ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ, ಸಿಬಿಐಗೆ ಹೈಕೋರ್ಟ್ ನೋಟಿಸ್‌

ಯತ್ನಾಳ, ಸಿಬಿಐ ವಿಚಾರಣೆ: ಅರ್ಜಿ ವಿಸ್ತೃತ ಪೀಠಕ್ಕೆ ಶಿಫಾರಸು
Published 6 ಜನವರಿ 2024, 0:19 IST
Last Updated 6 ಜನವರಿ 2024, 0:19 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಘೋಷಿತ ಆದಾಯವನ್ನು ಮೀರಿ ಆಸ್ತಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿರುವ ರಿಟ್‌ ಅರ್ಜಿ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ವಹಿಸುವಂತೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಶಿಫಾರಸು ಮಾಡಿದೆ. ಶಿವಕುಮಾರ್, ಸಿಬಿಐ, ಲೋಕಾಯುಕ್ತಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿಬಿಐ ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬಾರದು ಎಂದು ಕೂಡ ಸಿಬಿಐ ಕೋರಿದೆ.

ಬಸನಗೌಡ ಪಾಟೀಲ ಯತ್ನಾಳ ಪರ ವಕೀಲ ವೆಂಕಟೇಶ್ ಪಿ.ದಳವಾಯಿ, ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಮತ್ತು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ವಾದವನ್ನು ನ್ಯಾಯಪೀಠ 1 ಗಂಟೆ 20 ನಿಮಿಷಕ್ಕೂ ಹೆಚ್ಚು ಕಾಲ ಆಲಿಸಿತು.

‘ಕರ್ನಾಟಕ ಹೈಕೋರ್ಟ್ ಕಾಯ್ದೆ-1961ರ ಕಲಂ 8ರ ಪ್ರಕಾರ ಬಲಿಷ್ಠವಾದ ನ್ಯಾಯಪೀಠ ರಚಿಸುವ ನಿಟ್ಟಿನಲ್ಲಿ ಪ್ರಕರಣದ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ರಚಿಸುವ ನ್ಯಾಯಪೀಠವು ಯುದ್ಧೋಪಾದಿಯಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಬೇಕು ಎಂಬುದಕ್ಕೆ ಉಭಯ ಪಕ್ಷಗಾರರ ಸಹಮತ ಇದೆ. ಈ ನ್ಯಾಯಪೀಠವೂ ಇದೇ ಅಭಿಪ್ರಾಯವನ್ನು ಹೊಂದಿದೆ’ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಆದೇಶಿಸಿದರು. 

‘ವಿಸ್ತೃತ ಪೀಠವು ಪ್ರಕರಣವನ್ನು ತೀರ್ಮಾನಿಸುವತನಕ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಬಾರದು’ ಎಂದು ಸಿಬಿಐ ವಕೀಲರು ಕೋರಿದ್ದಾರೆ; ‘ಸಿಬಿಐ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗುವಂತಿಲ್ಲ’ ಎಂದು ಅಡ್ವೊಕೇಟ್ ಜನರಲ್ ಅವರು ಮನವಿ ಮಾಡಿದರು. ಈ ಎರಡೂ ವಿನಂತಿಗಳನ್ನು ನ್ಯಾಯಮೂರ್ತಿಯವರು ತಮ್ಮ ಆದೇಶದಲ್ಲಿ ಯಥಾವತ್‌ ದಾಖಲಿಸಿದರು.

ಇದಕ್ಕೂ ಮುನ್ನ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ಎರಡೂ ಅರ್ಜಿಗಳನ್ನು ವಿರೋಧಿಸಿದರು. ಈ ಎರಡೂ ಅರ್ಜಿಗಳ ಅರ್ಜಿದಾರರಿಗೆ ಅರ್ಜಿ ಸಲ್ಲಿಸುವ ಅಧಿಕಾರ ವ್ಯಾಪ್ತಿ ಇಲ್ಲ. 2013ರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಕ್ರಿಮಿನಲ್‌ ಪ್ರಕರಣದಲ್ಲಿ ಮೂರನೇ ವ್ಯಕ್ತಿ ನ್ಯಾಯಿಕ ಪ್ರಕ್ರಿಯೆಯಲ್ಲಿ ಮೂಗು ತೂರಿಸುವಂತಿಲ್ಲ ಎಂದು ಆಕ್ಷೇಪಿಸಿದರು.

ವೆಂಕಟೇಶ್‌ ದಳವಾಯಿ ಮತ್ತು ಪ್ರಸನ್ನ ಕುಮಾರ್, ‘ದೆಹಲಿ ವಿಶೇಷ ಪೊಲೀಸ್ ಕಾಯ್ದೆ-1946ರ ಕಲಂ 6ರ ಅಡಿಯಲ್ಲಿ, ರಾಜ್ಯ ಸರ್ಕಾರವು ಒಮ್ಮೆ ಸಿಬಿಐ ತನಿಖೆಗೆ ಅನುಮತಿಸಿದ ಮೇಲೆ, ಅದನ್ನು ಹಿಂಪಡೆಯಲಾಗದು. ಯಾವುದೇ ಸಂದರ್ಭದಲ್ಲೂ ಈ ಆದೇಶವನ್ನು ಪೂರ್ವಾನ್ವಯವಾಗುವಂತೆ ಹಿಂಪಡೆಯಲಾಗದು. ಸಿಬಿಐ ತನಿಖೆ ಮುಂದುವರಿಸಲು, ಕಾನೂನಿನ ಪ್ರಕಾರ ಅಂತಿಮ ವರದಿ ಸಲ್ಲಿಸಲು ಅನುಮತಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

****

ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿ ಸೇರುವ ಎಲ್ಲ ನಾಯಕರ ಮೇಲಿನ ಕಳಂಕ ನಿವಾರಣೆಯಾಗಿ ಬಿಡುತ್ತದೆ. ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT