ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಿಸುವ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Published 17 ನವೆಂಬರ್ 2023, 15:42 IST
Last Updated 17 ನವೆಂಬರ್ 2023, 15:42 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನ ಜಿಲ್ಲೆಯ ಭುವನಹಳ್ಳಿ, ಕೆಂಚನಹಳ್ಳಿ, ಸಮುದ್ರದಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಸತಿರಹಿತರಿಗೆ ಮನೆ ನಿರ್ಮಿಸುವ ₹1,017 ಕೋಟಿ ಮೊತ್ತದ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕಾಟಾಚಾರಕ್ಕೆ ಸಲ್ಲಿಸಲಾಗಿದೆ‘ ಎಂದು ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್, ವಜಾಗೊಳಿಸಿದೆ.

ಈ ಸಂಬಂಧ ಅಡುವಳ್ಳಿಯ ಅಭಿಷೇಕ್ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.‌

ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರು ತಮ್ಮ ಹಿನ್ನೆಲೆಯ ವಿವರಗಳನ್ನು ನೀಡದ ಕಾರಣ ಅವರು ಯಾವ ಉದ್ದೇಶದಿಂದ ಪಿಐಎಲ್ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇಲ್ಲವಾಗಿದೆ. ನಿಯಮಗಳ ಪ್ರಕಾರ ಪಿಐಎಲ್ ಸಲ್ಲಿಸುವ ಮುನ್ನ, ಅರ್ಜಿದಾರರು ಯಾವ ವಿಷಯದ ಬಗ್ಗೆ ಅರ್ಜಿ ಸಲ್ಲಿಸಲು ಬಯಸುತ್ತಾರೋ ಆ ವಿಷಯದ ಬಗ್ಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿರಬೇಕು. ಆದರೆ, ಈ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಿದ ನಂತರ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿತು.

‘ಪಿಐಎಲ್ ಸಲ್ಲಿಸುವ ಸಂಬಂಧ ಹೈಕೋರ್ಟ್ 2018ರಲ್ಲೇ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳು 2019ರಿಂದಲೂ ಜಾರಿಯಲ್ಲಿವೆ. ಈ ನಿಯಮಗಳ ಅನುಸಾರ ಅರ್ಜಿದಾರರು ತಮ್ಮ ಹೆಸರು, ಇ–ಮೇಲ್ ವಿಳಾಸ, ವೃತ್ತಿ, ಹಿನ್ನೆಲೆ, ಆದಾಯದ ಮೂಲ ಸೇರಿದಂತೆ ಸಮಗ್ರ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಬೇಕಿತ್ತು. ಆದರೆ, ಅರ್ಜಿಯಲ್ಲಿ ಹೆಸರು ಬಿಟ್ಟರೆ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT