ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಪತ್ರಕ್ಕೆ ಕಿಮ್ಮತ್ತುಕೊಡದ ಜಿಟಿಡಿ

ಸಿಂಡಿಕೇಟ್ ನಾಮನಿರ್ದೇಶಿತರ ಸದಸ್ಯತ್ವ ರದ್ದುಪಡಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ
Last Updated 18 ಜುಲೈ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶಿತರ ಸದಸ್ಯತ್ವ ರದ್ದುಪಡಿಸಿ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶ, ಜೆಡಿಎಸ್‌– ಕಾಂಗ್ರೆಸ್‌ ದೋಸ್ತಿ ಮಧ್ಯೆ ರಗಳೆಗೆ ಕಾರಣವಾಗುವ ಸಂಭವ ಇದೆ.

ಸಮನ್ವಯ ಸಮಿತಿಯ ಸಭೆಯಲ್ಲಿ ಚರ್ಚೆಯಾಗದೇ ಈ ತೀರ್ಮಾನ ಕೈಗೊಂಡಿರುವುದಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಮೈತ್ರಿ ಮಧ್ಯದ ಮುನಿಸಿಗೆ ಇದು ನೆಪವಾಗಬಹುದು ಎಂದು ಕಾಂಗ್ರೆಸ್‌ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಅವಧಿಯಲ್ಲಿ ನೇಮಕಗೊಂಡ ಸದಸ್ಯರನ್ನು ಬದಲಿಸದಂತೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಅಧ್ಯಕ್ಷ ಸಿದ್ದರಾಮಯ್ಯ ಜುಲೈ 7ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದರು.

‘ವಿಶ್ವವಿದ್ಯಾಲಯಗಳಿಗೆ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲ ವರ್ಗದವರನ್ನು ಸಿಂಡಿಕೇಟ್ ಸದಸ್ಯರು/ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಎಲ್ಲ ಸದಸ್ಯರನ್ನು ಬದಲಾವಣೆ ಮಾಡದೇ ಮುಂದುವರಿಸುವಂತೆ ಕೋರಿದೆ’ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದರು.

ಈ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ, ‘ಸರ್ಕಾರ ಬದಲಾದಂತೆ ನಾಮನಿರ್ದೇಶಿತ ಸದಸ್ಯರೂ ಬದಲಾಗುತ್ತಾರೆ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ’ ಎಂದು ವ್ಯಂಗ್ಯವಾಡಿದ್ದರು.

ಬೆಂಗಳೂರು, ಮೈಸೂರು, ಗುಲ್ಬರ್ಗ, ಮಂಗಳೂರು, ತುಮಕೂರು, ದಾವಣಗೆರೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಕುವೆಂಪು, ಮಹಿಳಾ, ರಾಣಿಚೆನ್ನಮ್ಮ, ವಿಜಯನಗರ ಶ್ರೀಕೃಷ್ಣದೇವರಾಯ, ಕರ್ನಾಟಕ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ
ವನ್ನು ಮತ್ತು ಜಾನಪದ, ಕನ್ನಡ, ಕರ್ನಾಟಕ ಮುಕ್ತ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಕಾರ್ಯಕಾರಿ ಸಮಿತಿ, ಪರಿಷತ್, ಆಡಳಿತ ಮಂಡಳಿಗಳಿಗೆ ಮಾಡಿದ್ದ ನಾಮನಿರ್ದೇಶನವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸದಸ್ಯರಾಗಲು ಪೈಪೋಟಿ

17 ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರಾಗಲು ಪೈಪೋಟಿ ಆರಂಭವಾಗಿದೆ.

ತಮ್ಮನ್ನು ಪರಿಗಣಿಸುವಂತೆ ರಾಜಕೀಯ ಮುಖಂಡರು, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತರಾದವರು, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸುತ್ತಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಜೆಡಿಎಸ್ ನಿಯಂತ್ರಣದಲ್ಲಿರುವುದರಿಂದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಗೆ ಸಂಕಟ ಎದುರಾಗಿದೆ. ಕೆಪಿಸಿಸಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮೂಲಕ ಉನ್ನತ ಶಿಕ್ಷಣ ಸಚಿವರ ಮೇಲೆ ಒತ್ತಡ ತರುವ ಪ್ರಯತ್ನ ನಡೆದಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT