ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಮನಸ್ಸಿನ ವಿಚಾರವಾದಿ ಕೋಣದ ಚೆನ್ನಬಸಪ್ಪ

Last Updated 23 ಫೆಬ್ರುವರಿ 2019, 20:31 IST
ಅಕ್ಷರ ಗಾತ್ರ

ಕೋಣದ ಚೆನ್ನಬಸಪ್ಪ – ಈ ಹೆಸರಿನ ವ್ಯಕ್ತಿ ಯಾರೆಂದು ಪ್ರಶ್ನಿಸಿದರೆ, ಬಹುತೇಕ ಜನರು ತಲೆ ಕೆರೆದುಕೊಂಡಾರು! ಅದು ಕೋ.ಚೆ. ಎಂದೇ ಖ್ಯಾತರಾದ, ಹಾಗೆಂದೇ ಜನಪ್ರೀತಿ ಗಳಿಸಿದವರ ಪೂರ್ಣ ಹೆಸರು. ಅವರನ್ನು ಪ್ರಗತಿಶೀಲ ಸಾಹಿತಿ, ಎಡಪಂಥೀಯ, ವಿಚಾರವಾದಿ, ಸಮಾಜವಾದಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಧುರೀಣ, ಪ್ರಗತಿಪರ ಪತ್ರಕರ್ತ ಎಂದೆಲ್ಲಾ ಹೇಳಿದರೂ, ಅವರು ಏನೆಂದು ಸ್ಪಷ್ಟಪಡಿಸಲು ಬೇಕಾದ ಪದಗಳು ಸಿಗಲಾರದೆನಿಸುತ್ತದೆ.

ರಮಣ ಮಹರ್ಷಿ ಮತ್ತು ಅರವಿಂದರ ವಿಚಾರಧಾರೆಯ ಪ್ರಭಾವದಲ್ಲಿದ್ದೂ, ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು; ಅವರ ಸ್ನೇಹವಲಯದಲ್ಲಿ ಬಲಪಂಥೀಯರೂ ಇದ್ದರು. ಅವರ ಜೊತೆಗಿನ ಮಾತು ಎಂದರೆ, ಅದೊಂದು ರಸಗವಳ. ಇತಿಹಾಸದ ಪುಟಪುಟಗಳನ್ನು ತೆರೆದಿಟ್ಟಂತೆ. ಪ್ರಗತಿಪರ ಲೇಖಕರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲೇ ಕಾಣಿಸುವ ಅವರಿಗೆ ಅ.ನ.ಕೃ., ತ.ರಾ.ಸು., ನಿರಂಜನ, ಕಟ್ಟೀಮನಿ ಅವರು ಎಷ್ಟು ಮುಖ್ಯರಾಗಿದ್ದರೋ ಅಷ್ಟೇ ಕುವೆಂಪು ಅವರೂ ಮುಖ್ಯರಾಗಿದ್ದರು. ಕುವೆಂಪು ಅವರ ರಾಮಾಯಣ ದರ್ಶನಂನ ಆರಾಧಕರಾಗಿದ್ದ ಕೋ.ಚೆ., ಆ ಬಗ್ಗೆ ಬರೆದಿದ್ದಾರೆ ಕೂಡ.

ಅವರಿಗೆ ಪ್ರಿಯವಾಗಿದ್ದ ಮತ್ತೊಂದು ಕಾವ್ಯ ಅರವಿಂದರ ಸಾವಿತ್ರಿ. ಕಬ್ಬಿಣದ ಕಡಲೆ ಎಂದೇ ಪರಿಗಣಿತವಾಗಿರುವ, ಭಾರತೀಯ ತತ್ತ್ವಜ್ಞಾನದ ಪ್ರತೀಕದಂತಿರುವ ಒಂದು ದರ್ಶನಕಾವ್ಯ ಸಾವಿತ್ರಿ. ಅದನ್ನು ಕೋ.ಚೆ. ಇಡಿಯಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಸಾವಿತ್ರಿಯನ್ನು ಅನುವಾದಿಸುವ ಧೈರ್ಯ ನಿಮಗೆ ಹೇಗೆ ಬಂತು’ ಎಂದರೆ, ‘ಎಲ್ಲಾ ಆ ತಾಯಿಯ ಕೃಪೆ’ ಎಂದು ಮಾತೆಯವರ ಫೋಟೊ ತೋರಿಸಿ ಹೇಳಿದ್ದರು.

ಬಳ್ಳಾರಿ ಜಿಲ್ಲೆಯ ವಿಲೀನದ ಸಂದರ್ಭ ಮೃತನಾದ ರಂಜಾನ್ ಸಾಬ್ ಬಗ್ಗೆ ರೈತ ಪತ್ರಿಕೆಯಲ್ಲಿ ಪ್ರಕಟಿಸುವುದರ ಮೂಲಕ ಆ ಹೆಸರನ್ನು ಕೋ.ಚೆ. ಇತಿಹಾಸದ ಪುಟಗಳಿಗೆ ಸೇರಿಸಿದ್ದರು.

1946ರಿಂದ ಅವರ ವಕೀಲಿವೃತ್ತಿ ಆರಂಭವಾಗಿತ್ತು. 1965ರಿಂದ 1977ರವರೆಗೆ ವಿವಿಧ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ‘ಹಿಂದಿರುಗಿ ಬರಲಿಲ್ಲ’ ಎಂಬ ಹಿಂದಿನ ಕಾದಂಬರಿಯಿಂದ ಆರಂಭಿಸಿ, ಈಚಿನ ‘ಬೇಡಿ ಕಳಚಿತು ದೇಶ ಒಡೆಯಿತು’ ಎಂಬ ಬೃಹತ್ ಕಾದಂಬರಿಯವರೆಗೆ ಕೋ.ಚೆ. ಅವರನ್ನು ಓದುಗರು ನೆನಪಿನಲ್ಲಿರಿಸಿಕೊಳ್ಳುತ್ತಾರೆ.

ಕರ್ನಾಟಕ ಏಕೀಕರಣ ಇತಿಹಾಸ ಕೃತಿಯ ಸಂಪಾದಕತ್ವದ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದಾಗ, ನನ್ನ ಜೊತೆಗಿದ್ದ ಹಿರಿಯರ ಪೈಕಿ ಕೋ.ಚೆ. ಅವರೂ ಒಬ್ಬರು. ವೈಚಾರಿಕ ನಿಲುವಿನ, ಕನ್ನಡದ ಬಗೆಗಿನ ಪ್ರೀತಿಯಿದ್ದ ಹಿರಿಯರು ಇಲ್ಲವಾದರು ಎಂಬ ನೋವು ನನ್ನಂತಹ ಇನ್ನೂ ಹಲವರಿಗಿರುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT