ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಅಕ್ರಮ: ಲೋಕಾಯುಕ್ತ ತನಿಖೆ

ನೇಮಕಾತಿ ಭ್ರಷ್ಟಾಚಾರ * ಐವರು ಅಧಿಕಾರಿಗಳ ವಿರುದ್ಧ ಆರೋಪ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಗಸೂಚಿಗೆ ವಿರುದ್ಧವಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕ ಮಾಡಿದ್ದ ಇಬ್ಬರು ಉಪ ನಿರ್ದೇಶಕರೂ ಸೇರಿ ಐವರು ಅಧಿಕಾರಿಗಳ ವಿರುದ್ಧದ ಪ್ರಕರಣದ ತನಿಖೆಯನ್ನು ಸರ್ಕಾರ ಲೋಕಾಯುಕ್ತಕ್ಕೆ ಒಪ್ಪಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಜಿಲ್ಲೆಯ ಉಪ ನಿರ್ದೇಶಕ ಎನ್‌.ನಾರಾಯಣಸ್ವಾಮಿ, ಬೆಂಗಳೂರು ನಗರ ಜಿಲ್ಲೆ ಉಪ ನಿರ್ದೇಶಕ ಎಸ್‌.ಸಿದ್ದರಾಮಣ್ಣ, ನಿವೃತ್ತ ಉಪ ನಿರ್ದೇಶಕ ಮಹೇಶ್ವರಪ್ಪ, ಕೊಡಗಿನ ಜಿಲ್ಲಾ ನಿರೂಪಣಾಧಿಕಾರಿ ಬಿ.ಈರಾಸ್ವಾಮಿ, ಬೆಂಗಳೂರು ನಗರ ಜಿಲ್ಲೆ ಉಪ ನಿರ್ದೇಶಕರ ಕಚೇರಿ ಅಧೀಕ್ಷಕ ಮಹಾಲಿಂಗೇಶ್‌ ಆರೋಪಿಗಳು.

ಬೆಂಗಳೂರು ನಗರ ಜಿಲ್ಲೆಯಲ್ಲಿ 2019ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಅಧಿಕಾರಿಗಳು, ಜಿಲ್ಲೆಯಲ್ಲಿ ಅಂದು ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ನೇಮಕ ಮಾಡುವಾಗ ಸಮಗ್ರ ಶಿಶು ಅಭಿವೃದ್ಧಿ ಯೋಜನೆ–2004ರ ನಿಯಮಗಳನ್ನು ಪಾಲಿಸದೇ, ಮಾರ್ಗಸೂಚಿ ಅನುಸರಿಸದೇ ಹಣ ಪಡೆದು ನೇಮಕಾತಿ ಮಾಡಿದ್ದಾರೆ ಎಂದು ವಕೀಲ ವಿ.ನರಸಿಂಹಮೂರ್ತಿ ಅವರು, ಆರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿ, ಕ್ರಮಕ್ಕೆ ಶಿಫಾರಸು ಮಾಡಲು ಇಲಾಖೆಯ ಮೂವರು ಉನ್ನತಾಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ನೇಮಕಾತಿ ದಾಖಲೆಗಳನ್ನು ಪರಿಶೀಲಿಸಿದ್ದ ತಂಡ, ‘ಉಪ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಇತರೆ ಅಧೀನ ಅಧಿಕಾರಿಗಳು ಸೇರಿಕೊಂಡು ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ದೃಢಪಟ್ಟಿದೆ. ವಿಧವೆಯರು, ಅಂಗವಿಕಲರು, ಸಂತ್ರಸ್ತರು, ಶೈಕ್ಷಣಿಕ ಅರ್ಹತೆ ಮತ್ತಿತರ ಮಾರ್ಗಸೂಚಿಗಳನ್ನು ಪಾಲಿಸದೇ ಮನಬಂದಂತೆ ನೇಮಕಾತಿ ಆದೇಶ ನೀಡಲಾಗಿದೆ’ ಎಂದು ವರದಿ ನೀಡಿತ್ತು. ಆರೋಪಿತ  ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. 

ಅಧಿಕಾರಿಗಳ ತಂಡ ನೀಡಿದ್ದ ವರದಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯುಕ್ತರು ಇಲಾಖಾ ತನಿಖೆಗೆ ಆದೇಶಿಸಿದ್ದರು. ಆದರೆ, ಆರೋಪಿತ ಅಧಿಕಾರಿಗಳು ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಇಲಾಖಾ ತನಿಖೆಯನ್ನು ರದ್ದು ಮಾಡಿ, ವಿಸ್ತೃತ ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಒಬ್ಬ ಅಧಿಕಾರಿ ಹೆಸರು ಕಣ್ಮರೆ!

ನೇಮಕಾತಿ ಭ್ರಷ್ಟಾಚಾರದ ಆರೋಪ ಹೊತ್ತವರಲ್ಲಿ ಆರು ಅಧಿಕಾರಿಗಳ ಹೆಸರು ಇದ್ದರೂ, ಲೋಕಾಯುಕ್ತ ತನಿಖೆಗೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಒಬ್ಬರ ಹೆಸರನ್ನು ಕೈಬಿಡಲಾಗಿದೆ.

ಅಂತಿಮ ಹಂತದಲ್ಲಿ ಯಾವಕಾರಣಕ್ಕೆ ಹೆಸರು ಬಿಡಲಾಗಿದೆ ಎಂಬ ಕುರಿತು ಆದೇಶದಲ್ಲಿ ಯಾವ ಉಲ್ಲೇಖವೂ ಇಲ್ಲ. ಮೂವರು ಅಧಿಕಾರಿಗಳು ನೀಡಿದ ವರದಿ, ಲೋಕಾಯುಕ್ತ ವಿಚಾರಣೆಗೆ ನೀಡಲು ಅನುಮತಿ ಕೋರಿ ಸಲ್ಲಿಸಿದ ಪ್ರಸ್ತಾವನೆಯಲ್ಲೂ ಇದ್ದ ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್‌ ಕುಮಾರ್‌ ಹೆಸರು ಅಂತಿಮ ಆದೇಶದಲ್ಲಿ ಕಣ್ಮರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT