ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಬಡಾವಣೆ: ಬಿ–ಖಾತೆ ನೀಡಲು ಮಸೂದೆ

34.35 ಲಕ್ಷಕ್ಕೂ ಹೆಚ್ಚು ಅಧಿಕ ಸ್ವತ್ತುಗಳಿಗೆ ತೆರಿಗೆ ವಿಧಿಸಲು ಅವಕಾಶ
Published 15 ಫೆಬ್ರುವರಿ 2024, 22:54 IST
Last Updated 15 ಫೆಬ್ರುವರಿ 2024, 22:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ನಗರ, ಪಟ್ಟಣಗಳ ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೇ ನಿರ್ಮಿಸಿದ ಕಟ್ಟಡಗಳಿಗೆ ಬಿ–ಖಾತೆ ನೀಡಿ ಕಟ್ಟಡ ತೆರಿಗೆ ವಿಧಿಸುವ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬಿಬಿಎಂಪಿ ಕಾಯ್ದೆ 2020 ರ ಕಲಂ 144(6) ಮತ್ತು (21) ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964 ರಲ್ಲಿ ಅಳವಡಿಸಿಕೊಳ್ಳುವ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಶಿಫಾರಸು ನೀಡಿದೆ. ಇದನ್ನು ಸಂಪುಟ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಈಗ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 34.35 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಾಗಿವೆ. ಈ ಸ್ವತ್ತುಗಳಿಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ ಸೇರಿದಂತೆ ಮೂಲಭೂತ ಸೌರ್ಕಯವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಕಲ್ಪಿಸಲಾಗುತ್ತಿದ್ದರೂ ತೆರಿಗೆ ವಿಧಿಸಲು ಅವಕಾಶ ಇರಲಿಲ್ಲ.

ಅಕ್ರಮ ಬಡಾವಣೆ: ಕ್ರಿಮಿನಲ್‌ ಮೊಕದ್ದಮೆ

ಇನ್ನು ಮುಂದೆ ಅನಧಿಕೃತ ಬಡಾವಣೆ ನಿರ್ಮಿಸಿದರೆ ನಿರ್ಮಾಣದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಮತ್ತು ಅದಕ್ಕೆ ಅವಕಾಶ ನೀಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಜರುಗಿಸಿ ಒಂದು ಲಕ್ಷ ರೂಪಾಯಿವರೆಗೂ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ನೀಡಲಾಗಿದ್ದು, ಇದಕ್ಕೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಹಿಂದಿನ ಸರ್ಕಾರದ ಅವಧಿಯಲ್ಲಿ 545 ಪಿಎಸ್‌ಐ ಹುದ್ದೆಗಳ ನೇರ ನೇಮಕದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿರುವ ನ್ಯಾ.ವೀರಪ್ಪ ಆಯೋಗ ವರದಿಯನ್ನು ಸದನದಲ್ಲಿ ಮಂಡಿಸುವ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. 

ಇತರ ಪ್ರಮುಖ ನಿರ್ಣಯಗಳು:

*ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆ ವಿಸ್ತರಿಸಿ, ಅವರಿಗೆ ಗುರುತಿನ ಚೀಟಿ ನೀಡಲು ತೀರ್ಮಾನ

*ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆವರಣದಲ್ಲಿ ₹39.49 ಕೋಟಿ ವೆಚ್ಚದಲ್ಲಿ ಆಡಳಿತ ಕಟ್ಟಡ ನಿರ್ಮಾಣ ಮಾಡಲು ಆಡಳಿತಾತ್ಮಕ ಒಪ್ಪಿಗೆ

*ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆಗೆ ರೊಬೋಟಿಕ್‌ ಯಂತ್ರವನ್ನು ₹20 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮತಿ

* ಬೆಳಗಾವಿ ನಗರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ 54 ಮಳಿಗೆಗಳ ಲೀಸ್‌ ಅವಧಿಯನ್ನು 5 ವರ್ಷಗಳಿಂದ 30 ವರ್ಷಗಳಿಗೆ ವಿಸ್ತರಿಸುವ ಆದೇಶ ರದ್ದು

ಮಸೂದೆಗಳಿಗೆ ಒಪ್ಪಿಗೆ:

*ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳ ಮಸೂದೆ

* ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ

*ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ

* ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT