ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೃಹ ಇಲಾಖೆಯನ್ನು ಪರಮೇಶ್ವರ್ ಅವರಿಂದ ಯಾರೋ ಹೈಜಾಕ್ ಮಾಡಿದ್ದಾರೆ: ಆರ್. ಅಶೋಕ್

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಾಗ್ದಾಳಿ
Published 19 ಮೇ 2024, 11:04 IST
Last Updated 19 ಮೇ 2024, 11:04 IST
ಅಕ್ಷರ ಗಾತ್ರ

ಬೆಂಗಳೂರು: ‘ಗೃಹ ಇಲಾಖೆಯು ಜಿ.ಪರಮೇಶ್ವರ ಅವರ ಕೈಯಲ್ಲಿ ಇಲ್ಲ. ಇದನ್ನು ಬೇರೆ ಯಾರೋ ಹೈಜಾಕ್‌ ಮಾಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಭೇಟಿಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಕೊಲೆ, ಕಳ್ಳತನ,ದರೋಡೆ ಹೆಚ್ಚಾಗಿದೆ. ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ. ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರವೇ ಅ‍ಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂದು ಕಿಡಿಕಾರಿದರು.

ಪೆನ್‌ಡ್ರೈವ್‌ ವಿಚಾರದಲ್ಲಿ ದೇವರಾಜೇಗೌಡ ಸತ್ಯವನ್ನೇ ಹೇಳಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಪ್ರೈನ್‌ಡ್ರೈವ್‌ ಬಿಡುಗಡೆ ಮಾಡಿದರು ಎಂದು ಸುಳ್ಳು ಹೇಳುವುದಕ್ಕಾಗಿ ಡಿ.ಕೆ.ಶಿವಕುಮಾರ್‌ ಅಮಿಷ ಒಡ್ಡಿರುವ ವಿಚಾರದಲ್ಲಿ ಸತ್ಯವಿದೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಬಂಧನವಾಗಿದೆ. ಮಾಧ್ಯಮಗಳಲ್ಲಿ ಸತ್ಯ ಸಂಗತಿ ಪ್ರಸಾರ ಆಗುವುದನ್ನು ತಡೆಯುವ ಉದ್ದೇಶ ಶಿವಕುಮಾರ್ ಅವರದರು ಎಂದರು.

ಸುರ್ಜೇವಾಲ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಅದೇ ರೀತಿಯಲ್ಲಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯನ್ನು ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದಂತೆ ಚಾಲಕನನ್ನು ಈವರೆಗೆ ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳತ್ತಾರೆ ಎಂದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ. ಆದರೆ, ವಿಡಿಯೊ ಹಂಚಿದವರ ವಿರುದ್ಧ ಕ್ರಮ ವಹಿಸಿಲ್ಲ.  ಹೀಗೆ ಕಾಂಗ್ರೆಸ್‌ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಪ್ರಕರಣ ಮುಚ್ಚಿ ಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದು ಅಶೋಕ ದೂರಿದರು.

ದೇವೇಗೌಡರ ಭೇಟಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿದ್ದೇನೆ. ಇದೇ ವೇಳೆ ರಾಜ್ಯ ರಾಜಕೀಯದ ಕುರಿತಾಗಿ ಕೆಲವು ಮಾತನಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT