ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರೂಣ ಹತ್ಯೆ ತಡೆಗೆ ರಾಜ್ಯಮಟ್ಟದ ಕಾರ್ಯಪಡೆ: ದಿನೇಶ್‌ ಗುಂಡೂರಾವ್‌

Published 12 ಡಿಸೆಂಬರ್ 2023, 15:49 IST
Last Updated 12 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ‘ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯಲು ರಾಜ್ಯಮಟ್ಟದ ಕಾರ್ಯಪಡೆ ರಚಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕೆ.ಎ. ತಿಪ್ಪೇಸ್ವಾಮಿ, ಉಮಾಶ್ರೀ, ಭಾರತಿ ಶೆಟ್ಟಿ, ಟಿ.ಎ. ಶರವಣ ಅವರು, ‘ಭ್ರೂಣ ಹತ್ಯೆ ಪ್ರಕರಣಗಳ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ‘ಅವ್ಯಾಹತವಾಗಿ ಭ್ರೂಣ ಹತ್ಯೆ ನಡೆಯುತ್ತಿದೆ. ಇದನ್ನು ತಡೆಯಲು ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ’ ಎಂದರು.

‘ಕೊಲೆಗಿಂತ ಕಡಿಮೆ ಅಲ್ಲ ಭ್ರೂಣ ಹತ್ಯೆ ಎನ್ನುವ ಭಾವನೆಯನ್ನು ಇಡೀ ಸದನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಯಾವ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಬೇಕು, ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದರ ಬಗ್ಗೆಯೂ ಗಂಭೀರವಾಗಿ ಚಿಂತನೆ ಮಾಡುತ್ತೇವೆ’ ಎಂದರು. 

‘ಹೆಣ್ಣು ಭ್ರೂಣ ಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆ ಮತ್ತು ವಿಶೇಷ ನೀತಿ ರೂಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಿದ್ದೇವೆ. ಸ್ಕ್ಯಾನಿಂಗ್‌ ಮೆಷಿನ್‌ಗಳ ಪರವಾನಗಿಯನ್ನು ಪ್ರತಿವರ್ಷ ನವೀಕರಿಸುವಂತೆ ಮಾಡಲಾಗುವುದು. ಒಮ್ಮೆ ಬಳಕೆ ಮಾಡಿದ ಅಲ್ಟ್ರಾ ಸೌಂಡ್ ಮಿಷನ್ ಖರೀದಿಸಿ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗುವುದು’ ಎಂದರು.

‘ಸ್ಥಗಿತಗೊಂಡಿರುವ ಸಹಾಯವಾಣಿ 104 ಅನ್ನು ಮತ್ತೆ ಆರಂಭಿಸಲು ಅನುಮೋದನೆ ಸಿಕ್ಕಿದೆ. ಅದು ಆರಂಭವಾಗುವವರೆಗೆ ಪರ್ಯಾಯ ಸಹಾಯವಾಣಿ ಸಂಖ್ಯೆಯನ್ನು ಶೀಘ್ರದಲ್ಲೆ ನೀಡಲಾಗುವುದು. ಭ್ರೂಣ ಹತ್ಯೆ ನಡೆಯುತ್ತಿರುವ ಮಾಹಿತಿ ನೀಡುವವರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ  ಹೆಚ್ಚಿಸುವ ಉದ್ದೇಶವಿದೆ. ಎಲ್ಲ 56 ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್‌ ಕೇಂದ್ರಗಳ ಮೇಲ್ವಿಚಾರಣೆಗೆ ತಂಡ ರಚಿಸಲಾಗುವುದು’ ಎಂದರು.

ಕಾಂಗ್ರೆಸ್‌ನ ಉಮಾಶ್ರೀ, ‘ಭ್ರೂಣ ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನು ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತದೆ. ಆದರೆ, ಅದನ್ನು ತೆಗೆದುಕೊಂಡು ಕಾವೇರಿ ಒಡಲಿಗೆ ಸೇರಿಸುತ್ತಾರೆ’ ಎಂದು ಭಾವುಕರಾದರು.

ಬಿಜೆಪಿಯ ತೇಜಸ್ವಿನಿ ಗೌಡ, ಹೇಮಲತಾ ನಾಯಕ್‌, ವೈ.ಎಂ. ಸತೀಶ್, ಕೆ.ಎಸ್‌. ನವೀನ್‌, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಕಾಂಗ್ರೆಸ್ಸಿನ ಡಾ. ಡಿ. ತಿಮ್ಮಯ್ಯ ಅವರು, ‘ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಯ ಜೊತೆಗೆ ಸಾಮಾಜಿಕ ಕ್ರಾಂತಿಯ ಅಗತ್ಯವೂ ಇದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT