ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಮಾಣ ವಚನ: ಶಾಸಕರ ಸಂಭ್ರಮ

ಚುಕ್ಕಾಣಿ ಹಿಡಿದವರ ನಗು, ಅಧಿಕಾರ ಕಳೆದುಕೊಂಡವರ ಬೇಸರ
Published : 22 ಮೇ 2023, 23:53 IST
Last Updated : 22 ಮೇ 2023, 23:53 IST
ಫಾಲೋ ಮಾಡಿ
Comments

ಬೆಂಗಳೂರು: ಚುನಾವಣಾ ಕಣದಲ್ಲಿ ರೋಷಾವೇಶದಿಂದ ಹೋರಾಡಿ ಮೊದಲ ಬಾರಿ ಗೆದ್ದು ಬಂದ ಶಾಸಕರ ಸಂಭ್ರಮ, ಹಿರಿಯರ ಸಮಾಧಾನದ ನಿಟ್ಟುಸಿರು, ಹಳೆ ಮಿತ್ರರ ಪುನರ್ ಸಮಾಗಮಕ್ಕೆ ವಿಧಾನಸಭೆ ಅಧಿವೇಶನದ ಮೊದಲ ದಿನ ವೇದಿಕೆಯಾಯಿತು. ನಗು, ಹಾಸ್ಯ, ಪರಸ್ಪರ ಕಾಲೆಳೆಯುವಿಕೆಯ ಮಧ್ಯೆಯೇ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಿತು.

ಮೊದಲ ದಿನವೇ ವಿಧಾನಸಭೆಯಲ್ಲಿ ಶಾಸಕರು ತುಂಬಿ ತುಳುಕಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಮೊದಲ ಬಾರಿ ಆಯ್ಕೆ ಆದವರೂ ಸೇರಿ ಸಾಕಷ್ಟು ಶಾಸಕರು ಅಧಿವೇಶನಕ್ಕೆ ಬಂದಿರಲಿಲ್ಲ. ಒಟ್ಟು 182 ಶಾಸಕರು ಪ್ರಮಾಣ ಸ್ವೀಕರಿಸಿದ್ದು, ಮಂಗಳವಾರ 42 ಮಂದಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇತರ ಎಲ್ಲರಿಗಿಂತಲೂ ಹೆಚ್ಚು ಚುರುಕಿನಿಂದ ಓಡಾಡುತ್ತಿದ್ದರು. ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ಮೊಗಸಾಲೆಯಲ್ಲೂ ಓಡಾಡಿ ತಮಗೆ ಸಿಕ್ಕ ಶಾಸಕರನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ವಿರೋಧ ಪಕ್ಷದ ಸದಸ್ಯರು ಪ್ರವೇಶಿಸುವ ದ್ವಾರದ ಮೂಲಕ ಒಳಗೆ ಬಂದು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ– ಜೆಡಿಎಸ್‌ ಶಾಸಕರನ್ನು ಮಾತನಾಡಿಸಿದರು. ಕೆಲವರನ್ನು ಅಪ್ಪಿಕೊಂಡರೆ, ಇನ್ನು ಕೆಲವರ ಬೆನ್ನಿಗೆ ಗುದ್ದಿ ಆತ್ಮೀಯತೆ ಪ್ರದರ್ಶಿಸಿದರು.

ಕಾಂಗ್ರೆಸ್‌ನ ತನ್ವೀರ್‌ ಸೇಠ್ ಅವರು ಬಿಜೆಪಿಯ ಎಲ್ಲ ನಾಯಕರನ್ನು ಅವರು ಕೂತಿದ್ದ ಆಸನದ ಬಳಿಯೇ ಹೋಗಿ ಹಸ್ತಲಾಘವ ನೀಡಿ ಶುಭ ಕೋರಿದರು. ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್‌, ಜೆ.ಎನ್‌. ಗಣೇಶ್, ಅನಿಲ್‌ ಚಿಕ್ಕಮಾದು ಸೇರಿದಂತೆ ಹಲವರು ವಿರೋಧ ಪಕ್ಷದ ಸಾಲಿಗೆ ಬಂದು ಹಿರಿಯ ಶಾಸಕರನ್ನು ಮಾತನಾಡಿಸಿದರು. ಕೆಲವು ಹೊಸ ಮತ್ತು ಯುವ ಶಾಸಕರು ಹಿರಿಯ ಶಾಸಕರ ಕಾಲು ಮುಟ್ಟಿ ಆಶೀರ್ವಾದ ಕೋರಿದರು.

ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಪೀಠಕ್ಕೆ ಬಂದು ಕೂರುವವರೆಗೂ ಇದು ನಡೆದೇ ಇತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಪಕ್ಷ ನಾಯಕರಿಗೆ ಮೀಸಲಾದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರಿಗೆ ಮೀಸಲಾಗಿರುವ ಆಸನದಲ್ಲೇ ಕುಳಿತು ಪರಸ್ಪರ ನಮಸ್ಕಾರ ವಿನಿಮಯ ಮಾಡಿಕೊಂಡರು.

ಖಾನಾಪುರ ಶಾಸಕ ವಿಠಲರಾವ್ ಹಲಗೇಕರ ಅವರು ಕೇಸರಿ ಪೇಠ ಧರಿಸಿ ಬಂದಿದ್ದರೆ, ಕಾಂಗ್ರೆಸ್‌ನ ಅಶೋಕ ಪಟ್ಟಣ ನೀಲಿ ಬಣ್ಣದ ಶೇರ್ವಾನಿ ಧರಿಸಿ ಬಂದಿದ್ದರು. ಅಶೋಕ ಪಟ್ಟಣ ಅವರನ್ನು ಉದ್ದೇಶಿಸಿ ಬಸವರಾಜ ಬೊಮ್ಮಾಯಿ, ‘ಬ್ಲೂ ಡೇ’ ಎಂದು ಕಿಚಾಯಿಸಿದರು.

ಆಡಳಿತ ಪಕ್ಷದ ಸಾಲಿನಲ್ಲಿದ್ದವರ ಮುಖ ಅರಳಿದ್ದರೆ, ವಿರೋಧಿ ಸಾಲಿನಲ್ಲಿದ್ದ ಬಹುತೇಕರು ಬೇಸರದ ಭಾವನೆಯಲ್ಲೇ ಇದ್ದರು. ಪರಸ್ಪರ ತಿಳಿ ಹಾಸ್ಯದ ಮೂಲಕ ಬೇಸರದ ಭಾವವೂ ಕೊಂಚ ತಿಳಿಯಾಯಿತು.

ಆರ್‌.ವಿ.ದೇಶಪಾಂಡೆ ಮಾತನಾಡಿ, ‘ಇಲ್ಲಿ ಹಿರಿಯರು ಮತ್ತು ಹೊಸಬರು ಬಂದಿದ್ದಾರೆ. ಎಲ್ಲರೂ ಸೇರಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಬೇಕು. ನಾಡಿನ ಪ್ರಗತಿ ಮತ್ತು ವಿಶ್ವದಲ್ಲೇ ಕರ್ನಾಟಕ ಆದರ್ಶ, ಶಾಂತಿ, ಸಮೃದ್ಧಿ ಮತ್ತು ಪ್ರೀತಿ– ವಿಶ್ವಾಸಗಳ ನಾಡು ಎಂಬ ಖ್ಯಾತಿ ಪಡೆಯುವ ನಿಟ್ಟಿನಲ್ಲಿ ರಾಜ್ಯವನ್ನು ಕಟ್ಟಬೇಕು’ ಎಂದು ಸಲಹೆ ನೀಡಿದರು.

ಅಜ್ಜಯ್ಯ, ಹಿಂದುತ್ವ, ಡಿಕೆಶಿ, ಎಚ್‌ಡಿಡಿ, ಅಲ್ಲಾಹ್ ಹೆಸರಲ್ಲಿ ಪ್ರಮಾಣ

‘ಸಂವಿಧಾನ ಮತ್ತು ದೇವರ ಹೆಸರಲ್ಲಿ ಮಾತ್ರ ಪ್ರಮಾಣ ಸ್ವೀಕರಿಸಬಹುದು. ಇತರ ಯಾವುದೇ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ ಕಾನೂನು ಬದ್ಧ ಆಗುವುದಿಲ್ಲ’ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಸೂಚನೆ ನೀಡಿದ್ದರೂ, ಕೆಲವು ಶಾಸಕರು ಅದನ್ನು ಪಾಲಿಸಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ‘ಭಗವಂತ ಗಂಗಾಧರ (ನೊಣವಿನಕೆರೆ) ಅಜ್ಜಯ್ಯ’ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಸಿದ್ದರಾಮಯ್ಯ ಅವರು ಪ್ರಮಾಣ ಓದಿದ ಬಳಿಕ ‘ಎಲ್ಲಿ ಸಹಿ ಹಾಕಬೇಕು’ ಎಂದು ಪ್ರಶ್ನಿಸಿದರು. ‘ಸಭಾಧ್ಯಕ್ಷರ ಪೀಠವನ್ನು ಬಳಸಿ ಬಂದು ಪುಸ್ತಕದಲ್ಲಿ ಸಹಿ ಹಾಕಿ’ ಎಂದು ಕಾರ್ಯದರ್ಶಿ ವಿಶಾಲಾಕ್ಷಿ ಹೇಳಿದರು. ಪೀಠ ಬಳಸಿ ಬರುವಾಗ ಅಲ್ಲಿ ನಿಂತಿದ್ದ ಮಾರ್ಷಲ್‌ ಅವರ ಬಳಿ ‘ಎಲ್ಲಿ ಸಹಿ ಹಾಕಬೇಕು’ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

‘ದವಾಖಾನೆಗೆ ಅಂತ ಬೋರ್ಡ್‌ ಹಾಕಿ’

ಪ್ರಮಾಣ ವಚನಕ್ಕೆ ತಮ್ಮ ಹೆಸರು ಕರೆಯದಿರುವ ಬಗ್ಗೆ ಕಿರಿ ಕಿರಿಗೊಂಡ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ನೀವು ಸರಿಯಾಗಿ ಕರೆಯುತ್ತಿಲ್ಲ. ಇಂಗ್ಲಿಷ್‌ ವರ್ಣಮಾಲೆ ಅನ್ವಯ ಕರೆಯುವುದಾಗಿ ಹೇಳಿ, ಯಾರ್‍ಯಾರನ್ನೋ ಕರೆಯುತ್ತಿದ್ದೀರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ಕೆಲವರು ಆಸ್ಪತ್ರೆಗೆ ಹೋಗಬೇಕು ಎಂದು ಕೇಳಿಕೊಂಡರು. ಆದ್ದರಿಂದ ಅಂತಹ ಕೆಲವರಿಗೆ ಮೊದಲು ಕರೆಯಬೇಕಾಯಿತು. ನಾನ್‌ ಏನ್‌ ಮಾಡ್ಲಿ’ ಎಂದು ಪ್ರಶ್ನಿಸಿದರು.

‘ದವಾಖಾನೆಗೆ ಅಂತ ಬೋರ್ಡ್‌ ಹಾಕಿಸಿಬಿಡಿ. ಅವರು ದವಾಖಾನೆಗೆ ಹೋಗ್ತಾರೊ, ಹೆಂಡ್ತಿ ನೋಡಲು ಹೋಗ್ತಾರೊ’ ಎಂದು ಯತ್ನಾಳ ಹಾಸ್ಯ ಮಾಡಿದರು.

ಬರಿಗಾಲ ಶಾಸಕ

ಬೈಂದೂರು ಶಾಸಕ ಗುರುರಾಜ್‌ ಶೆಟ್ಟಿ ಗಂಟಿ ಹೊಳಿ ಅವರು ವಿಧಾನಸಭೆಗೆ ಬರಿಗಾಲಿನಲ್ಲಿ ಬಂದು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇವರು ಮೊದಲಿನಿಂದಲೂ ಚಪ್ಪಲಿ ಧರಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲೂ ಬರಿಗಾಲಿನಲ್ಲೇ ಪ್ರಚಾರ ನಡೆಸಿದ್ದರು. ವಿಧಾನಸಭೆಗೂ ಸಾದಾ ಬಿಳಿ ಅಂಗಿ, ಪಂಚೆ ಮತ್ತು ಚಪ್ಪಲಿ ಧರಿಸದೇ ಬಂದಿದ್ದರು.

ಸಭಾಧ್ಯಕ್ಷರ ಕೊಠಡಿಯಲ್ಲಿ ಜಮೀರ್ ಪ್ರಮಾಣ

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಧ್ಯಾಹ್ನ ವಿಧಾನಸಭಾಧ್ಯಕ್ಷರ ಕೊಠಡಿಗೆ ಬಂದು ಪ್ರಮಾಣ ಸ್ವೀಕರಿಸಿದರು. ಬೆಳಿಗ್ಗೆ ಅವರ ಹೆಸರು ಕರೆದಾಗ ಸದನದಲ್ಲಿ ಇರಲಿಲ್ಲ. 

ಇತ್ತೀಚೆಗೆ ಸಚಿವರಾಗಿ ಪ್ರಮಾಣ ಸ್ವೀಕರಿಸುವ ಸಂದರ್ಭದಲ್ಲಿ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಟೀಕೆಗೆ ಕಾರಣವಾಗಿತ್ತು. ಮತ್ತೆ ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ತೆಗೆದುಕೊಂಡರೆ ಟೀಕೆಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ಸಭಾಧ್ಯಕ್ಷರ ಕೊಠಡಿಯಲ್ಲಿ ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT