರರಿಗೆ ಬಿಬಿಎಂಪಿ ನೀಡುವ ಶೇ 5ರಷ್ಟು ರಿಯಾಯಿತಿ ಪಡೆಯಲು ನಿಗದಿಪಡಿಸಿರುವ ಅವಧಿಮಂಗಳವಾರ ಕೊನೆಗೊಳ್ಳಲಿದೆ.

ತೆರಿಗೆಯಲ್ಲಿ ರಿಯಾಯಿತಿ ನೀಡುವ ಸೌಕರ್ಯವನ್ನು ವಿಸ್ತರಿಸುವಂತೆ ಶನಿವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಒತ್ತಾಯಿಸಿದ್ದರು. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಪ್ರಸ್ತಾಪ ಜಾರಿಗೊಳಿಸಬೇಕಾದರೆ ಚುನಾವಣಾ ಆಯೋಗದ ಅನುಮತಿ ಅಗತ್ಯ. ಸದ್ಯಕ್ಕೆ ಬಿಬಿಎಂಪಿ ಈ ಕುರಿತು ಆಯೋಗಕ್ಕೆ ಯಾವುದೇ ಪ್ರಸ್ತಾಪ ಸಲ್ಲಿಸಿಲ್ಲ.

‘ಏಪ್ರಿಲ್‌ 30ರ ನಂತರ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ಸಿಗುವುದಿಲ್ಲ. ಹಾಗಾಗಿ ಈ ಸೌಲಭ್ಯ ಪಡೆಯಬೇಕಾದರೆ ಇನ್ನುಳಿದ ಒಂದು ದಿನದ ಅವಕಾಶವನ್ನು ತೆರಿಗೆದಾರರು ಬಳಸಿಕೊಳ್ಳಬೇಕು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು 2019–20ನೇ ಸಾಲಿಗೆ ₹ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿ ₹ 10,691 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಕೌನ್ಸಿಲ್‌ನಲ್ಲಿ ಚರ್ಚೆಯ ಬಳಿಕ ಬಜೆಟ್‌ ಗಾತ್ರವನ್ನು ₹ 12,574 ಕೋಟಿಗೆ ಪರಿಷ್ಕರಿಸಿ, ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ₹ 4 ಸಾವಿರ ಕೋಟಿಗೆ ಹೆಚ್ಚಿಸಲಾಯಿತು.

2018–19ನೇ ಸಾಲಿನಲ್ಲಿ ₹ 3,100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿತ್ತು. ಆದರೆ ಸಂಗ್ರಹವಾಗಿದ್ದು ₹ 2,550 ಕೋಟಿ ಮಾತ್ರ. ಈ ಆರ್ಥಿಕ ವರ್ಷದಲ್ಲಿ ₹ 4ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ತಲುಪುತ್ತದೆಯೇ ಕಾದು ನೋಡಬೇಕಿದೆ.

‘₹ 1ಸಾವಿರ ಕೋಟಿ ದಾಟುವ ನಿರೀಕ್ಷೆ’

2019–20ನೇ ಸಾಲಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ₹1 ಸಾವಿರ ಕೋಟಿ ದಾಟುವ ನೀರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ.

‘ಲೋಕಸಭಾ ಚುನಾವಣೆಯಿಂದಾಗಿ ಏಪ್ರಿಲ್‌ ತಿಂಗಳಿನ ಆರಂಭದಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆ ಇತ್ತು. ₹ 500 ಕೋಟಿಗೂ ಅಧಿಕ ತೆರಿಗೆ ಏಪ್ರಿಲ್‌ ಕೊನೆಯ ವಾರದಲ್ಲಿ ಸಂಗ್ರಹವಾಗಿದೆ. ರಿಯಾಯಿತಿ ಪಡೆಯಲು ಕೊನೆಯ ದಿನವಾದ ಮಂಗಳವಾರವೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಪಾಲಿಕೆ ಆಯುಕ್ತ ತಿಳಿಸಿದರು.

‘2018–19ನೇ ಸಾಲಿನಲ್ಲಿ ಏಪ್ರಿಲ್‌ 30ರವರೆಗೆ ₹ 971 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಏಪ್ರಿಲ್‌ 30ರಂದು ಒಂದೇ ದಿನ ₹ 250 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೋಮವಾರದವರೆಗೆ ಸುಮಾರು ₹ 747 ಕೋಟಿ ತೆರಿಗೆ ಪಾವತಿಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ತೆರಿಗೆ ಸಂಗ್ರಹ ₹ 1ಸಾವಿರ ಕೊಟಿ ದಾಟಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಂಕಿ ಅಂಶ

₹747 ಕೋಟಿ

2019–20ನೇ ಸಾಲಿನಲ್ಲಿ ಏಪ್ರಿಲ್‌ 29ರವರೆಗೆ ಸಂಗ್ರಹವಾದ ಆಸ್ತಿ ತೆರಿಗೆ

₹ 721 ಕೋಟಿ

2018–19ನೇ ಸಾಲಿನಲ್ಲಿ ಏಪ್ರಿಲ್‌ 29ರವರೆಗೆ ಸಂಗ್ರಹವಾಗಿದ್ದ ತೆರಿಗೆ

19 ಲಕ್ಷ

ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT