ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ ಕಾ ಸಾಥ್ – ಸಬ್ ಕಾ ವಿಕಾಸ್‌ ಎನ್ನುವುದು ಮೋದಿಯ ಬೋಗಸ್‌ ಘೋಷಣೆ: ಸಿದ್ದರಾಮಯ್ಯ

Published 25 ಏಪ್ರಿಲ್ 2024, 2:51 IST
Last Updated 25 ಏಪ್ರಿಲ್ 2024, 2:51 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಈ ಬಾರಿಯ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕುರುಬ ಸಮಾಜದ ಒಬ್ಬರಿಗೂ ಬಿಜೆಪಿ ಟಿಕೆಟ್‌ ನೀಡಿಲ್ಲ, ಒಬ್ಬ ಮರಾಠರಿಗೂ ಹಾಗೂ ಒಬ್ಬ ಮುಸ್ಲಿಂಗೂ ಕೂಡ ಟಿಕೆಟ್‌ ಕೊಟ್ಟಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಸಬ್‌ ಕಾ ಸಾಥ್‌ – ಸಬ್‌ ಕಾ ವಿಕಾಸ್‌ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಬೋಗಸ್‌ ಘೋಷಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಜಾರಿಗೊಳಿಸಿದ ಎಲ್ಲಾ ಭಾಗ್ಯಗಳೂ ಕೂಡ ದುಡಿಯುವ ವರ್ಗಗಳು, ಬಡವರು, ಹಿಂದುಳಿದವರು, ದಲಿತರ ಪ್ರಗತಿಗಾಗಿ ಆಗಿದ್ದವು. ಅಧಿಕಾರ, ಅವಕಾಶ ಮತ್ತು ಸಂಪತ್ತು ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಬಡವರೂ ಹೊಟ್ಟೆ ತುಂಬ ಊಟ ಮಾಡಬೇಕು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ತೆರೆದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿತ್ತು. ಆದರೆ, ಈಗ ನಾವು ಮತ್ತೆ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ನೀಡಿದ್ದ ಐದು ಗ್ಯಾರಂಟಿಗಳ ಜತೆಗೆ 82 ಭರವಸೆಗಳನ್ನು ಈಡೇರಿಸುವ ಮೂಲಕ ನಿಮ್ಮ (ಜನರ) ಮತಕ್ಕೆ ಗೌರವ ತಂದುಕೊಟ್ಟಿದ್ದೇವೆ. ಇಲ್ಲಿಯವರೆಗೂ ಸುಮಾರು 195 ಕೋಟಿಗೂ ಹೆಚ್ಚಿನ ಮಹಿಳೆಯರು ರಾಜ್ಯದಲ್ಲಿ ಉಚಿತ ಬಸ್‌ ಪ್ರಯಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ 1 ಕೋಟಿ 21 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಕೊಡುತ್ತಿದ್ದೇವೆ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ನವರು ಗ್ಯಾರಂಟಿ ಯೋಜನೆಗಳ ಕೋಟಿ ಕೋಟಿ ಫಲಾನುಭವಿಗಳನ್ನು ಅಪಹಾಸ್ಯ ಹಾಗೂ ಅವಮಾನ ಮಾಡಿದ್ದಾರೆ. ಈಗ ಅದೇ ಗ್ಯಾರಂಟಿಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ. ಗ್ಯಾರಂಟಿಗೆ ಕೊಟ್ಟ ಹಣದ ಹೊರತಾಗಿ ₹1,20,000 ಕೋಟಿಯನ್ನು ರಾಜ್ಯದ ಇತರೆ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದ್ದಾರೆ.

2028ರ ನಂತರವೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗಲೂ, ಹತ್ತು ವರ್ಷಗಳಾದರೂ ಗ್ಯಾರಂಟಿಗಳು ಮುಂದುವರೆಯಲಿವೆ ಎಂದು ಭರವಸೆ ನೀಡಿದ್ದಾರೆ.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾನು ಘೋಷಣೆ ಮಾಡಿದೆ. ಈ ಕೆಲಸವನ್ನು ಬಸವರಾಜ ಬೊಮ್ಮಾಯಿ ಅವರಾಗಲಿ, ಯಡಿಯೂರಪ್ಪ ಅವರಾಗಲಿ ಏಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT