ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧೆಡೆ ಭರ್ಜರಿ ಮಳೆ: ಮೈದುಂಬಿದ ಜಲಪಾತಗಳು

ನದಿಗಳಲ್ಲಿ ನೀರಿನ ಹರಿವೂ ಹೆಚ್ಚಳ: ತುಂಗಾ ಜಲಾಶಯದ 14 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು
Published 3 ಜುಲೈ 2024, 19:40 IST
Last Updated 3 ಜುಲೈ 2024, 19:40 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ)/ಶಿವಮೊಗ್ಗ: ರಾಜ್ಯದ ಹಲವೆಡೆ ಬುಧವಾರವೂ ಧಾರಾಕಾರ ಮಳೆ ಯಾಗಿದ್ದು ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಖಾನಾಪುರ ತಾಲ್ಲೂಕಿನಲ್ಲಿ  ಧಾರಾಕಾರ ಮಳೆ ಮುಂದುವರೆಯಿತು. ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಭೀಮಗಡ ಮತ್ತು ಲೋಂಡಾ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಪ್ರಾರಂಭಗೊಂಡ ಮಳೆ ಬುಧವಾರ ದಿನವಿಡೀ ಸುರಿಯಿತು. ಇದರಿಂದ ಕಾಡಿನ ಜಲಪಾತಗಳೆಲ್ಲ ಧುಮ್ಮಿಕ್ಕುತ್ತಿವೆ.

ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಭೀಮಗಡ ಅರಣ್ಯದಲ್ಲಿ ಕಳೆದ ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಮಹದಾಯಿ ನದಿ ಮತ್ತು ಅದನ್ನು ಸಂಗಮಿಸುವ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಕಣಕುಂಬಿ ಸೇರಿ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲೂ ಭಾರೀ ಮಳೆ ಆಗುತ್ತಿದ್ದು ಮಲಪ್ರಭಾ ನದಿಯಲ್ಲೂ ನೀರಿನ ಹರಿವು ಹೆಚ್ಚಿದೆ. ಹಬ್ಬನಹಟ್ಟಿ ಗ್ರಾಮದ ಆಂಜನೇಯ ದೇವಾಲಯ ಕಟ್ಟಡದ ಬಹುಭಾಗ ಜಲಾವೃತಗೊಂಡಿದೆ.

ತಾಲ್ಲೂಕಿನ ಎಂಟು ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಕೆಲವೆಡೆ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ.

ಚಿಕ್ಕೋಡಿ ವರದಿ: ಮಹಾರಾಷ್ಟ್ರದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿಗೆ 24 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ಅಡಿ ನೀರು ಹರಿದು ಬಂದಿದೆ. 105 ಟಿಎಂಸಿ ಅಡಿ ಸಾಮರ್ಥ್ಯದ ಈ ಅಣೆಕಟ್ಟಿಗೆ ಬುಧವಾರ 23 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಆರಿದ್ರಾ ಮಳೆ: ಮಲೆನಾಡಿನಲ್ಲಿ ಆರಿದ್ರಾ ಮಳೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಸರಾಸರಿ 19.64 ಸೆಂ.ಮೀ ಮಳೆ ಸುರಿದಿದೆ. ಹೀಗಾಗಿ ತುಂಗಾ, ಭದ್ರಾ ಜಲಾಶಯಗಳಿಗೆ ಒಳಹರಿವು ಹೆಚ್ಚಳಗೊಂಡಿದೆ. ಜಲಾನಯನ ಪ್ರದೇಶದಲ್ಲಿ ಕೊಂಚ ಮಳೆ ಪ್ರಮಾಣ ತಗ್ಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 24 ಗಂಟೆಯಲ್ಲಿ ಒಂದು ಸಾವಿರ ಕ್ಯುಸೆಕ್‌ನಷ್ಟು ಒಳಹರಿವು ತಗ್ಗಿದೆ.

14 ಕ್ರಸ್ಟ್‌ಗೇಟ್ ಮೂಲಕ ನೀರು: ಗಾಜನೂರು ಬಳಿಯ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ.  ತುಂಗಾ ಜಲಾಶಯಕ್ಕೆ ಒಳಹರಿವು  ಏರಿಕೆಯಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬುಧವಾರದಿಂದ ಜಲಾಶಯದ 22 ಕ್ರಸ್ಟ್‌ಗೇಟ್‌ಗಳ ಪೈಕಿ 14 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.

3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಈಗ ಜಲಾಶಯ ಭರ್ತಿಯಾಗಿದೆ.

ಭದ್ರಾ ಒಳಹರಿವು ಹೆಚ್ಚಳ: ಭದ್ರಾ ಜಲಾಶಯದಲ್ಲಿ 5,324 ಕ್ಯುಸೆಕ್‌ ಒಳ ಹರಿವು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿನ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹಾಗೂ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಜೋರು ಮಳೆ ಮುಂದುವರಿದಿದೆ.

ಮಡಿಕೇರಿ ನಗರದಲ್ಲಿ ಮಧ್ಯಾಹ್ನ ಜೋರು ಗಾಳಿಯೊಂದಿಗೆ ಬಿರುಸಿನ ಮಳೆಯಾಯಿತು. ಸೋಮವಾರಪೇಟೆ ಪಟ್ಟಣದಲ್ಲೂ ವರ್ಷಧಾರೆಯಾಗಿದೆ.

ಮೈಸೂರು ನಗರದಲ್ಲಿ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು.

ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಬುಧವಾರ ಬಿರುಸಿನ ಮಳೆ ಸುರಿಯಿತು. ಪ್ರಮುಖ ನದಿ, ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಭಟ್ಕಳ, ಶಿರಸಿ, ಯಲ್ಲಾಪುರ, ದಾಂಡೇಲಿ ತಾಲ್ಲೂಕಿನ ಹಲವೆಡೆ ನಿರಂತರ ಮಳೆ ಸುರಿಯುತ್ತಿದೆ. ಉಳಿದ ತಾಲ್ಲೂಕುಗಳಲ್ಲೂ ಮಳೆಯಾಗಿದೆ.

ಕರಾವಳಿಯಲ್ಲೂ ವರ್ಷಧಾರೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಿಗ್ಗೆ ಧಾರಾಕಾರ ಮಳೆಯಾಗಿತ್ತು. ಮಧ್ಯಾಹ್ನದ ನಂತರ ಮತ್ತೆ ಬಿರುಸಿನ ಮಳೆ ಸುರಿಯಿತು.

ಉಡುಪಿ ಜಿಲ್ಲೆಯ ವಿವಿಧೆಡೆ ಬುಧವಾರ ಬೆಳಿಗ್ಗೆ ಹಾಗೂ ಸಂಜೆ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಉಡುಪಿ ನಗರದ ಕಡೇಕಾರ್‌ ಬಳಿ ಬೃಹತ್‌ ಮರ ಉರುಳಿ, ಮನೆ ಹಾಗೂ ಅಂಗಡಿಗೆ ಹಾನಿಯುಂಟಾಗಿದೆ. ಪುತ್ತೂರು ಮತ್ತು ಶಿವಳ್ಳಿಯಲ್ಲಿ ಗಾಳಿಗೆ ಮನೆಗಳು ಭಾಗಶಃ ಹಾನಿಗೊಂಡಿವೆ.

ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಬೀಸಿದ ಭಾರಿ ಸುಳಿಗಾಳಿಗೆ ಮನೆ, ತೋಟಗಳಿಗೆ ಹಾನಿಯಾಗಿದೆ. ಲಕ್ಷ್ಮೀ ಸಂಜೀವ ರೈ, ಸದಾನಂದ ಶೆಟ್ಟಿ, ಸುಧಾಕರ ಶೆಟ್ಟಿ, ರಾಜನ್‌ ಫಿಲಿಪ್ಸ್‌ ಅವರ ಅಡಿಕೆ, ತೆಂಗಿನ ತೋಟಕ್ಕೆ  ಹಾನಿಯಾಗಿದೆ. 600 ಕ್ಕೂ ಹೆಚ್ಚು ಅಡಿಕೆ ಮರ, 25 ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ. 

ಮಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ- 275ರಲ್ಲಿ ಸಂಪಾಜೆಯ ದೇವರಕೊಲ್ಲಿ ಸಮೀಪ ಹಾಗೂ ಮಾಕುಟ್ಟ– ಪೆರಂಮಾಡಿ ರಾಜ್ಯ ಹೆದ್ದಾರಿ- 91ರಲ್ಲಿ ಮರ ಉರುಳಿ ಬಿದ್ದಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದೆ. ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಗೆ ನೀರಿನ ಕೊರತೆಯಾಗಿತ್ತು. ಮಳೆಯಾಗಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT