ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ರಸ್ತೆಗಾಗಿ ಕಾಫಿ ತೋಟ ನೀಡಿದ ಬೆಳೆಗಾರ; ಸಂಕಷ್ಟದ ನಡುವೆಯೂ ಮಿಡಿದ ಹೃದಯ

ರಸ್ತೆಗಾಗಿ ಮೂರು ಎಕರೆ ತೋಟವನ್ನೇ ಬಿಟ್ಟುಕೊಟ್ಟ ಬೆಳೆಗಾರ
Last Updated 21 ಸೆಪ್ಟೆಂಬರ್ 2018, 2:32 IST
ಅಕ್ಷರ ಗಾತ್ರ

ಮಡಿಕೇರಿ: ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದ್ದ ಮಡಿಕೇರಿ– ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಮರು ಜೋಡಣೆಗೆ ವ್ಯಕ್ತಿಯೊಬ್ಬರು 3 ಎಕರೆ ಕಾಫಿ ತೋಟವನ್ನೇ ಬಿಟ್ಟು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಹಾಮಳೆಯಿಂದ ‘ಬಾಲಾಜಿ ಎಸ್ಟೇಟ್‌’ ಬಳಿ ಹೆದ್ದಾರಿ ಜಾರು ಬಂಡಿಯಂತೆ ಕುಸಿದಿತ್ತು. 450 ಮೀಟರ್‌ ಉದ್ದದಷ್ಟು ರಸ್ತೆಯೇ ಕೊಚ್ಚಿ ಹೋಗಿದ್ದರ ಪರಿಣಾಮ ಬೃಹತ್‌ ಕಂದಕವೇ ಸೃಷ್ಟಿಯಾಗಿತ್ತು.ಈ ಮಾರ್ಗದಲ್ಲಿ 12 ಕಡೆ ರಸ್ತೆ ಕೊಚ್ಚಿ ಹೋಗಿತ್ತು. ಹಾಲೇರಿ, ಮಕ್ಕಂದೂರು, ಎಮ್ಮೆತ್ತಾಳ, ಹಟ್ಟಿಹೊಳೆ, ತಂತಿಪಾಲ ಹಾಗೂ ಮಾದಾಪುರ ಗ್ರಾಮಕ್ಕೆ ಈ ಮಾರ್ಗದಲ್ಲಿ ರಸ್ತೆ ಸಂಚಾರ ಸಾಧ್ಯವಿರಲಿಲ್ಲ. ಜನರು ಬೆಟ್ಟವನ್ನೇರಿ ಗ್ರಾಮವನ್ನು ತಲುಪುತ್ತಿದ್ದರು. ಅದರಲ್ಲೂ ಬಾಲಾಜಿ ಎಸ್ಟೇಟ್‌ ಬಳಿ ದೊಡ್ಡ ಸೇತುವೆ ನಿರ್ಮಿಸಿದರೆ ಮಾತ್ರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಬಹುದು ಎಂಬ ಸ್ಥಿತಿಯಿತ್ತು. ಕುಸಿದ ಮಣ್ಣಿನ ನಡುವೆ ಹೊಸ ಸೇತುವೆ ನಿರ್ಮಾಣಕ್ಕೆ ಹಲವು ತಿಂಗಳೇ ಬೇಕಿತ್ತು.

ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಚೆನ್ನೈನಲ್ಲಿ ನೆಲೆಸಿರುವ ‘ಸಿಂಕೋನ ಎಸ್ಟೇಟ್‌’ ಮಾಲೀಕ ಅಶೋಕ್‌ ಕುಮಾರ್‌ ಶೆಟ್ಟಿ ಅವರು 3 ಎಕರೆಯಷ್ಟು ಕಾಫಿ ತೋಟವನ್ನೇ ಲೋಕೋಪಯೋಗಿ ಇಲಾಖೆಗೆ ಬಿಟ್ಟು ಕೊಟ್ಟಿದ್ದಾರೆ. ಸೇತುವೆ ನಿರ್ಮಾಣದ ಆಲೋಚನೆ ಕೈಬಿಟ್ಟು ಎಡಬದಿ ಬೆಟ್ಟವನ್ನೇ ಕೊರೆದು ರಸ್ತೆ ನಿರ್ಮಿಸಲಾಗಿದೆ. ಕೊಚ್ಚಿಹೋದ ಸ್ಥಳದಲ್ಲಿ ತಿಂಗಳಲ್ಲಿ ಹೊಸರಸ್ತೆ ಎದ್ದು ನಿಂತಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

(ಅಶೋಕ್‌ ಕುಮಾರ್‌ ಶೆಟ್ಟಿ)

‘ಕೊಡಗಿನ ಮೂರು ಸ್ಥಳಗಳಲ್ಲಿ ಅಶೋಕ್‌ ಕುಮಾರ್‌ಗೆ ಸೇರಿದ 50 ಎಕರೆಯಷ್ಟು ಕಾಫಿ ತೋಟವು ಭೂಕುಸಿತದಿಂದ ಸರ್ವನಾಶವಾಗಿದೆ. ಸಂಕಷ್ಟದ ನಡುವೆಯೂ ರಸ್ತೆಗಾಗಿ ತೋಟವನ್ನೇ ನೀಡಿದ್ದಾರೆ. ಇದುವರೆಗೂ ಅವರು ನೆರವು ಕೇಳಿಲ್ಲ. ಆದರೆ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರೇ ಸಾವಿರಾರು ಜನರು ಸಂಚರಿಸುವ ರಸ್ತೆಗೆ ಜಾಗ ನೀಡಿದ ಮಾಲೀಕರಿಗೆ ಅಗತ್ಯ ಪರಿಹಾರ ಕೊಡಿಸುವ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿದ್ದಾರೆ’ ಎಂದು ಗುತ್ತಿಗೆದಾರ ಅಶ್ರಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೆರಡು ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಈ ಮಾರ್ಗವು ಮುಕ್ತಗೊಳ್ಳುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದ್ದು ಸ್ಥಳೀಯರ ವಾಹನ ಸಂಚಾರಕ್ಕೆ ಮಾತ್ರ ಅನುಮತಿ ನೀಡಬೇಕು. ಭಾರೀ ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ಮತ್ತೆ ರಸ್ತೆ ಕುಸಿಯಲಿದೆ’ ಎಂದು ಕಾಂಡನಕೊಲ್ಲಿ ಪೂವಣ್ಣ ಆಗ್ರಹಿಸಿದ್ದಾರೆ.

ಜನಪ್ರತಿನಿಧಿ ನೆರವು: ಆಶ್ರಯ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಲು ಸುಂಟಿಕೊಪ್ಪ ಕ್ಷೇತ್ರದ ಜಿ.ಪಂ. ಸದಸ್ಯ ಅಬ್ದುಲ್‌ ಲತೀಫ್‌ ಅವರು 1 ಎಕರೆ ಜಾಗವನ್ನು ಉಚಿತವಾಗಿ ನೀಡಿ ಹೃದಯವಂತಿಕೆ ಮೆರೆದಿದ್ದಾರೆ. ‘ಈ ಸ್ಥಳದಲ್ಲಿ ಎಲ್ಲ ಸಮುದಾಯದ ಜನರಿಗೂ ಮನೆ ನಿರ್ಮಿಸಿಕೊಡಿ’ ಎಂದು ವಸತಿ ಸಚಿವ ಯು.ಟಿ.ಖಾದರ್‌ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT