ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains- ರಾಜ್ಯದ ಹಲವು ಕಡೆ ಸೇತುವೆಗಳು ಜಲಾವೃತ ಹಲವೆಡೆ ಸಂಚಾರ ಬಂದ್

Published 20 ಜುಲೈ 2023, 19:40 IST
Last Updated 20 ಜುಲೈ 2023, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರವೂ ಬಿರುಸಿನ ಮಳೆಯಾಗಿದೆ. ಸೇತುವೆಗಳು ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಬಂದ್‌ ಆಗಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಭಾರಿ ಮಳೆಯಾಗಿದೆ. ಕೆಲ ಜಲಾಶಯಗಳು ಭರ್ತಿಯಾಗಿದ್ದು, ನೀರು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸತತ ಮಳೆಯಿಂದಾಗಿ ಮನೆಗಳು ಕುಸಿದಿವೆ‌.

ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 700 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದೆ. ಗರಕಪಳ್ಳಿ–ಭಕ್ತಂಪಳ್ಳಿ ಬಾಂದಾರ ಸೇತುವೆ ಮುಳುಗಿದೆ.

ಕಾಳಗಿ ತಾಲ್ಲೂಕಿನ ಮಂಗಲಗಿ ಬಳಿಯ ರಾಜ್ಯ ಹೆದ್ದಾರಿಗೆ ನಿರ್ಮಿಸಿದ ಸೇತುವೆ ಜಲಾವೃತವಾಗಿದ್ದರಿಂದ ಕಾಳಗಿ–ಸೇಡಂ ಮಧ್ಯದ ಸಂಪರ್ಕ ಕಡಿತಗೊಂಡಿತ್ತು. ಚಿತ್ತಾಪುರ ತಾಲ್ಲೂಕಿನಲ್ಲಿ ಆರು ಮನೆಗಳು ಕುಸಿದಿವೆ.

ಕಮಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ ಮೇಲೆ ಮುಳ್ಳು ಜಾಲಿ ಮರ ಉರುಳಿತ್ತು. ರಾಷ್ಟ್ರೀಯ ಹೆದ್ದಾರಿ ಗಸ್ತು ಪಡೆಯ ಪೊಲೀಸರು ಮೂರು ಗಂಟೆ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿದರು.

ಭಾರಿ ಮಳೆ ಬಗ್ಗೆ ಮಾಹಿತಿ ಪಡೆದ ಸೇಡಂ ಹಾಗೂ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರುವಾರ ಶಾಲೆಗಳಿಗೆ ರಜೆ ಘೋಷಿಸಿದರು. ಆದರೆ, ಅಷ್ಟರಲ್ಲೇ ಮಕ್ಕಳು ಶಾಲೆಗೆ ಹೋಗಿದ್ದರು.

ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜಲಾವೃತಗೊಂಡಿದೆ.

ಬೆಳಗಾವಿ ಜಿಲ್ಲೆಯ 5 ಪ್ರಮುಖ ಸೇತುವೆಗಳು ಜಲಾವೃತವಾಗಿದ್ದು, ವಾಹನಗಳ ಸಂಚಾರ ಬಂದ್‌ ಆಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಕೃಷ್ಣೆ ಮತ್ತು ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ಗೋಕಾಕ–ಶಿಂಗಳಾಪುರ, ನಿಪ್ಪಾಣಿ ತಾಲ್ಲೂಕಿನ ಜತ್ರಾಟ–ಭಿವಶಿ, ಖಾನಾಪುರ–ಅನಮೋಡ, ಕಾಗವಾಡ ತಾಲ್ಲೂಕಿನ ರಾಜಾಪುರ– ಮಂಗವಾಟಿ, ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ– ಮಹಾರಾಷ್ಟ್ರದ ದತ್ತವಾಡ ಸೇತುವೆಗಳು ಜಲಾವೃತವಾಗಿವೆ. ‘ಜಿಲ್ಲೆಯ ಎಲ್ಲಾ 83 ಸೇತುವೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜಲಾವೃತಗೊಂಡ 5 ಸೇತುವೆಗಳಲ್ಲಿ ಸಂಚಾರ ಬಂದ್‌ ಮಾಡಿ, ಕಾವಲು ನಿಯೋಜಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದರು. ಮಲಪ್ರಭಾ ಉಕ್ಕಿ ಹರಿಯುತ್ತಿದೆ. ಹಳ್ಳಗಳ ನೀರು ಕಿರುಸೇತುವೆಗಳ ಮೇಲೆ ಬಂದಿದ್ದು, ಕಾಡಂಚಿನ 40ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಸೇರಿ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಏರಿಕೆ ಕಂಡಿದೆ. ಶಿರಸಿ ತಾಲ್ಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳ ಹಿಂದಷ್ಟೇ ಪೂರ್ಣಗೊಂಡ ಸೇತುವೆಯ ಸಂಪರ್ಕ ರಸ್ತೆ ಕುಸಿದಿದೆ. ಕಾಳಿ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಸಿದ್ದಾಪುರ, ಯಲ್ಲಾಪುರ ಹಾಗೂ ಕರಾವಳಿ ಭಾಗ ದಲ್ಲಿ ಬಿರುಸಿನ ಮಳೆಯಾಗಿದೆ.

ಹುಬ್ಬಳ್ಳಿ–ಧಾರವಾಡ ಮಾರ್ಗದ ನವಲೂರು, ಲಕುಮನಹಳ್ಳಿ, ಕೆಎಂಎಫ್‌, ಎನ್‌ಟಿಟಿಎಫ್‌ ಭಾಗದ ರಸ್ತೆಯಲ್ಲಿ ಒಂದೂವರೆ ಅಡಿಗಳಷ್ಟು ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದ ಹಿಂಭಾಗದ ರಾಜಕಾಲುವೆ ಕೊಳಚೆ ನೀರು ವಸತಿ ಸಮುಚ್ಚಯಕ್ಕೆ ನುಗ್ಗಿದೆ. ಬೆಳಗಾವಿ ಗಲ್ಲಿಯಲ್ಲಿ ಅಂಗಡಿ ಗೋಡೆ ಕುಸಿದಿದೆ.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಕೆಲವೆಡೆ ಜೋರು ಮಳೆಯಾದರೆ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಒಟ್ಟು 26.83 ಸೆಂ.ಮೀ ಮಳೆಯಾಗಿದೆ. ದಾವಣಗೆರೆ ನಗರ, ಹೊನ್ನಾಳಿ ಹಾಗೂ ಹರಿಹರದಲ್ಲೂ ಮಳೆಯಾಗಿದೆ. ನದಿ ನೀರು ಹೆಚ್ಚಳದಿಂದಾಗಿ

ಉಕ್ಕಡಗಾತ್ರಿಯಲ್ಲಿ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ. ನದಿ ತಟದಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಮರಂದೋಡವಿನ ಕೆರೆತಟ್ಟು ಭಾಗದಲ್ಲಿ ಬೃಹತ್ ಮರ ಉರುಳಿ, ಮೂರ್ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಗ್ರಾಮಸ್ಥರು ಒಗ್ಗೂಡಿ ಮರ ತೆರವುಗೊಳಿಸಿದರು. ಪೊನ್ನಂಪೇಟೆಯಲ್ಲಿ ಧಾರಾಕಾರ ಮಳೆ ಸುರಿಯಿತು.

ಭಾರಿ ಮಳೆಗೆ ರಸ್ತೆ ಬದಿ ಕುಸಿತ

ಸೋಮವಾರಪೇಟೆ (ಕೊಡಗು ಜಿಲ್ಲೆ): ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು –ಬಾಣೆ ಸಂಪರ್ಕ ರಸ್ತೆಯ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಳ್ಳುವ ಭೀತಿ ಸೃಷ್ಟಿಸಿದೆ. ಮಳೆ ಹೆಚ್ಚಾಗಿದ್ದು, ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವುದರಿಂದ ಮಣ್ಣು ಕುಸಿಯಲಾರಂಭಿಸಿದೆ.

ಮಡಿಕೇರಿಯಲ್ಲಿ ಮಳೆಗಿಂತಲೂ ಗಾಳಿಯ ಆರ್ಭಟ ಹೆಚ್ಚಾಗಿದೆ. ತಾಲ್ಲೂಕಿನ ದೊಡ್ಡಮಲ್ತೆಯಲ್ಲಿ 4 ಸೆಂ.ಮೀ, ವಿರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೆರೆ, ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿಗಳಲ್ಲಿ 3.5 ಸೆಂ.ಮೀ, ಹುದಿಕೇರಿಯಲ್ಲಿ 3 ಸೆಂ.ಮೀ,  ಕುಟ್ಟದಲ್ಲಿ 2.5 ಸೆಂ.ಮೀ, ಬಿರುನಾಣಿಯಲ್ಲಿ 2 ಸೆಂ.ಮೀ ಮಳೆಯಾಗಿದೆ

ನಾಪೋಕ್ಲು, ಗೋಣಿಕೊಪ್ಪಲಿನಲ್ಲಿ ಧಾರಾಕಾರ ಮಳೆ

ನಾಪೋಕ್ಲು: ಸಮೀಪದ ಮರಂದೋಡವಿನ ಕೆರೆತಟ್ಟು ಭಾಗದಲ್ಲಿ ಗುರುವಾರ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಮರ ಉರುಳಿ, ಮೂರ್ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಗ್ರಾಮಸ್ಥರು ಒಗ್ಗೂಡಿ ಮರ ತೆರವುಗೊಳಿಸಿದರು.

ಗೋಣಿಕೊಪ್ಪಲು: ಇಲ್ಲಿನ ಪೊನ್ನಂಪೇಟೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದು, ರಸ್ತೆ ಹಾಗೂ ಚರಂಡಿಗಳು ಉಕ್ಕಿ ಹರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT