ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಜೋರು ಮಳೆ; ಸಿಡಿಲು ಬಡಿದು ಮೂವರ ಸಾವು

Published 1 ಜೂನ್ 2023, 23:13 IST
Last Updated 1 ಜೂನ್ 2023, 23:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಗದಗ, ವಿಜಯಪುರ, ಮಂಡ್ಯ ಜಿಲ್ಲೆಯಲ್ಲಿ ಗುರುವಾರ ಜೋರು ಮಳೆ ಸುರಿಯಿತು. ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. 

ಮದುವೆಗೆ ತೆರಳಿದ್ದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಉತ್ತನೂರು ಗ್ರಾಮದ ಶೇಖರಗೌಡ(32) ಮತ್ತು ಬಸವನಗೌಡ (38) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. 

ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ, ಕುರುಗೋಡು ತಾಲ್ಲೂಕಿನ ಕೊಳೂರು ಮದಿರೆ ಮತ್ತು ಸಿರುಗುಪ್ಪ ತಾಲ್ಲೂಕಿನ ಬೊಮ್ಮಲಾಪುರದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಂಧ್ರ ಪ್ರದೇಶದ ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎ೦ದು ಶೇಖರಗೌಡ ಸಹೋದರ ಅಯ್ಯನಗೌಡ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ಹೊರವಲಯದ ಜಮೀನಿನಲ್ಲಿ  ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ನೂರ್ ಅಹ್ಮದ್ ರಾಜಾಸಾಬ್‌ (23) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಗೆ 61.19 ಎಕರೆ ಬಾಳೆಗೆ ಹಾನಿಯಾಗಿದೆ. ತಾಲ್ಲೂಕಿನ ಚಿಕ್ಕಜಾಯಿಗನೂರು, ದೇವಸಮುದ್ರ, ಶಾಂತಿನಗರ, ನೆಲ್ಲೂಡಿ ಸೇರಿ ಕೆಲ ಗ್ರಾಮಗಳಲ್ಲಿ ಹಲವು ಶೆಡ್‍ಗಳಿಗೆ ಹಾಕಿದ ತಗಡುಗಳು ಹಾರಿ ಹೋಗಿವೆ. ಮರ, ವಿದ್ಯುತ್ ಪರಿವರ್ತಕ, ಕಂಬಗಳು ಬಿದ್ದಿವೆ. ಎಮ್ಮಿಗನೂರು ಗ್ರಾಮದ ತಿಮ್ಮನಕೇರಿ ಕ್ಯಾಂಪ್‍ನಲ್ಲಿ ಭತ್ತದ ಹುಲ್ಲಿನ ಬಣವಿ ಸಿಡಿಲಿಗೆ ಸಂಪೂರ್ಣ ಸುಟ್ಟು ಹೋಗಿದೆ.  

ಕುರುಗೋಡಿನಲ್ಲಿ ಬಿರುಗಾಳಿಗೆ ತಾಲ್ಲೂಕಿನ ಗುತ್ತಿಗನೂರು ಗ್ರಾಮದಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ನಾಲ್ಕು ಬೇವಿನ ಮರಗಳು ನೆಲಕ್ಕುರುಳಿವೆ.

ಧಾರವಾಡ ಹಾಗೂ ಹುಬ್ಬಳ್ಳಿ ನಗರ ಸೇರಿದಂತೆ ವಿವಿಧೆಡೆ ಬುಧವಾರ ತಡರಾತ್ರಿ 2 ಗಂಟೆ ರಭಸದ ಮಳೆ ಯಾಯಿತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೊಯಿಡಾ, ಕಾರವಾರ, ಅಂಕೋಲಾದಲ್ಲಿ ಮಳೆಯಾಗಿದೆ.  

ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್‌ ಮತ್ತು ಮರಗಳು ನೆಲಕ್ಕುರುಳಿವೆ. ಮೈಸೂರು ನಗರದಲ್ಲೂ ತಾಸಿಗೂ ಹೆಚ್ಚು ಜೋರು ಮಳೆಯಾಯಿತು.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದ ವೈದ್ಯನಾಥಪುರ, ಆಲೂರು, ನೀಲಕಂಠನಹಳ್ಳಿ, ಕೆ.ಹೊನ್ನಲಗೆರೆ, ಕೆಸ್ತೂರು, ಮಲ್ಲನಕುಪ್ಪೆ ಸೇರಿದಂತೆ ಹಲವು ಕಡೆ 100ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಕೆಲ ಮನೆಗಳ ಸಿಮೆಂಟ್ ಶೀಟ್‌ ಹಾರಿ ಹೋಗಿವೆ.

ಮಳವಳ್ಳಿ ತಾಲ್ಲೂಕಿನ ಜವನಗಹಳ್ಳಿ ಗುಡ್ಡದ ಸಮೀಪ ಕೊಳ್ಳೇಗಾಲ ರಸ್ತೆಯಲ್ಲಿ ದೊಡ್ಡ ಮರ ಬುಡಸಮೇತ ಮುರಿದು ಬಿದ್ದು  ಮಧ್ಯಾಹ್ನದವರೆಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಾಹನಗಳು ಜವನಗಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ– 209ರ ಬೈಪಾಸ್ ರಸ್ತೆಯ ಮೂಲಕ ಸಂಚರಿಸಬೇಕಾಯಿತು.  ಬಾಣಸಮುದ್ರ ಗ್ರಾಮದ ಹೊರವಲಯದಲ್ಲಿ ರೇಷ್ಮೆ ಸಾಕಣೆ ಕೇಂದ್ರದ ಚಾವಣಿ ಹಾರಿ ಹೋಗಿ ನಷ್ಟ ಸಂಭವಿಸಿದೆ.

‘ಯೆಲ್ಲೊ ಅಲರ್ಟ್’ ಮುಂದುವರಿಕೆ

ರಾಜ್ಯದ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ, ಉತ್ತರ ಒಳನಾಡಿನ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಕರಾವಳಿಯ ಒಂದೆರಡು ಕಡೆ ಬಿರುಗಾಳಿ ಸಹಿತ ಗುಡುಗು ಉಂಟಾಗುವ ಸಾಧ್ಯತೆಯಿದ್ದು, ಗಾಳಿಯ ವೇಗವು ಗಂಟೆಗೆ 40ರಿಂದ 50 ಕಿ.ಮೀ. ಇರಲಿದೆ. ಬೆಂಗಳೂರಿನಲ್ಲಿ   ಸಂಜೆ ಅಥವಾ ರಾತ್ರಿಯ ವೇಳೆ ಒಂದೆರಡು ಸಲ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧೆಡೆ ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.

ಗುರುವಾರ ಬೆಳಿಗ್ಗೆ 8.30ಕ್ಕಿಂತ ಹಿಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ. ಹಾವೇರಿಯ ಶಿಗ್ಗಾಂವಿ ಹಾಗೂ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಗರಿಷ್ಠ (ತಲಾ 5 ಸೆಂ.ಮೀ.) ಮಳೆಯಾಗಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT