ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತ ಬಂಗೇರಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ: ದರ್ಶನಕ್ಕೆ ಭಾರಿ ಜನಸ್ತೋಮ

Published 9 ಮೇ 2024, 13:13 IST
Last Updated 9 ಮೇ 2024, 13:13 IST
ಅಕ್ಷರ ಗಾತ್ರ

ಬೆಳ್ತಂಗಡಿ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರಿಗೆ ಗುರುವಾರ ಸರ್ಕಾರಿ ಗೌರವಗಳೊಂದಿಗೆ ಇಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಲ್ಲಿ ಶಾಸಕರಾಗಿ, ಎಲ್ಲಾ ಪಕ್ಷಗಳಲ್ಲೂ ಅಭಿಮಾನಿಗಳನ್ನು ಗಳಿಸಿದ್ದ ಇವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಭಾರಿ ಜನಸ್ತೋಮ ಸೇರಿತ್ತು.

ಬೆಂಗಳೂರಿನಿಂದ ಪಾರ್ಥಿವ ಶರೀರ ಸುಮಾರು ಗುರುವಾರ ನಸುಕಿನ 3 ಗಂಟೆಗೆ ಬೆಳ್ತಂಗಡಿಯ ಗಡಿ ಭಾಗ ಚಾರ್ಮಾಡಿಯಲ್ಲಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಬರಮಾಡಿಕೊಂಡರು. ಇಲ್ಲಿರುವ ಅವರ ಮನೆಯವರೆಗೂ ಮೆರವಣಿಗೆಯಲ್ಲಿ ಸಾಗಿಬಂದರು. ಅವರ ಪಾರ್ಥಿವ ಶರೀರವು ಇಲ್ಲಿರುವ ಅವರ ಮನೆ ‘ಸುಪ್ರಭಾತ’ಕ್ಕೆ ಸುಮಾರು 3.45 ಕ್ಕೆ ಬಂದು ತಲುಪಿತು. ಬೆಳಗ್ಗಿನವರೆಗೂ ಮನೆಯಲ್ಲೇ ಇದ್ದು ಅವರ ಅಂತಿಮ ವಿಧಿಗಳನ್ನು ನೆರವೇರಿಸಲು ಸಹಕರಿಸಿದರು. ಅವರ ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮನೆಯಲ್ಲೇ ರಾತ್ರಿ ಇಡೀ ಕಾದು ಕುಳಿತಿದ್ದರು.

ಸಾರ್ವಜನಿಕರು ಬಂಗೇರ ಅವರ ಅಂತಿಮ ದರ್ಶನ ಪಡೆಯಲು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಭಿಮಾನಿಗಳು ರಾತ್ರಿಯಿಡೀ ನಿದ್ದೆಗೆಟ್ಟು, ಅವರ ಅಂತಿಮ ದರ್ಶನ ಸಸೂತ್ರವಾಗಿ ನಡೆಯಲು ವ್ಯವಸ್ಥೆ ಕಲ್ಪಿಸಿದ್ದರು. ಗುರುವಾರ ಸಂಜೆವರೆಗೂ ಸ್ಥಳದಲ್ಲಿದ್ದು ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ಬೆಳಿಗ್ಗೆ 9ರ ಬಳಿಕ ತಾಲ್ಲೂಕು ಕ್ರೀಡಾಂಗಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮಧ್ಯಾಹ್ನ 2ರವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಮೈದಾನದಿಂದ, ಅವರ ಮನೆತನದ ಕೇದೆ ಮನೆಯವರೆಗೆ ನಡೆದ ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಗೌರವ ಸಲ್ಲಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸರ್ಕಾರಿ ಗೌರವವನ್ನು ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದರು.

ಸೋಲೂರು ಮಠದ ವಿಖ್ಯಾತನಂದ ಸ್ವಾಮಿಜಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಗಂಗಾಧರ ಗೌಡ, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಪ್ರಭಾಕರ ಬಂಗೇರ, ರುಕ್ಮಯ ಪೂಜಾರಿ, ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಸತ್ಯಜಿತ್ ಸುರತ್ಕಲ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಪ್ರತಿಭಾ ಕುಳಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ್, ಕಲ್ಲಡ್ಕ ಪ್ರಭಾಕರ ಭಟ್ , ಸಿಯೋನ್ ಆಶ್ರಮದ ಯು.ಸಿ.ಪೌಲೋಸ್, ಸೋಮನಾಥ ನಾಯಕ್, ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಶ್ರೀ ಗುರುದೇವ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ಅಂತಿಮ ನಮನ ಸಲ್ಲಿಸಿದರು.

ಹರಿದ ಕಂಬಿನಿ ಧಾರೆ: ಅಂತಿಮ ದರ್ಶನ ಪಡೆಯಲು ಬಂದವರ ಕಣ್ಣಾಲಿಗಳು ತುಂಬಿದ್ದವು. ಅಗಲಿದ ನಾಯಕನಿಗೆ ಕಂಬನಿಯ ಧಾರೆ ಹರಿಸಿದರು. ಅವರಿಂದ ನೆರವು ಪಡೆಸಿದ್ದನ್ನು ಸ್ಮರಿಸಿ ಕಣ್ಣೀರಿಟ್ಟರು.

ಬೆಳ್ತಂಗಡಿ, ಮದ್ದಡ್ಕ ಬಂದ್‌: ಬೆಳ್ತಂಗಡಿ ಹಾಗೂ ಮದ್ದಡ್ಕ ಪಟ್ಟಣದಲ್ಲಿ ಹೊಟೇಲ್‌ಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂಗೇರ ಅವರಿಗೆ ಗೌರವ ಸಲ್ಲಿಸಿದರು. ಅಂತಿಮ ನಮನ ಸಲ್ಲಿಸಲು ಬೆಳ್ತಂಗಡಿಯ ಅವರ ಮನೆಗೆ, ತಾಲ್ಲೂಕು ಕ್ರೀಡಾಂಗಣಕ್ಕೆ, ಬಳಿಕ ಕುವೆಟ್ಟು ಗ್ರಾಮದ ಅವರ ಕೇದೆ ಮನೆಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸಾಗಿ ಬಂದಿದ್ದರಿಂದ ಪಟ್ಟಣದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಚಿತೆಗೆ ಮಗಳಿಂದ ಅಗ್ನಿಸ್ಪರ್ಶ: ವಸಂತ ಬಂಗೇರರ ಅವರ ಅಂತ್ಯಕ್ರಿಯೆ ಅವರು ಬೆಳೆದ ಕುವೆಟ್ಟು ಗ್ರಾಮದ ಕೇದೆ ಮನೆತನದ ಜಾಗದಲ್ಲಿ ಗುರುವಾರ ಸಂಜೆ ನೆರವೇರಿತು. ಸ್ಥಳದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು, ಹಾಗೂ ಕುಟುಂಬಸ್ಥರು, ಬಂಗೇರರ ಅಭಿಮಾನಿಗಳ ಮಧ್ಯೆ ಕಿರಿಯ ಮಗಳು ಬಿನುತಾ ಬಂಗೇರ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT