ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಡ್ಯಾಂ ನೋಡಿ ಹೊಟ್ಟೆ ಉರಿಯುತ್ತಿದೆ: ಬೊಮ್ಮಾಯಿ

ಶಾಸಕ ಬಸವರಾಜ ಬೊಮ್ಮಾಯಿ ಆಕ್ರೋಶ
Published 8 ಸೆಪ್ಟೆಂಬರ್ 2023, 14:39 IST
Last Updated 8 ಸೆಪ್ಟೆಂಬರ್ 2023, 14:39 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಜಲಾಶಯವನ್ನು ಸರ್ಕಾರ ಬರಿದು ಮಾಡುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಶುಕ್ರವಾರ ಭೇಟಿ ನೀಡಿದ್ದ ಬಿಜೆಪಿ ಮುಖಂಡರ ನಿಯೋಗದ ನೇತೃತ್ವದ ವಹಿಸಿದ್ದ ಅವರು ಜಲಾಶಯ ವೀಕ್ಷಿಸಿ ಬಂದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ರಾಜ್ಯ ಸರ್ಕಾರ ಆತುರವಾಗಿ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಜನರಿಗೆ ನಮಗೆ ಅನ್ಯಾಯ ಮಾಡಿದೆ. ಕಾವೇರಿ ಕೊಳ್ಳದ ಜನರು ಈ ಸರ್ಕಾರವನ್ನು ಎಂದಿಗೂ ಕ್ಷಮಿಸುವುದಿಲ್ಲ. ಬಿಜೆಪಿ ನಿಯೋಗ ಬರುತ್ತಿದೆ ಎಂಬ ಕಾರಣಕ್ಕೆ ಅಣೆಕಟ್ಟೆಯಿಂದ ಹರಿಸುತ್ತಿದ್ದ ನೀರು ನಿಲ್ಲಿಸಲಾಗಿದೆ. ತಮಿಳುನಾಡಿನಲ್ಲಿ ಕುರುವೈ ಬೆಳೆಗೆ 37 ಟಿಎಂಸಿ ಅಡಿ ನೀರಿಗೆ ಬದಲಾಗಿ 67 ಟಿಎಂಸಿ ಅಡಿಗಳಷ್ಟು ನೀರು ಹರಿಸಿದೆ. ಇದನ್ನು ಪತ್ತೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

‘ಮಳೆ ಬಾರದಿದ್ದರೆ ಬೆಂಗಳೂರು ಇತರ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಬೇಸಿಗೆಯಲ್ಲಿ ಎರಡು ಟಿಎಂಸಿ ಅಡಿಯಷ್ಟು ಆವಿಯಾಗುತ್ತದೆ ಎಂದು ಅಧಿಕಾರಿಗಳೇ ಹೇಳುತ್ತಾರೆ. ಜಲಾಶಯಕ್ಕೆ ನೀರು ಹರಿದು ಬರಲು ಶುರುವಾದ ತಕ್ಷಣ ಕೆರೆ, ಕಟ್ಟೆಗಳನ್ನು ತುಂಬಿಸಬೇಕಿತ್ತು. ರೈತರಿಗೆ ನೀರು ಕೊಡಲು ಎರಡು ತಿಂಗಳು ತಡ ಮಾಡಿದ ಪರಿಣಾಮ ಬೆಳೆ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಹೊಣೆಯಾಗಬೇಕು. ಕಾವೇರಿ ಕಣಿವೆ ಪ್ರದೇಶದ ಜನರು ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಮಂದಿ ಕಾಂಗ್ರೆಸ್‌ ಶಾಸಕರನ್ನು ಗೆಲ್ಲಿಸಿ ಕಳುಹಿಸಿದ್ದಾರೆ. ಅದಕ್ಕೆ ಸರ್ಕಾರ ಈ ಬಹುಮಾನ ಕೊಟ್ಟಿದೆ’ ಎಂದು ವ್ಯಂಗ್ಯವಾಡಿದೆ.

ಮೇಕೆದಾಟು ಯೋಜನೆ ಹೋರಾಟದಲ್ಲಿ ರೈತರು ಭಾಗಿಯಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವುದು ಸುಳ್ಳು. ರೈತರು ತಮಗೆ ಅನ್ಯಾಯವಾದಾಗ ಪ್ರತಿಭಟಿಸಿದ್ದಾರೆ. ರಾಜಕೀಯ ಮಾಡಲು ಹೋಗಿಲ್ಲ ಎಂದರು.

ಪ್ರತಾಪಸಿಂಹ ವಾಗ್ದಾಳಿ: ಅಣೆಕಟ್ಟೆ ವೀಕ್ಷಣೆಗೆ ಮಾಧ್ಯಮದವರಿಗೆ ಅವಕಾಶ ನೀಡದೆ ವಾಸ್ತವಾಂಶವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಸಂಸದ ಪ್ರತಾಪಸಿಂಹ ವಿರುದ್ಧ ವಾಗ್ದಾಳಿ ವಾಗ್ದಾಳಿ ನಡೆಸಿದರು. ಮಾಧ್ಯಮದವರು ಅಣೆಕಟ್ಟೆಗೆ ಬಾಂಬ್‌ ಹಾಕಲು ಬಂದಿಲ್ಲ. ಅಣೆಕಟ್ಟೆಯಲ್ಲಿರುವ ನೀರಿನ ಕುರಿತು ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಲು ಬಂದಿದ್ದಾರೆ. ನಮ್ಮ ಜನರ ಹಿತಕ್ಕಿಂತ ಈ ಸರ್ಕಾರಕ್ಕೆ ತಮಿಳುನಾಡಿನ ಡಿಎಂಕೆ ಸರ್ಕಾರದ ಸಖ್ಯವೇ ಮುಖ್ಯವಾಗಿದೆ ಎಂದು ಟೀಕಿಸಿದರು.

‘ಪ್ರಾಧಿಕಾರ ಹೇಳಿದ ಪ್ರಮಾಣಕ್ಕಿಂತ ಹೆಚ್ಚು ನಿರನ್ನು ತಮಿಳುನಾಡಿಗೆ ಕಾಂಗ್ರೆಸ್‌ ಸರ್ಕಾರ ಹರಿಸಿದ್ದು, ಈ ಸತ್ಯವನ್ನು ಮುಚ್ಚಿಡಲು ಮಾಧ್ಯಮದವರನ್ನು ದೂರ ಇಡಲಾಗಿದೆ’ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.

ತಳ್ಳಾಟ– ನೂಕಾಟ: ಕೆಆರ್‌ಎಸ್‌ ದಕ್ಷಿಣ ದ್ವಾರದಲ್ಲಿ ಜಮಾಯಿಸಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮನ್ನು ಅಣೆಕಟ್ಟೆಯತ್ತ ಬಿಡದ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ದಕ್ಷಿಣ ದ್ವಾರದಲ್ಲಿ ಮೂರು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಬ್ಯಾರಿಕೇಡ್‌ಗಳನ್ನು ದಾಟಿ ಹೋಗುವ ಯತ್ನವೂ ನಡೆಯಿತು. ಈ ಹಂತದಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಿದರು. ಇಂಡುವಾಳು ಸಚ್ಚಿದಾನಂದ ಇತರರು ಪೊಲೀಸರನ್ನು ಪ್ರಶ್ನಿಸಿದರು. ಎಂಜಿನಿಯರ್‌ ಯಾರು, ಕರೆಯಿರಿ ಎಂದು ಕೂಗಿದರು. ರಾಜ್ಯ ಮಟ್ಟದ ನಾಯಕರು ಒಳಗೆ ಹೋದ ಕೆಲ ಸಮಯದ ಬಳಿಕೆ ಜಿಲ್ಲಾ ಮಟ್ಟದ ಮುಖಂಡರನ್ನು ಪೊಲೀಸರು ಕಳುಹಿಸಿಕೊಟ್ಟರು.

ತಂಡ: ಶಾಸಕರಾದ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಗೋಪಾಲಯ್ಯ, ಶ್ರೀವತ್ಸ, ಸಂಸದರಾದ ಪ್ರತಾಪಸಿಂಹ, ಸುಮಲತಾ ಅಂಬರೀಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.. ಉಮೇಶ್‌, ರಾಜ್ಯ ಸಮಿತಿ ಸದಸ್ಯ ಡಾ. ಎಸ್‌. ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ.ಇಂದ್ರೇಶ್‌, ಎಸ್‌.ಪಿ. ಸ್ವಾಮಿ, ಮುನಿರಾಜು ಅಣೆಕಟ್ಟೆ ವೀಕ್ಷಿಸಿದ ತಂಡದಲ್ಲಿದ್ದರು.

ಕೆಆರ್‌ಎಸ್‌ ದಕ್ಷಿಣ ದ್ವಾರದ ಬಳಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು
ಕೆಆರ್‌ಎಸ್‌ ದಕ್ಷಿಣ ದ್ವಾರದ ಬಳಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು
ಬಿಜೆಪಿ ಮುಖಂಡರನ್ನು ಅಣೆಕಟ್ಟೆ ಬಳಿಗೆ ಬಿಡದ ಪೊಲೀಸರ ವಿರುದ್ಧ ಮುಖಂಡ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿ ಮುಖಂಡರನ್ನು ಅಣೆಕಟ್ಟೆ ಬಳಿಗೆ ಬಿಡದ ಪೊಲೀಸರ ವಿರುದ್ಧ ಮುಖಂಡ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT