ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಚಿ ತಿನ್ನುತ್ತಿರುವ ದೋಸ್ತಿ ಸರ್ಕಾರ: ಭಾರತಿ ಶೆಟ್ಟಿ ಟೀಕೆ

Last Updated 27 ಜನವರಿ 2019, 8:00 IST
ಅಕ್ಷರ ಗಾತ್ರ

ಬೆಳಗಾವಿ: ‘ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿ ಸರ್ಕಾರವು, ಅಧಿಕಾರದಲ್ಲಿ ಇರುವಷ್ಟು ದಿನಗಳಲ್ಲಿ ದೋಚಿ ತಿನ್ನಬೇಕು ಎನ್ನುವ ಮನಸ್ಥಿತಿಯಲ್ಲಿ ಇರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಸಿಗುವ ಯಾವ ಅವಕಾಶವನ್ನೂ ಪಕ್ಷ ಕೈಚೆಲ್ಲುವುದಿಲ್ಲ’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುದುರೆ ವ್ಯಾಪಾರವೆನ್ನಿ, ಕತ್ತೆ ವ್ಯಾ‍ಪಾರವೆನ್ನಿ. ನಾವೂ ರಾಜಕೀಯ ಪಕ್ಷದವರೇ; ಅಧಿಕಾರ ಬಯಸುವವರೇ. ಯಾರಾದರೂ ಶಾಸಕರು ಬರುತ್ತೇನೆ ಎಂದರೆ ಬೇಡ ಎನ್ನುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನ ನೀಡಿದ್ದರೂ ಅದನ್ನು ರೈತರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ’ ಎಂದು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಮಹಿಳಾ ಮೋರ್ಚಾ ಸಕ್ರಿಯವಾಗಿದೆ. ಮತಗಟ್ಟೆಗೆ ಐವರು ಕಾರ್ಯಕರ್ತೆಯರಂತೆ, ರಾಜ್ಯದ 51,178 ಬೂತ್‌ಗಳಲ್ಲಿ 11,635 ಮಂದಿಯನ್ನು ಮೋರ್ಚಾದಿಂದ ಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದಾದ್ಯಂತ ಕಾರ್ಯಾಗಾರ ನಡೆಸಲಾಗುತ್ತಿದೆ. ಇವರು, ಕೇಂದ್ರದ ಯೋಜನೆಗಳ ಫಲಾನುಭವಿ ಮಹಿಳೆಯರನ್ನು ಸಂಪರ್ಕಿಸುತ್ತಾರೆ. ಪ್ರಚಾರ ಮಾಡುತ್ತಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕೊಡಿಸುತ್ತಾರೆ. ಇದಕ್ಕಾಗಿ ಕಮಲ ಶಕ್ತಿ ಹಾಗೂ ಕಮಲ ಜ್ಯೋತಿ ಅಭಿಯಾನ ನಡೆಸಲಾಗುತ್ತಿದೆ. ಸೈನಿಕರ ರೀತಿಯಲ್ಲಿ ಕೆಲಸ ಮಾಡಿ, ಬಿಜೆಪಿ ಸರ್ಕಾರದ ಅವಶ್ಯಕತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ’ ಎಂದರು.

‘ನಮ್ಮ ಪಕ್ಷ ಹಾಗೂ ಸರ್ಕಾರ ಮಹಿಳೆಯರಿಗೆ ದೊಡ್ಡ ಸ್ಥಾನಮಾನವನ್ನು ಕೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಇಂತಿಷ್ಟು ಟಿಕೆಟ್‌ ಕೊಡಬೇಕು ಎನ್ನುವ ಬೇಡಿಕೆಗಿಂತಲೂ, ದೇಶದ ಹಿತಕ್ಕಾಗಿ ತ್ಯಾಗ ಮಾಡುತ್ತೇವೆ. ದೇಶ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT