ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 34 ಜೆಎನ್.1 ಪ್ರಕರಣ, ಸೋಂಕಿತರಲ್ಲಿ ಮೂವರ ಸಾವು: ದಿನೇಶ್‌ ಗುಂಡೂರಾವ್

ಸಂಪುಟ ಉಪ ಸಮಿತಿ ಸಭೆ ನಾಳೆ
Published 25 ಡಿಸೆಂಬರ್ 2023, 16:11 IST
Last Updated 25 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ವೈರಾಣುವಿನ ಹೊಸ ಉಪ ತಳಿ ಜೆಎನ್‌.1ನ ಸೋಂಕು ರಾಜ್ಯದ 34 ಜನರಿಗೆ ತಗಲಿರುವುದು ದೃಢಪಟ್ಟಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ 21, ಮೈಸೂರಿನಲ್ಲಿ ನಾಲ್ಕು, ಮಂಡ್ಯದಲ್ಲಿ ಮೂರು ಹಾಗೂ ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಜೆಎನ್‌. 1 ಉಪ ತಳಿಯ ಪ್ರಕರಣಗಳು ಪತ್ತೆಯಾಗಿವೆ’ ಎಂದರು.

ಬೆಂಗಳೂರು ನಗರ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೆಎನ್‌.1 ಉಪ ತಳಿಯ ಕೋವಿಡ್‌ ವೈರಾಣುವಿನ ಸೋಂಕು ತಗುಲಿದ್ದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಅವರೆಲ್ಲರೂ ಗಂಭೀರ ಸ್ವರೂಪದ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿಸಿದರು.

ಜೆಎನ್‌.1 ಉಪ ತಳಿಯ ಸೋಂಕಿನ ಶಂಕೆಯ ಮೇಲೆ 192 ಜನರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಈವರೆಗೆ 60 ಮಾದರಿಗಳ ವರದಿಗಳು ಬಂದಿವೆ. ಅವುಗಳಲ್ಲಿ 34 ಜನರಲ್ಲಿ ಜೆಎನ್‌.1 ಉಪ ತಳಿಯ ವೈರಾಣು ಸೋಂಕು ಪತ್ತೆಯಾಗಿದೆ ಎಂದು ವಿವರಿಸಿದರು.

ಹೊಸ ಉಪ ತಳಿಯ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದರಿಂದ ಜನರು ಆತಂಕಪಡಬೇಕಾಗಿಲ್ಲ. ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ತೀವ್ರ ಉಸಿರಾಟದ ತೊಂದರೆ ಇರುವವರು ಮತ್ತು ವಿಷಮಶೀತ ಜ್ವರ ಇರುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ಶನಿವಾರದ ವೇಳೆಗೆ ಪ್ರತಿ ದಿನ 5,000 ಮಾದರಿಗಳ ಪರೀಕ್ಷೆ ಮಾಡಲಾಗುವುದು ಎಂದರು.

ವೆಂಟಿಲೇಟರ್‌ಗಳ ನಿರ್ವಹಣೆಗೆ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪೋರ್ಟಲ್‌ನಲ್ಲಿ ಕೋವಿಡ್ ಪ್ರಕರಣಗಳ ಮಾಹಿತಿ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಅದನ್ನೂ ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಕ್ರಿಯ ಪ್ರಕರಣ 436ಕ್ಕೆ ಏರಿಕೆ

ರಾಜ್ಯದಲ್ಲಿ ಕೋವಿಡ್‌ ಸೋಂಕಿನ 125 ಪ್ರಕರಣಗಳು ಸೋಮವಾರ ದೃಢಪಟ್ಟಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 436ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

400 ಮಂದಿ ಮನೆ ಆರೈಕೆಯಲ್ಲಿದ್ದಾರೆ. 36 ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದು, ಅವರಲ್ಲಿ ಏಳು ಮಂದಿ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

24 ಗಂಟೆಗಳ ಅವಧಿಯಲ್ಲಿ 3,155 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಕೋವಿಡ್‌ ದೃಢ ಪ್ರಮಾಣ ದರ ಶೇಕಡ 3.96 ರಷ್ಟಿದೆ.

ಬೆಂಗಳೂರು ನಗರದಲ್ಲಿ 94 ಹೊಸ ಪ್ರಕರಣಗಳು ದೃಢಪಟ್ಟಿವೆ. ಮೈಸೂರಿನಲ್ಲಿ 13, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಐದು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಲಾ ಎರಡು, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಒಂದು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಂಪುಟ ಉಪ ಸಮಿತಿ ಸಭೆ: ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗಾಗಿ ರಚಿಸಿರುವ ಸಂಪುಟ ಉಪ ಸಮಿತಿ ಸಭೆ ಮಂಗಳವಾರ ನಡೆಯಲಿದೆ. ಜೆಎನ್‌.1 ಉಪ ತಳಿಯ ವೈರಾಣು ಸೋಂಕಿನ ಕುರಿತು ಚರ್ಚಿಸಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಹೊಸ ವರ್ಷಾಚರಣೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರುವ ಪ್ರಸ್ತಾವವಿಲ್ಲ. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪ ತಳಿಯ 63 ಪ್ರಕರಣ ದಾಖಲು

ನವದೆಹಲಿ (ಪಿಟಿಐ ವರದಿ): ಕೊರೊನಾ ವೈರಸ್‌ನ ಹೊಸ ಉಪತಳಿ ಜೆಎನ್‌.1ರ ಒಟ್ಟು 63 ಪ್ರಕರಣಗಳು ಭಾನುವಾರದವರೆಗೆ ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಗೋವಾದಲ್ಲಿ ದಾಖಲಾದ 34,  ಮಹಾರಾಷ್ಟ್ರದಲ್ಲಿ 9, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಮತ್ತು ತೆಲಂಗಾಣದಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಯಾವುದೇ ಏರಿಕೆಯಾಗಿಲ್ಲ. ಇತರ ವೈದ್ಯಕೀಯ ಕಾರಣಗಳಿಗೆ ಆಸ್ಪತ್ರೆಗೆ ದಾಖಲಾದವರಲ್ಲಿ ಕೋವಿಡ್-19 ಪ್ರಾಸಂಗಿಕವಾಗಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಒಂದೇ ದಿನ ಕೋವಿಡ್‌ನ 628 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,054ಕ್ಕೆ ಏರಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಕೇರಳದಲ್ಲಿ ಕೋವಿಡ್‌ನಿಂದ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT