ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌– ಅಮೂಲ್‌ ವಿಲೀನ ಅಸಾಧ್ಯ: ಬಾಲಚಂದ್ರ ಜಾರಕಿಹೊಳಿ

ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿ ಮಾಡಿದ ಕಾಂಗ್ರೆಸ್‌: ಬಾಲಚಂದ್ರ ಜಾರಕಿಹೊಳಿ ಆರೋಪ
Last Updated 12 ಏಪ್ರಿಲ್ 2023, 5:40 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಎಂಎಫ್‌ ಹಾಗೂ ಅಮೂಲ್‌ ವಿಲೀನಗೊಳಿಸುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಇದು ಅಸಾಧ್ಯ ಕೂಡ. ಕಾಂಗ್ರೆಸ್‌ ಮುಖಂಡರು ವಿನಾಕಾರಣ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಎಂಎಫ್‌ ಹಾಗೂ ಅಮೂಲ್‌ ಸೇರಿಕೊಂಡು ವ್ಯಾಪಾರ ವೃದ್ಧಿಸಬಹುದು ಎಂದು ಕೇಂದ್ರ ಸಹಕಾರ ಸಚಿವರೂ ಆದ ಅಮಿತ್‌ ಶಾ ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು. ಎರಡನ್ನೂ ವಿಲೀನಗೊಳಿಸುವ ಬಗ್ಗೆ ಹೇಳಿಲ್ಲ. ಎರಡೂ ಸಹಕಾರ ಸಂಸ್ಥೆಗಳು ಹೇಗೆ ಬೆಳೆಯಬೇಕು ಎಂಬ ಮಾರ್ಗದರ್ಶನ ಮಾತ್ರ ನೀಡಿದ್ದರು. ಆದರೆ, ವಿರೋಧ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಇದನ್ನು ತಮ್ಮ ಅನುಕೂಲಕ್ಕೆ ಬಳಸಿ
ಕೊಳ್ಳುತ್ತಿವೆ’ ಎಂದು ದೂರಿದರು.

‘ರಾಜ್ಯದಲ್ಲಿ ಅಮೂಲ್‌ ಮಾರಾಟದ ಬಗ್ಗೆ ಇಷ್ಟು ವಿರೋಧ ಮಾಡುವ ಅವಶ್ಯಕತೆ ಇಲ್ಲ. ದಶಕಗಳಿಂದಲೂ ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳಿವೆ. ಆದರೂ ನಂದಿನಿ ಹಾಲಿನಷ್ಟು ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಕೊಡುವುದು ಯಾರಿಗೂ ಸಾಧ್ಯವಿಲ್ಲ. ಈಗ ಅಮೂಲ್‌ ಬಂದರೂ ಅದರೊಂದಿಗೆ ಸ್ಪರ್ಧೆ ಮಾಡುವ ಶಕ್ತಿ ನಮಗೂ ಇದೆ’ ಎಂದರು.

‘ರಾಜ್ಯದಲ್ಲಿ ಸುಮಾರು 50 ಲಕ್ಷ ಮತದಾರರು ಕೆಎಂಎಫ್‌ಗೆ ಪರೋಕ್ಷ ಸಂಬಂಧವಿದ್ದಾರೆ. ಹೀಗಾಗಿ, ಬಿಜೆಪಿ ಕೀರ್ತಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ರಾಜಕಾರಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರಂಥ ಜ್ಞಾನಿಗಳು ಕೂಡ ಇದನ್ನು ವಿವಾದಾಸ್ಪದ ಮಾಡಿದ್ದು ಅಚ್ಚರಿ ಮೂಡಿಸಿದೆ. ರೈತರು, ಗ್ರಾಹಕರ ಹಿತದೃಷ್ಟಿ
ಯಿಂದ ರಾಜಕೀಯ ಬಿಡಿ’ ಎಂದರು.

‘ಕೆಎಂಎಫ್‌ಗೆ 19 ನಿರ್ದೇಶಕರಿದ್ದೇವೆ. ಇದರಲ್ಲಿ ಕಾಂಗ್ರೆಸ್‌– ಜೆಡಿಎಸ್‌ನವರೂ ಇದ್ದಾರೆ. ಈ ನಿರ್ದೇಶಕ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ. ಒಂದೊಮ್ಮೆ ಕೇಂದ್ರ ಸರ್ಕಾರ ವಿಲೀನಕ್ಕೆ ಮುಂದಾದರೂ ಖುದ್ದಾಗಿ ನಾನೇ ವಿರೋಧ ಮಾಡುತ್ತೇನೆ. ರಾಜ್ಯದ ರೈತರ ಜತೆಗೆ ನಿಲ್ಲುತ್ತೇನೆ’ ಎಂದೂ ಹೇಳಿದರು.

‘ಮಹಾರಾಷ್ಟ್ರ, ಆಂಧ್ರ, ಉತ್ತರಪ್ರದೇಶ ಸೇರಿದಂತೆ ಹಲವು ಕಡೆ ಹಾಲು ಒಕ್ಕೂಟಗಳು ನಾಶವಾಗಿವೆ. ಅತ್ಯಂತ ಸುಭದ್ರವಾಗಿರುವುದು ಅಮೂಲ್‌ ಮತ್ತು ಕೆಎಂಎಫ್‌ ಮಾತ್ರ. ಅಮೂಲ್‌ ಕೂಡ ಸಹಕಾರ ಸಂಸ್ಥೆಯಾಗಿದ್ದು, ರೈತರ ಹಿತ ಕಾಪಾಡುತ್ತದೆ. ಅದನ್ನು ವಿರೋಧಿಸುವ ಅಗತ್ಯವಿಲ್ಲ’ ಎಂದರು.

‘ಪ್ರತಿ ವರ್ಷ ಇಂಧನ ಇಲಾಖೆಗೆ ವಿದ್ಯುತ್ ಬಿಲ್‌ಗಾಗಿ ₹120 ಕೋಟಿ ಸಂದಾಯ ಮಾಡಲಾಗುತ್ತಿದೆ. ಸೌರ ಘಟಕ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು, ಇದರಿಂದ ವಾರ್ಷಿಕ ₹40 ಕೋಟಿ ಉಳಿತಾಯವಾಗಲಿದೆ’ ಎಂದೂ ತಿಳಿಸಿದರು.

*

ಅಂಕಿ ಅಂಶಗಳು:

ಕರ್ನಾಟಕ ಹಾಲು ಒಕ್ಕೂಟ

26 ಲಕ್ಷ

ಒಟ್ಟು ಸದಸ್ಯರ ಸಂಖ್ಯೆ

10 ಲಕ್ಷ

ದಿನವೂ ಹಾಲು ಹಾಕುವ ರೈತರು

75.52 ಲಕ್ಷ ಲೀಟರ್‌

ಪ್ರತಿ ದಿನ ಸಂಗ್ರಹವಾಗುವ ಹಾಲಿನ ಪ್ರಮಾಣ

44 ಲಕ್ಷ ಲೀಟರ್‌

ದಿನವೂ ಮಾರಾಟವಾಗುವ ಹಾಲು

7 ಲಕ್ಷ ಲೀಟರ್‌

ಹೊರರಾಜ್ಯಕ್ಕೆ ಸರಬರಾಜು

15,200

ರಾಜ್ಯದಲ್ಲಿರುವ ಗ್ರಾಮೀಣ ಸಂಸ್ಥೆಗಳು

20,000

ನಂದಿನಿ ಹಾಲು ತಲುಪುವ ಹಳ್ಳಿಗಳ ಸಂಖ್ಯೆ

₹22,000 ಕೋಟಿ

ಕೆಎಂಎಫ್ ವಾರ್ಷಿಕ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT