ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಪರಿಹಾರ ತಾರತಮ್ಯ | 2013ರ ಭೂಸ್ವಾಧೀನ ಕಾಯ್ದೆಯನ್ವಯ ಕ್ರಮ: ಸಿಎಂ ಸಿದ್ದರಾಮಯ್ಯ

Published 21 ಅಕ್ಟೋಬರ್ 2023, 7:33 IST
Last Updated 21 ಅಕ್ಟೋಬರ್ 2023, 7:33 IST
ಅಕ್ಷರ ಗಾತ್ರ

ಬೆಂಗಳೂರು: ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆಯು ನಿರ್ಮಿಸುತ್ತಿರುವ ವಾಯುನೆಲೆಯನ್ನು ವಿಸ್ತರಿಸಿ, ಸಿವಿಲ್‌ ಎನ್‌ಕ್ಲೇವ್‌ ನಿರ್ಮಿಸುವ ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ತಾರತಮ್ಯ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್‌ ಸೈಲ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿಯನ್ನು ಶನಿವಾರ ಭೇಟಿ‌ ಮಾಡಿ ಚರ್ಚೆ ನಡೆಸಿದರು.

ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ ಮತ್ತು ಮೋಸ ಸರಿಪಡಿಸಿ ಎಂದು ಸಭೆಯಲ್ಲಿ ಮೂರು ಗ್ರಾಮಗಳ ನಿರಾಶ್ರಿತ ಕುಟುಂಬಗಳು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ವೈಜ್ಞಾನಿಕವಾಗಿ, ನಿಯಮಬದ್ದವಾಗಿ ಪರಿಹಾರ ಕೊಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳೊಂದಿಗೆ, ಭೂಸ್ವಾಧೀನ ಪರಿಹಾರ ನಿಗದಿ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ ಮತ್ತು ಸೂಕ್ತ ನಿವೇಶನ ನೀಡುವ ಕುರಿತು ಚರ್ಚಿಸುವಂತೆ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರಿಗೆ ಮುಖ್ಯಮಂತ್ರಿ ಸೂಚಿಸಿದರು.

ಸೀಬರ್ಡ್‌ ಮೊದಲ ಹಂತದ ಯೋಜನೆಯಡಿ ಭೂಮಿ ಕಳೆದುಕೊಂಡವರ ಕುಟುಂಬದವರಿಗೂ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದೂ ಅವರು ತಿಳಿಸಿದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಯ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್‌, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT