ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲಾ ಸೀತಾರಾಮನ್‌ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಕೃಷ್ಣ ಬೈರೇಗೌಡ

Published 11 ಫೆಬ್ರುವರಿ 2024, 15:54 IST
Last Updated 11 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿಯಲ್ಲಿ ರಾಜ್ಯಕ್ಕೆ ಯಾವುದೇ ಬಾಕಿ ಇಲ್ಲ ಎನ್ನುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಪರಿಹಾರ ಕೋರುವುದು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿ. ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ. ನಿರ್ಮಲಾ ಅವರ ಮಾತಿನಲ್ಲಿ ಸತ್ಯವಿದ್ದರೆ ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಲಿ’ ಎಂದು ಸವಾಲು ಹಾಕಿದರು.

ರಾಜ್ಯದ 223 ತಾಲ್ಲೂಕುಗಳಲ್ಲಿ ತೀವ್ರವಾದ ಬರಗಾಲ ಇದೆ. ರಾಜ್ಯಕ್ಕೆ ₹18,172 ಕೋಟಿ ಬರ ಪರಿಹಾರ ನೀಡುವಂತೆ ಕೋರಿ 2023ರ ಸೆಪ್ಟೆಂಬರ್ 23ರಂದು ಮೊದಲ ಮನವಿ ಸಲ್ಲಿಸಲಾಗಿತ್ತು. ನಂತರ ಎರಡು ಪೂರಕ ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಾಲ್ಕೂವರೆ ತಿಂಗಳಾದರೂ ಕೇಂದ್ರ ಸರ್ಕಾರದಿಂದ ಯಾವ ಸ್ಪಂದನೆಯೂ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಡಿಆರ್‌ಎಫ್‌ ಅಡಿ ರಾಜ್ಯಗಳಿಗೆ ಪರಿಹಾರ ಮಂಜೂರು ಮಾಡುವ ಸಮಿತಿಗೆ ಕೇಂದ್ರ ಗೃಹ ಸಚಿವರೇ ಅಧ್ಯಕ್ಷರು. ರಾಜ್ಯ ಸರ್ಕಾರ ನಿರಂತರವಾಗಿ ಮನವಿ ಮಾಡುತ್ತಿದ್ದರೂ ಸಮಿತಿಯ ಸಭೆ ನಡೆಸಿಲ್ಲ. ಭಾನುವಾರ ರಾಜ್ಯ ಪ್ರವಾಸಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬರ ಪರಿಹಾರ ಘೋಷಿಸಿ ರಾಜ್ಯದ ಜನರ ನೆರವಿಗೆ ಬರಬೇಕಿತ್ತು ಎಂದರು.

2009ರಲ್ಲಿ ರಾಜ್ಯದಲ್ಲಿ ಭೀಕರವಾದ ಪ್ರವಾಹ ಬಂದಿತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಪರಿಸ್ಥಿತಿ ವೀಕ್ಷಣೆಗೆ ಬಂದ ದಿನವೇ ರಾಜ್ಯಕ್ಕೆ ₹1,000 ಕೋಟಿ ತುರ್ತು ನೆರವು ಬಿಡುಗಡೆ ಮಾಡಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿತ್ತು. ಸಿಂಗ್ ಅವರು ರಾಜಕಾರಣ ಮಾಡಿರಲಿಲ್ಲ. ಅಂತಹ ಪ್ರಬುದ್ಧ ನಿಲುವನ್ನು ಕೇಂದ್ರದ ಈಗಿನ ಸರ್ಕಾರ ಕೂಡ ಪ್ರದರ್ಶಿಸಬೇಕಿತ್ತು ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಇರುವ 156 ಹಳ್ಳಿಗಳಲ್ಲಿ 183 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. 46 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶಗಳ 40 ವಾರ್ಡ್‌ಗಳಲ್ಲೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ವಿವರ ನೀಡಿದರು.

7,082 ಗ್ರಾಮಗಳು ಮತ್ತು 1,193 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಸಮಸ್ಯೆ ಎದುರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲು ಸೂಚಿಸಲಾಗಿದೆ ಎಂದರು.

ರೈತರಿಗೆ ₹ 628 ಕೋಟಿ ಪಾವತಿ

ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನಲ್ಲಿ ತಲಾ ₹2000 ಪರಿಹಾರ ವಿತರಿಸಲಾಗುತ್ತಿದೆ. ಈವರೆಗೆ 33 ಲಕ್ಷ ರೈತರಿಗೆ ₹628 ಕೋಟಿ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ತಾಂತ್ರಿಕ ಕಾರಣಗಳಿಗಾಗಿ 1.60 ಲಕ್ಷ ರೈತರಿಗೆ ಪರಿಹಾರ ಪಾವತಿ ವಿಳಂಬವಾಗಿದೆ. ಸಮಸ್ಯೆ ಪರಿಹರಿಸಿಕೊಂಡು ಪಾವತಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT