ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40ರ ಕಮಿಷನ್‌ಗೆ ಕಾರಣರಾದ ಅಧಿಕಾರಿಗಳ ಹೊರಗಿಡಿ: ಸುಧಾಮ್ ದಾಸ್

Published 20 ಫೆಬ್ರುವರಿ 2024, 15:39 IST
Last Updated 20 ಫೆಬ್ರುವರಿ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ಮೀಸಲಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದಾದರೆ, ಅದನ್ನು ಈಗಲೇ ಪ್ರತ್ಯೇಕವಾಗಿ ತೆಗೆದಿಡಿ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ವಾಪಸ್ ಪಡೆಯುವುದು ಬೇಡ ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಸುಧಾಮ್ ದಾಸ್ ಸಲಹೆ ನೀಡಿದರು.

ವಿಧಾನಪರಿಷತ್ತಿನಲ್ಲಿ ಬಜೆಟ್ ಕುರಿತ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಎಸ್‌ಸಿಎಸ್‌ಪಿ–ಟಿಎಸ್‌ಪಿಯಡಿ ಈ ಸಾಲಿನಲ್ಲಿ ₹39,121 ಕೋಟಿ ಅನುದಾನ ಒದಗಿಸಲಾಗಿದೆ. ಅಗತ್ಯವಾದರೆ ಗ್ಯಾರಂಟಿ ಯೋಜನೆಗಳಿಗೆ ಈ ಮೊತ್ತದಲ್ಲಿನ ಪಾಲನ್ನು ಬಳಸಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. ಹಾಗೊಂದು ವೇಳೆ ಬಳಸುವುದಾದರೆ, ಪರಿಶಿಷ್ಟ ಸಮುದಾಯದವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಬೇಕಾದ ಅನುದಾನವನ್ನು ಈಗಲೇ ಪ್ರತ್ಯೇಕವಾಗಿ ತೆಗೆದಿಡಿ. ಈಗ ಪೂರ್ಣ ಮೊತ್ತಕ್ಕೆ ಅನುಮೋದನೆ ಪಡೆದು, ಮತ್ತೆ ಅದರಲ್ಲಿ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದರು.

₹39,121 ಕೋಟಿ ಮೊತ್ತವನ್ನು ಮೀಸಲಿದ್ದು, ಅದರಲ್ಲೇ ಗ್ಯಾರಂಟಿಗೆ ಬಳಸಿದ ಬಳಿಕ ಪರಿಶಿಷ್ಟ ಜಾತಿ–‍ಪಂಗಡದವರಿಗೆ ನೀಡಿದ್ದೇವೆ ಎಂದು ಹೇಳುತ್ತಾ ಹೋಗುವುದು ಸರಿಯಲ್ಲ. ಕೊಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ಸಮುದಾಯದ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಎಂದರು.

ಗ್ಯಾರಂಟಿಗಳಿಗೆ ಎತ್ತಿಟ್ಟ ಮೊತ್ತ ಕಳೆದು ಎಸ್‌ಸಿಎಸ್‌ಪಿ–ಟಿಎಸ್‌ಪಿಯಡಿ ಸಿಗಬಹುದಾದ ಮೊತ್ತವನ್ನು ಈ ಸಮುದಾಯದ ಏಳಿಗೆಗಾಗಿಯೇ ಸಮರ್ಪಕವಾಗಿ ಬಳಸಬೇಕು. ಅದಕ್ಕಾಗಿ, ಸಮರ್ಥ ಅಧಿಕಾರಿಗಳನ್ನು ಇಲಾಖೆಗೆ ನಿಯೋಜಿಸಬೇಕು ಎಂದು ಅವರು ಹೇಳಿದರು.

ಗ್ಯಾರಂಟಿಗೆ ಹಣ ನೀಡಿರುವುದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಒಟ್ಟು ಬಜೆಟ್‌ನ ₹3.71 ಲಕ್ಷ ಕೋಟಿಯಲ್ಲಿ ಗ್ಯಾರಂಟಿಗೆ ನೀಡಿರುವುದು ₹52 ಸಾವಿರ ಕೋಟಿ ಮಾತ್ರ. ಅಂದರೆ ಬಜೆಟ್‌ನ ಶೇ 13ರಷ್ಟು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40ರಷ್ಟು ಕಮಿಷನ್‌ಗೆ ಹೋಗುತ್ತಿತ್ತು. ಆ ಮೊತ್ತಕ್ಕೆ ಹೋಲಿಸಿದರೆ, ಗ್ಯಾರಂಟಿಗೆ ಬಳಕೆಯಾಗಿರುವುದು ಅತ್ಯಲ್ಪ ಎಂದರು.

ಭ್ರಷ್ಟ ಅಧಿಕಾರಿಗಳು ಬೇಡ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40ರಷ್ಟು ಕಮಿಷನ್ ನಡೆಯುತ್ತಿದೆ ಎಂಬುದನ್ನು ನಮ್ಮ ಪಕ್ಷ ಪ್ರಧಾನವಾಗಿ ಪ್ರತಿಪಾದಿಸಿತ್ತು. ಆ ಹಗರಣದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಪಾಲ್ಗೊಂಡಿದ್ದ ಅಧಿಕಾರಿಗಳು ಈಗಲೂ ವಿವಿಧ ಇಲಾಖೆಗಳ ಆಯಕಟ್ಟಿನ ಹುದ್ದೆಗಳಲ್ಲಿ ಇದ್ದಾರೆ. ಅಂತಹ ಅಧಿಕಾರಿಗಳನ್ನು ಮೂಲೆಗೆ ಸರಿಸಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಿಗೆ ಅಧಿಕಾರ ಕೊಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT