ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಧಿ’ ಬಳಕೆಗೆ ಶಾಸಕರ ನಿರಾಸಕ್ತಿ

2023–24ನೇ ಸಾಲಿನಲ್ಲಿ ಕೇವಲ ₹ 218.23 ಕೋಟಿ ವೆಚ್ಚ: ಖರ್ಚೇ ಆಗದ ₹1,038 ಕೋಟಿ
Published 30 ಮೇ 2024, 22:55 IST
Last Updated 30 ಮೇ 2024, 22:55 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಗೋಗರೆಯುವ ಶಾಸಕರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ರಾಜ್ಯ ಸರ್ಕಾರ ಪ್ರತಿಯೊಬ್ಬ ಸದಸ್ಯರಿಗೆ ಬಿಡುಗಡೆ ಮಾಡಿದ ತಲಾ ₹2 ಕೋಟಿಯನ್ನೇ ಬಳಕೆ ಮಾಡಿಲ್ಲ.

ಈ ಯೋಜನೆಯಡಿ 2023–24ನೇ ಸಾಲಿನಲ್ಲಿ (ಮಾರ್ಚ್ ಅಂತ್ಯದವರೆಗೆ) ಕೇವಲ ₹218.23 ಕೋಟಿ (ಶೇ 17.36) ವೆಚ್ಚ ಮಾಡಲಾಗಿದೆ. ಶಾಸಕರ ನಿಧಿಯ ₹1,038 ಕೋಟಿ ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿ ವೆಚ್ಚವಾಗದೆ ಉಳಿದಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಅನುದಾನ ವೆಚ್ಚ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಅನುದಾನವನ್ನು ಎರಡು ವರ್ಷಕ್ಕೂ ಹೆಚ್ಚು ಅವಧಿಯಿಂದ ಖರ್ಚು ಮಾಡದಿದ್ದರೆ ಅದನ್ನು ಹಿಂಪಡೆಯಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ತ್ವರಿತವಾಗಿ ಖರ್ಚು ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಶಾಸಕರು ಹಾಗೂ ಅನುಷ್ಠಾನ ಇಲಾಖೆ, ಏಜೆನ್ಸಿಗಳಾದ ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಜೊತೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಬೇಕು. ಪ್ರತಿ ಕೆಡಿಪಿ ಸಭೆಗಳಲ್ಲಿ ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ಮಾಡಬೇಕು ಎಂದೂ ಮುಖ್ಯಮಂತ್ರಿ ಸೂಚಿಸಿದ್ದಾರೆ. 

ಯೋಜನೆಯ ಮಾರ್ಗಸೂಚಿ ಅನ್ವಯ, ಪ್ರತಿ ವರ್ಷ ಜೂನ್‌ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ತಲಾ ₹2 ಕೋಟಿವರೆಗಿನ ಪ್ರಸ್ತಾವಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೆ, ಸಾವಿರಾರು ಕಾಮಗಾರಿಗಳು ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಬಾಕಿ ಇರುವುದು ಅಂಕಿಅಂಶಗಳಿಂದ ಗೊತ್ತಾಗಿದೆ.

‘ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಹಲವು ಶಾಸಕರು ಹಿಂದಿನ ವರ್ಷದ ಶೇ 100ರಷ್ಟು ಕ್ರಿಯಾಯೋಜನೆಗಳನ್ನು ನೀಡಿಲ್ಲ. ಜಾಗದ ಸಮಸ್ಯೆಯೂ ಸೇರಿದಂತೆ ನಾನಾ ಕಾರಣಗಳಿಗೆ ಎರಡು ವರ್ಷಕ್ಕೂ ಹೆಚ್ಚು ಅವಧಿಯಿಂದ ಆರಂಭವಾಗದ ಕಾಮಗಾರಿಗಳನ್ನು ಕೈಬಿಟ್ಟು ಹೊಸ ಪ್ರಸ್ತಾವಗಳನ್ನು ಸಲ್ಲಿಸದೇ ಇರುವುದರಿಂದ ಅನುದಾನ ವೆಚ್ಚವಾಗದೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿಯೇ ಉಳಿದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವೆಚ್ಚ ಆಗದಿರಲು ಕಾರಣಗಳೇನು?

  • ಶಾಸಕರು ನೀಡಿರುವ ಕ್ರಿಯಾ ಯೋಜನೆಗಳಿಗೆ ಸಮಯಬದ್ಧವಾಗಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಅನುಮೋದನೆ ನೀಡದಿರುವುದು

  • ಆಡಳಿತಾತ್ಮಕ ಅನುಮೋದನೆ ನೀಡಿರುವ ಕಾಮಗಾರಿಗಳಿಗೆ ಶೇ 40ರಷ್ಟು ಮುಂಗಡ ಅನುದಾನವನ್ನು ಸಂಬಂಧಿಸಿದ ಅನುಷ್ಠಾನ ಸಂಸ್ಥೆಗಳಿಗೆ ವರ್ಗಾಯಿಸದೇ ಇರುವುದು

  • ಆಡಳಿತಾತ್ಮಕ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನ ಇಲಾಖೆ, ಏಜೆನ್ಸಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಆರಂಭ ಮಾಡದೇ ಇರುವುದು

  • ಪೂರ್ಣಗೊಳಿಸಿದ ಕಾಮಗಾರಿಗಳಿಗೆ ಹಣ ಪಾವತಿ ಆಗದೇ ಇರುವುದು

ಅನುದಾನ ಬಳಕೆ– ಶಾಸಕರ ನಿರ್ಲಕ್ಷ್ಯ

2023–24ನೇ ಸಾಲಿನಲ್ಲಿ ಶಾಸಕರು ₹151.57 ಕೋಟಿ ಮತ್ತು ಪರಿಷತ್‌ ಸದಸ್ಯರು ₹43 ಕೋಟಿ ಮೊತ್ತದ ಕ್ರಿಯಾಯೋಜನೆಗಳನ್ನು ನಮೂದಿಸಿದ್ದಾರೆ. ತಮ್ಮ ಪಾಲಿಗೆ ಲಭ್ಯವಿದ್ದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT