ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

ಕಣದ ಕಾವು ಹೆಚ್ಚಿಸಿದ ಚಿಕ್ಕನಗೌಡ್ರ; ಮತ ವಿಭಜನೆಯ ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್
Published 8 ಮೇ 2023, 7:33 IST
Last Updated 8 ಮೇ 2023, 7:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವ್ಯಕ್ತಿ ಪ್ರತಿಷ್ಠೆಯ ರಾಜಕಾರಣಕ್ಕೆ ಹೆಸರಾಗಿದ್ದ ಕುಂದಗೋಳ ಕ್ಷೇತ್ರದಲ್ಲಿ ಈ ಸಲ ಚುನಾವಣೆಯ ಕಾವು ಜೋರಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪಕ್ಷೇತರ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಸಮಬಲದ ಪೈಪೋಟಿ ನೀಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕುಸುಮಾವತಿ ಶಿವಳ್ಳಿ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್, ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಎಂ.ಆರ್. ಪಾಟೀಲ ಕಮಲದ ಪತಾಕೆ ಹಾರಿಸಲು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ಚಿಕ್ಕನಗೌಡ್ರ, ‘ಸ್ವಾಭಿಮಾನ’ದ ಗೆಲುವಿಗಾಗಿ ಇಳಿ ವಯಸ್ಸಿನಲ್ಲೂ ಶ್ರಮಿಸುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಕ್ಷೇತ್ರದ ಗೆಲುವು ಪ್ರತಿಷ್ಠೆಯಾಗಿದೆ. ಬಿಜೆಪಿಯ ಅಮಿತ್ ಶಾ, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ನಾಯಕರು ಅಬ್ಬರದ ಪ್ರಚಾರ ನಡೆಸಿ, ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಚಿಕ್ಕನಗೌಡ್ರ ತಮ್ಮ ನಾಮಬಲವನ್ನು ನೆಚ್ಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಅಲ್ಪಸಂಖ್ಯಾತ ಸಮುದಾಯದ ಮತಗಳು ಹೆಚ್ಚಾಗಿವೆ. ಕುಸುಮಾವತಿ ಕುರುಬ ಸಮುದಾಯದವರಾಗಿದ್ದರೆ, ಎಂ.ಆರ್. ಪಾಟೀಲ ಮತ್ತು ಚಿಕ್ಕನಗೌಡ್ರ ಲಿಂಗಾಯತ ಪಂಚಮಸಾಲಿ ಸಮುದಾಯದವರು. ಮೂವರೂ ತಮ್ಮ ಜಾತಿ ಮತಗಳನ್ನು ಕ್ರೋಢಿಕರಿಸುತ್ತಲೇ, ಇತರ ಸಮುದಾಯಗಳನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಹಜರತ ಅಲಿ ಜೋಡಮನಿ, ಒಂದಿಷ್ಟು ಅಲ್ಪಸಂಖ್ಯಾತ ಮತಗಳನ್ನು ಸೆಳೆಯಬಹುದು.

ಕ್ಷೇತ್ರದ ಇತಿಹಾಸ ಗಮನಿಸಿದರೆ ಒಟ್ಟು 15 ಚುನಾವಣೆಗಳಲ್ಲಿ (2019ರ ಉಪ ಚುನಾವಣೆ ಸೇರಿ) ಕಾಂಗ್ರೆಸ್ 9 ಸಲ ಗೆದ್ದಿದ್ದರೆ, ಇಬ್ಬರು ಪಕ್ಷೇತರರಾಗಿ ಜಯ ಗಳಿಸಿದ್ದಾರೆ. ಉಳಿದಂತೆ ಜೆಡಿ, ಜೆಡಿ(ಯು), ಜೆಎನ್‌ಪಿ ಹಾಗೂ ಬಿಜೆಪಿ ತಲಾ ಒಂದೊಂದು ಸಲ ಗೆಲುವು ದಾಖಲಿಸಿವೆ.

ಮತ ವಿಭಜನೆ ಲಾಭದ ನಿರೀಕ್ಷೆ: ಕುರುಬ, ಅಲ್ಪಸಂಖ್ಯಾತ, ಪರಿಶಿಷ್ಟ, ಲಿಂಗಾಯತ ಜೊತೆಗೆ ಇತರ ಸಮುದಾಯಗಳ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌, ಚಿಕ್ಕನಗೌಡ್ರ ಸ್ಪರ್ಧೆ ತನಗೆ ವರವಾಗಿದೆ ಎಂದು ಭಾವಿಸಿದೆ. ಬಿಜೆಪಿ ಮತಗಳು ಎಂ.ಆರ್. ಪಾಟೀಲ ಮತ್ತು ಚಿಕ್ಕನಗೌಡ್ರ ನಡುವೆ ವಿಭಜನೆಯಾಗಿ, ತನ್ನ ಗೆಲುವು ಸುಲಭವಾಗಲಿದೆ. ಸಿ.ಎಸ್. ಶಿವಳ್ಳಿ ಮೇಲಿರುವ ಜನರ ಅನುಕಂಪ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದು. ಲಿಂಗಾಯತ ನಾಯಕ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಒಂದಿಷ್ಟು ಮತಗಳನ್ನು ತರಬಹುದು.

ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದಿರುವ ಕುಸುಮಾವತಿ ವಿರುದ್ಧ ಪಕ್ಷದೊಳಗೆ ಅಸಮಾಧಾನವಿದೆ. ಟಿಕೆಟ್ ಘೋಷಣೆಗೂ ಮುಂಚೆ ಆಕಾಂಕ್ಷಿಗಳು ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆ ಮುನಿಸಿನ ಹೊಗೆ ಇನ್ನೂ ಆರಿದಂತಿಲ್ಲ. ಇದು ಪಕ್ಷಕ್ಕೆ ಒಳ ಏಟು ನೀಡುವ ಸಾಧ್ಯತೆ ಇದೆ. ಮನೆಯೊಳಗಿನ ಮುನಿಸಿನ ಹೊಗೆ ಆರಿಸಿಕೊಂಡು ಗೆಲುವು ಸಾಧಿಸಬೇಕಾದ ಸವಾಲು ಕಾಂಗ್ರೆಸ್‌ಗೆ ಇದೆ.

ಬಿಜೆಪಿಗೆ ಪ್ರತಿಷ್ಠೆ: ‘ಬದಲಾವಣೆಗಾಗಿ ಅವಕಾಶ ಕೊಡಿ’ ಎಂದು ಮತ ಯಾಚಿಸುತ್ತಿರುವ ಎಂ.ಆರ್. ಪಾಟೀಲ ಬೆನ್ನಿಗೆ ಇಡೀ ಬಿಜೆಪಿ ನಿಂತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ನಡೆದಿರುವ ರಸ್ತೆ ಸೇರಿದಂತೆ ಕೆಲ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಂದಿರುವುದರ ಹಿಂದೆ ಪಾಟೀಲ ಶ್ರಮವಿದೆ.

ಅದನ್ನೇ ಬಂಡವಾಳ ಮಾಡಿಕೊಂಡು, ‘ಅಧಿಕಾರವಿಲ್ಲದಿದ್ದರೂ ಇಷ್ಟು ಕೆಲಸ ಮಾಡಿರುವೆ. ಒಮ್ಮೆ ಅಧಿಕಾರ ಕೊಟ್ಟು ನೋಡಿ’ ಎಂದು ಪಾಟೀಲ ಮನವಿ ಮಾಡುತ್ತಿದ್ದಾರೆ. ಬಿಜೆಪಿಯ ಮತ ಬುಟ್ಟಿಗೆ ಚಿಕ್ಕನಗೌಡ್ರ ಕೈ ಹಾಕುವುದರಿಂದ, ಲಿಂಗಾಯತ ಮತಗಳ ವಿಭಜನೆಯಾಗಿ ಮೂರನೇಯವರಿಗೆ ಲಾಭವಾಗುವ ಆತಂಕ ಪಾಟೀಲ ಅವರನ್ನು ಕಾಡುತ್ತಿದೆ.

ಸ್ವಾಭಿಮಾನ ಕೈ ಹಿಡಿಯುವುದೇ?: ಕಡೆವರೆಗೂ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಚಿಕ್ಕನಗೌಡ್ರ ಅವರಿಗೆ ವೈಯಕ್ತಿಕ ವರ್ಚಸ್ಸೇ ಶ್ರೀರಕ್ಷೆ. ಬಿಜೆಪಿಯ ಮೇರು ನಾಯಕ ಬಿ.ಎಸ್. ಯಡಿಯೂರಪ್ಪ ಸಂಬಂಧಿಯೂ ಆಗಿರುವ ಅವರಿಗೆ, ಕ್ಷೇತ್ರದಲ್ಲಿ ತಮ್ಮದೇ ಹಿಡಿತವಿದೆ. ಎಲ್ಲಾ ಸಮುದಾಯಗಳ ಜೊತೆಗೂ ಒಡನಾಟವಿರುವ ಅವರು, ಬಿಜೆಪಿಗೆ ಸಡ್ಡು ಹೊಡೆದು ತಮ್ಮ ಸ್ವಾಭಿಮಾನವನ್ನು ಪಣಕ್ಕಿಟ್ಟಿದ್ದಾರೆ. ಅನುಕಂಪದ ಅಲೆಯೂ ತಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಪಕ್ಷ ಮತ್ತು ವ್ಯಕ್ತಿ ಪ್ರತಿಷ್ಠೆಯ ಕಣದಲ್ಲಿ ಮತದಾರರ ಯಾರಿಗೆ ಒಲಿಯಲಿದ್ದಾನೆ ಎಂದು ಕಾದು ನೋಡಬೇಕಿದೆ.

ಮತದಾರರ ವಿವರ

ಒಟ್ಟು ಮತದಾರರು - 1,86,535

ಪುರುಷ ಮತದಾರರು - 95,794

ಮಹಿಳಾ ಮತದಾರರು - 90,733

ಇತರೆ – 8

ಕಣದಲ್ಲಿರುವ ಅಭ್ಯರ್ಥಿಗಳು

ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ (ಕಾಂಗ್ರೆಸ್) 

ಎಂ.ಆರ್. ಪಾಟೀಲ (ಬಿಜೆಪಿ)

ನಿರಂಜನಯ್ಯ ರುದ್ರಯ್ಯ ಮಣಕಟ್ಟಿಮಠ (ಆಮ್ ಆದ್ಮಿ ಪಾರ್ಟಿ)

ಹಜರತಅಲಿ ಶೇಖ್ ಜೋಡಮನಿ (ಜೆಡಿಎಸ್)

ಸುರೇಶ ಕುರಬಗಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)

ಯಲ್ಲಪ್ಪ ಹಣಮಪ್ಪ ದಬಗೊಂದಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ).

ಪಕ್ಷೇತರರು: ಎಸ್‌.ಐ. ಚಿಕ್ಕನಗೌಡ್ರ ಶಿವನಗೌಡ ಬಸನಗೌಡ ಕುರಟ್ಟಿ ಮಲ್ಲಿಕಾರ್ಜುನ ಕಲ್ಲಪ್ಪ ತೋಟಗೇರಿ ವಿರುಪಾಕ್ಷಗೌಡ ನಾಗಣಗೌಡ ಪಕ್ಕಿರಗೌಡ್ರ ಮಹ್ಮದ್ ಹನೀಫ್ ರಾಜೇಸಾಬ ಕರಡಿ ಚಾಂದಪೀರ ಹಜರೆಸಾಬ್ ಬಂಕಾಪುರ ಗಂಗಾಧರ ಶಿವರಡ್ಡಿ ಖಂಡೇಗೌಡ್ರು ಕುತ್ಬುದ್ದಿನ ಇಮಾಮಸಾಬ ಬೆಳಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT