ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನ, ಅಕ್ರಮ ಕಟ್ಟಡಕ್ಕೂ ತೆರಿಗೆ: ಸರ್ಕಾರ ಚಿಂತನೆ

Published 10 ಆಗಸ್ಟ್ 2023, 23:30 IST
Last Updated 10 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಬಿಟ್ಟು, ಇತರೆ ಎಲ್ಲ ಅಕ್ರಮ ಕಟ್ಟಡಗಳು, ಭೂಮಿ– ಖಾಲಿ ನಿವೇಶನ, ಕಟ್ಟಡವನ್ನು ಹೊಂದಿರುವ ಭೂಮಿ, ಬೈ–ಲಾ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ, ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಂದ ಆಸ್ತಿ ತೆರಿಗೆ ವಸೂಲಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಇದಕ್ಕೆ ಸಂಬಂಧಿಸಿದ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನು ಜಾರಿ ಮಾಡುವುದರಿಂದ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಗಳಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ– 2020 ರ ಕಲಂ 144(6) ಮತ್ತು (21) ರ ಅಂಶವನ್ನು ರಾಜ್ಯದ ಇತರೆ ಮಹಾನಗರಪಾಲಿಕೆಗಳು ಮತ್ತು ನಗರಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಮತ್ತು ಕರ್ನಾಟಕ ಪುರಸಭೆಗಳ ಕಾಯ್ದೆ 1964 ರಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆಯ ಅಗತ್ಯವಿದೆ. ಅದಕ್ಕಾಗಿ ಸಂಪುಟ ಉಪಸಮಿತಿ ರಚಿಸುವುದು ಸೂಕ್ತ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು ಎಂದರು.

ಬಿಬಿಎಂಪಿ ಕಾಯ್ದೆ ಪ್ರಕಾರ, ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರದೇ, ಅದನ್ನು ತೆರವುಗೊಳಿಸಬಹುದು. ಖಾಸಗಿ ಜಮೀನಿನಲ್ಲಿ ನಿರ್ಮಿಸಿದ ಕಟ್ಟಡ, ಭೂಮಿ– ಖಾಲಿ ನಿವೇಶನಗಳು, ಕಟ್ಟಡವನ್ನು ಹೊಂದಿರುವ ಭೂಮಿ, ಕಟ್ಟಡ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡ, ಅನಧಿಕೃತ ಬಡಾವಣೆಯಲ್ಲಿರುವ ಕಂದಾಯ ಭೂಮಿಯ ಮೇಲೆ ಇರುವ ಅಥವಾ ಮುಕ್ತಾಯ ಪ್ರಮಾಣ ಪತ್ರ(ಒ.ಸಿ) ಪಡೆಯದೇ ಇರುವ ಕಟ್ಟಡಗಳಿಗೆ ತೆರಿಗೆ ವಿಧಿಸಬಹುದು. ಸ್ವತ್ತು ತೆರಿಗೆ ಸಂಗ್ರಹಿಸಿದ ಮಾತ್ರಕ್ಕೆ ಅಕ್ರಮ ಕಟ್ಟಡಗಳು ಸಕ್ರಮಗೊಳ್ಳುವುದಿಲ್ಲ ಅಥವಾ ಮಾಲೀಕತ್ವ ನೀಡಲಾಗುವುದಿಲ್ಲ(ಬಿಬಿಎಂಪಿಯಲ್ಲಿ ‘ಬಿ ಖಾತಾ’ ಎಂದು ಕರೆಯಲಾಗುತ್ತದೆ). ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕ್ರಮಗಳಿಗೆ ಅಕ್ರಮ ಕಟ್ಟಡಗಳ ಮಾಲೀಕರು ಬಾಧ್ಯಸ್ಥರಾಗಿರುತ್ತಾರೆ ಎಂದೂ ಅವರು ವಿವರಿಸಿದರು.

ಬಿಬಿಎಂಪಿಯಲ್ಲಿ ತೆರಿಗೆ ಸಂಗ್ರಹಕ್ಕೆ ಇರುವ ಅವಕಾಶವನ್ನು ರಾಜ್ಯದಾದ್ಯಂತ ಏಕರೂಪವಾಗಿ ಜಾರಿ ಮಾಡುವಂತೆ ಬೇಡಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ಇದರಲ್ಲಿ ಕಂದಾಯ, ಕಾನೂನು, ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವರು ಸದಸ್ಯರಾಗಿರುತ್ತಾರೆ ಎಂದು ಪಾಟೀಲ ಹೇಳಿದರು.

ಸೈಬರ್‌ ಭದ್ರತಾ ನೀತಿಗೆ ಅಸ್ತು

ಸೈಬರ್‌ ಭದ್ರತೆ ಮತ್ತು ದತ್ತಾಂಶ ಖಾಸಗಿತನದ ಬಗ್ಗೆ ಜಾಗೃತಿ ಮೂಡಿಸುವ ಕುರಿತ ‘ಕರ್ನಾಟಕ ಸೈಬರ್‌ ಭದ್ರತಾ ನೀತಿ 2023’ ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳು ಪಂಚಾಯಿತಿಗಳು ಈ ಜಾಗೃತಿ ಕಾರ್ಯಕ್ರಮವನ್ನು ಕಾಲಕಾಲಕ್ಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ ಮೌಲ್ಯಮಾಪನವನ್ನೂ ನಡೆಸಲಾಗುವುದು ಎಂದರು. ಸೈಬರ್ ಭದ್ರತೆ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕ ತಂತ್ರಜ್ಞಾನ ಔದ್ಯಮಿಕ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಪ್ರಸ್ತುತ ಇರುವ ಸೈಬರ್‌ ಭದ್ರತೆ ಮತ್ತು ದತ್ತಾಂಶ ಖಾಸಗಿತನದ ಕುರಿತು ಸಮೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದರು. ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರ ಮೂಲಕ ಜಾಗೃತಿ ಮೂಡಿಸಲು ವಿಕೇಂದ್ರಿಕೃತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ನೇತೃತ್ವದಲ್ಲಿ ನಡೆಯುವ ಹೊಸ ತಂತ್ರಾಂಶಗಳ ಪ್ರಾರಂಭ ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ತಾಂತ್ರಿಕ ಸಾಕ್ಷರತೆ ಕಾರ್ಯಕ್ರಮಗಳು ಸೈಬರ್‌ ಭದ್ರತೆ ಜಾಗೃತಿ ಮತ್ತು ತರಬೇತಿಯನ್ನು ಒಳಗೊಂಡಿರುತ್ತದೆ ಎಂದು ಪಾಟೀಲ ತಿಳಿಸಿದರು.

ತಾಳೆ ಬದಲಿಗೆ ಸೂರ್ಯಕಾಂತಿ ಎಣ್ಣೆ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ತಯಾರಿಕೆಗೆ ತಾಳೆ ಎಣ್ಣೆ(ಪಾಮೋಲಿನ್) ಬದಲಿಗೆ ಸೂರ್ಯಕಾಂತಿ ಎಣ್ಣೆಯನ್ನು ಬಳಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ರಾಜ್ಯದಲ್ಲಿ ರೈತರು ಯಥೇಚ್ಛವಾಗಿ ಸೂರ್ಯಕಾಂತಿ ಬೆಳೆಯುತ್ತಾರೆ. ಸರ್ಕಾರದ ನಿರ್ಧಾರದಿಂದ ರೈತರಿಗೂ ಅನುಕೂಲವಾಗುತ್ತದೆ. ಸೂರ್ಯಕಾಂತಿ ಎಣ್ಣೆಯನ್ನು ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ₹66.04 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆದು ಎಣ್ಣೆ ಖರೀದಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT