ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌–ಇನ್ | ಮೇ ತಿಂಗಳಿನಿಂದ ಹೊಸ ಸಾಲ: ಸಚಿವ ಎಸ್.ಟಿ.ಸೋಮಶೇಖರ್‌

Last Updated 13 ಏಪ್ರಿಲ್ 2020, 1:22 IST
ಅಕ್ಷರ ಗಾತ್ರ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಸಾಲ ಪಡೆದವರಿಗೆ ಬ್ಯಾಂಕ್‌ಗಳು ನೋಟಿಸ್ ನೀಡುವುದು ನಿಂತಿಲ್ಲ. ಹೊಸ ಸಾಲ ಸಿಗುತ್ತಿಲ್ಲ. ರೈತರು ಎದುರಿಸುತ್ತಿರುವ ಇಂತಹ ಹತ್ತು ಹಲವು ಸಮಸ್ಯೆಗಳನ್ನು ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಅವರ ಗಮನಕ್ಕೆ ತಂದಿತು. ರೈತರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ ಸಚಿವರು ಅವರ ಸಂದೇಹಗಳನ್ನು ನಿವಾರಿಸುವ ಪ್ರಯತ್ನ ಮಾಡಿದರು.

* ಸಾಲಮನ್ನಾ ಯೋಜನೆಯ ಪ್ರಯೋಜನ ಸಿಕ್ಕಿಲ್ಲ. ಹೊಸದಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

–ಮಧುಲತಾ, ಶ್ರೀರಂಗಪಟ್ಟಣ

ಸಚಿವ: ಸಾಲಮನ್ನಾ ಯೋಜನೆಯ ಅಂತಿಮ ಹಂತದ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ ಲಾಕ್‌ಡೌನ್‌ ಇರುವುದರಿಂದ ಮೇ ತಿಂಗಳಿನಿಂದ ಹೊಸ ಸಾಲ ನೀಡಲಾಗುತ್ತದೆ.

* ಎಪಿಎಂಸಿಗಳು ತೆರೆದಿವೆ, ಆದರೆ ಅಲ್ಲಿಗೆ ವ್ಯಾಪಾರಿಗಳು, ಕೆಲಸಗಾರರು, ಹಮಾಲರು ಹೋಗಿ ಬರಲು ವ್ಯವಸ್ಥೆ ಇಲ್ಲ. ಪೊಲೀಸರು ಅಡ್ಡಗಟ್ಟಿ ವಾಪಸ್ ಕಳುಹಿಸುತ್ತಾರೆ.

–ರಾಜಶೇಖರ ಪಾಟೀಲ, ಸಿಂಧನೂರು, ರಾಯಚೂರು ಜಿಲ್ಲೆ.

ಸಚಿವ: ಎಪಿಎಂಸಿಗೆ ಬರುವ ಯಾವುದೇ ಸಿಬ್ಬಂದಿಗೆ ಪೊಲೀಸರು ಅಡ್ಡಿಪಡಿಸದಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ದಾಸನಪುರಕ್ಕೆ ಹಮಾಲರು ಮತ್ತು ಇತರೆ ಸಿಬ್ಬಂದಿಯನ್ನು ಕರೆದೊಯ್ಯಲು ಖಾಸಗಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

* ತರಕಾರಿಯನ್ನು ಗೂಡ್ಸ್ ಆಟೋದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಪೊಲೀಸರು ಅಡ್ಡಿಪಡಿಸುತ್ತಾರೆ

–ಸಿದ್ಧಪ್ಪ, ಬಾಗಲಗುಂಟೆ, ಬೆಂಗಳೂರು

ಸಚಿವ: ತರಕಾರಿ ಮತ್ತು ಹಣ್ಣು ತುಂಬಿದ ಗೂಡ್ಸ್ ಗಾಡಿಗಳನ್ನು ಹಿಡಿಯದಂತೆ ಪೊಲೀಸರಿಗೆ ಮುಖ್ಯಮಂತ್ರಿ ಅವರೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಣ್ಣು, ತರಕಾರಿಗಳನ್ನು ಬೀದಿ–ಬೀದಿಗೆ ಹೋಗಿ ಮಾರಾಟ ಮಾಡಬಹುದು. ಪೊಲೀಸರು ತಡೆದರೆ ನಮಗೆ ಮಾಹಿತಿ ನೀಡಿ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.

* ಸಾಲಮನ್ನಾ ಆಗಿ ಒಂದೂವರೆ ವರ್ಷವಾದರೂ ಕುಣಿಗಲ್ ‌ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಗ್ರಾಹಕರಿಗೆ ಅದರ ಪ್ರಯೋಜನ ದೊರೆತಿಲ್ಲ. ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಕಿತ್ತಾಟದಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

– ರಮೇಶ್, ಕುಣಿಗಲ್

ಸಚಿವ: ಸಾಲಮನ್ನಾ ಯೋಜನೆ ಅನುಷ್ಠಾನ ಮಾಡದವರ ವಿರುದ್ಧ ನಾಳೆಯೇ ಕ್ರಮ ಕೈಗೊಳ್ಳುತ್ತೇವೆ.

* ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಉಚಿತವಾಗಿ ನೀರು ಕೊಡುವುದಾಗಿ ಭರವಸೆ ನೀಡಿದ್ದಿರಿ. ಆದರೆ, ಅನುಷ್ಠಾನ ಆಗಲಿಲ್ಲ.

–ನಾಗೇಶ್‌, ಕೆಂಗೇರಿ, ಬೆಂಗಳೂರು

ಸಚಿವ: ಈ ಬಗ್ಗೆ ಚಿಂತನೆ ಇದ್ದುದು ನಿಜ. ಆದರೆ, 20 ಲೀಟರ್ ನೀರಿಗೆ ₹5 ದರ ದುಬಾರಿಯಲ್ಲ. ಉಚಿತವಾಗಿ ನೀಡಿದರೆ ಬೇಕಾಬಿಟ್ಟಿಯಾಗಿ ನೀರು ಒಯ್ದು ಪೋಲು ಮಾಡುತ್ತಾರೆ ಎಂದು ಕೆಲವು ಸಾರ್ವಜನಿಕರು ಮತ್ತು ಜನಪ್ರತಿನಿಧಿ
ಗಳು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ, ನಿರ್ಧಾರ ಕೈ ಬಿಡಲಾಗಿದೆ.

* ದುಡಿಮೆ ಇಲ್ಲದೇ ಹಮಾಲಿಗಳು ಮನೆಯಲ್ಲೇ ಉಳಿವಂತಾಗಿದೆ. 10 ಮಂದಿಯಲ್ಲಿ ಇಬ್ಬರಿಗಷ್ಟೇ ಕೆಲಸ ಸಿಗುತ್ತಿದೆ. ಸರ್ಕಾರದಿಂದ ನೆರವು ಸಿಗುವುದೇ?

–ಗುರುಸಿದ್ಧಪ್ಪ, ಹಮಾಲರ ಸಂಘ, ಬೆಂಗಳೂರು. ಮಹದೇವ, ಬಾಲ್ಕಿ, ಬೀದರ್.

ಸಚಿವ: ನಿಮಗಾಗಲೀ, ರೈತರಿಗಾಗಲಿ ತೊಂದರೆ ಆಗಬಾರದು ಎಂಬ ಕಾರಣಕ್ಕೇ ಎಲ್ಲಾ ಎಪಿಎಂಸಿಗಳನ್ನು ತೆರೆಯಲಾಗಿದೆ. ಕೆಲಸಕ್ಕೆ ಹೋಗುವ ಹಮಾಲಿಗಳನ್ನು ತಡೆಯದಂತೆ ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗಿದೆ. ಹಮಾಲಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

* ರಾಮನಗರ ಜಿಲ್ಲೆಯಲ್ಲಿ ತೋಟ ಇದೆ. ಬೆಂಗಳೂರಿನಲ್ಲಿ ಮನೆ ಇದೆ. ಹೋಗಿ ಬರಲು ಸಾಧ್ಯವಾಗದೆ ಕೃಷಿ ಕೆಲಸ ನಿಂತು ಹೋಗಿದೆ.

–ಜೆ.ವಿ. ರಮೇಶ್, ಬೆಂಗಳೂರು

ಸಚಿವ: ಹಾಪ್‌ಕಾಮ್ಸ್ ಮತ್ತು ಕೃಷಿ ಇಲಾಖೆಯಲ್ಲಿ ಗ್ರೀನ್ ಪಾಸ್ ಪಡೆದು ಮತ್ತೊಂದು ಜಿಲ್ಲೆಗೆ ತೆರಳಬಹುದು.

* ಮೆಕ್ಕೆ ಜೋಳದ ಬೆಲೆ ಕುಸಿದಿದ್ದು, ಅತೀ ಕಡಿಮೆ ಬೆಲೆಗೆ ವ್ಯಾಪಾರಿಗಳು ಕೇಳುತ್ತಿದ್ದಾರೆ.

–ಮಂಜುಳಾ, ಬೀದರ್

ಸಚಿವ: ನಾಲ್ಕೈದು ದಿನಗಳ ಹಿಂದೆ ಅಂತಹ ಪರಿಸ್ಥಿತಿ ಇತ್ತು. ಈಗ ಮೆಕ್ಕೆಜೋಳವನ್ನುಎಪಿಎಂಸಿಯಲ್ಲಿ ಮಾರಾಟ ಮಾಡಬಹುದು. ಕೃಷಿ ಸಚಿವರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಿದ್ದಾರೆ.

* ಮೆಣಸಿನ ಕಾಯಿ, ಬದನಕಾಯಿ ಕೇಳುವವರಿಲ್ಲದೆ ಬಡವರಿಗೆ ಉಚಿತವಾಗಿ ಹಂಚುತ್ತಿದ್ದೇನೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾನೂ ಕಷ್ಟಕ್ಕೆ ಸಿಲುಕುತ್ತೇವೆ. ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಹೊಲದಲ್ಲಿರುವ ಹೂಕೋಸು, ಕಲ್ಲಂಗಡಿ ಕೊಳೆಯುತ್ತಿದೆ.

–ಶೇಖರಗೌಡ ಪಾಟೀಲ, ಧಾರವಾಡ. ಮುರುಗೇಶ್‌, ದಾವಣಗೆರೆ. ಆನಂದ ಮುನ್ನಾಳಿ, ಹುಕ್ಕೇರಿ, ಬೆಳಗಾವಿ ಜಿಲ್ಲೆ. ಮಹಂತೇಶ್, ಬಾಗಲಕೋಟೆ.

ಸಚಿವ: ಯಾವುದೇ ಬೆಳೆಯನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬಹುದು. ದಲ್ಲಾಳಿಗಳು ಕಡಿಮೆ ಬೆಲೆಗೆ ಪಡೆದು, ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ. ರೈತರೇ ಗಾಡಿಗಳಲ್ಲಿ ತುಂಬಿಕೊಂಡು ಬೀದಿ–ಬೀದಿಗಳಿಗೆ ಹೋಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

* ಟ್ರ್ಯಾಕ್ಟರ್ ಸಾಲ ಮತ್ತು ಕೃಷಿ ಸಾಲದ ಕಂತು ಪಾವತಿಗೆ ಬ್ಯಾಂಕ್‌ ನೋಟಿಸ್ ನೀಡಿದೆ.

–ದೇವಾನಂದ, ಬೀದರ್. ಮುರುಳೀಧರ್, ಬಾಗಲಕೋಟೆ. ದೇವರಾಜ್, ಕಲಬುರ್ಗಿ. ಧರ್ಮಪ್ಪ, ಬಾಗಲಕೋಟೆ.

ಸಚಿವ: ಯಾವುದೇ ಸಾಲದ ಕಂತು ಪಾವತಿಯನ್ನು ಮಾಡಬೇಕಿಲ್ಲ. ಎಲ್ಲವನ್ನೂ 3 ತಿಂಗಳು ಮುಂದೂಡಲಾಗಿದೆ. ನೋಟಿಸ್ ಪ್ರತಿಯನ್ನು ನನಗೆ ವಾಟ್ಸ್ ಆ್ಯಪ್ ಮಾಡಿ. ಬ್ಯಾಂಕ್‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ಖಾಸಗಿ ಬ್ಯಾಂಕ್‌ಗಳಿಗೂ ಆರ್‌ಬಿಐ ಈ ಬಗ್ಗೆ ನಿರ್ದೇಶನ ನೀಡಿದೆ. ಎಲ್ಲಾ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದಿಂದಲೂ ಪತ್ರ ಬರೆಯಲಾಗುವುದು.

* ಅಂಗಡಿಯಲ್ಲಿ ದಿನಸಿ ಖಾಲಿಯಾಗಿದೆ. ತರಲು ಹೋದರೆ ಹಾರೋಹಳ್ಳಿ ಬಳಿ ಪೊಲೀಸರು ತಡೆದು ವಾಪಸ್ ಕಳುಹಿಸಿದರು.

–ರವಿಕುಮಾರ್, ಕೋಡಿಹಳ್ಳಿ, ಕನಕಪುರ

ಸಚಿವ: ಅಗತ್ಯ ವಸ್ತು ತರಲು ಹೋಗುವವರಿಗೆ ಪೊಲೀಸರು ಯಾವುದೇ ಕಾರಣಕ್ಕೂ ಅಡ್ಡಿಪಡಿಸುವಂತಿಲ್ಲ. ನಿಮಗೆ ಆಗಿರುವ ತೊಂದರೆ ಬಗ್ಗೆ ಪರಿಶೀಲನೆ ನಡೆಸಿ ಪೊಲೀಸರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತೇನೆ.

* ಒಬ್ಬ ರೈತರಿಂದ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಗೆ 10 ಕ್ವಿಂಟಲ್ ಮಾತ್ರ ಖರೀದಿಸಲಾಗುತ್ತಿದೆ. ಕನಿಷ್ಠ 20 ಕ್ವಿಂಟಲ್‌ಗೆ ಹೆಚ್ಚಿಸಬೇಕು

–ನಿಂಗನಗೌಡ ಪಾಟೀಲ, ಶಂಕರಗೌಡ ಬಸವನಬಾಗೇವಾಡಿ. ಶಿವಕುಮಾರ್, ಬೀದರ್.

ಸಚಿವ: ಎಲ್ಲಾ ರೈತರಿಗೂ ಬೆಂಬಲ ಬೆಲೆ ಸಿಗಲಿ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ತೊಗರಿ ಮತ್ತು ಕಡಲೆಯನ್ನು ಬೇರೆ ಕಡೆ ಮಾರಾಟ ಮಾಡಲು ಅಭ್ಯಂತರ ಇಲ್ಲ.

* ಎಪಿಎಂಸಿಗೆ ರಾಗಿ ಕೊಟ್ಟರೆ ಹಣ ಬರೋದೇ ಇಲ್ಲ ಎಂಬ ವದಂತಿ ಇದೆ. ನಿಜವೇ?

–ಪಾಲಾಕ್ಷ, ದೇವಿಕೊಪ್ಪಲು, ಹೊಳೆನರಸೀಪುರ, ಹಾಸನ

ಸಚಿವ: ಈ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ಒಬ್ಬ ರೈತರಿಂದ 50 ಕ್ವಿಂಟಲ್ ಖರೀದಿ
ಸಲಾಗುವುದು. ಈಗಾಗಲೇ ₹395 ಕೋಟಿ ಬಿಡುಗಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT