ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024: 14 ಕ್ಷೇತ್ರ; ಸವಾಲಿನ ಸ್ಪಷ್ಟಚಿತ್ರ

Published 5 ಏಪ್ರಿಲ್ 2024, 0:09 IST
Last Updated 5 ಏಪ್ರಿಲ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿನ ನಾಮಪತ್ರ ಸಲ್ಲಿಕೆಗೆ ಗುರುವಾರ ತೆರೆ ಬಿದ್ದಿದೆ. ಅಭ್ಯರ್ಥಿ ಆಖೈರಾಗದೇ ಕೊನೆಕ್ಷಣದವರೆಗೂ ಕುತೂಹಲ ಉಳಿಸಿಕೊಂಡಿದ್ದ ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಗಳು ಯಾರೆಂಬುದು ಖಚಿತವಾಗಿದ್ದು, ಸವಾಲಿನ ಸ್ಪಷ್ಟಚಿತ್ರಣ ಕಣದಲ್ಲಿ ಕಾಣಿಸಿದೆ.

ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಏ.4ರಂದು 183 ಅಭ್ಯರ್ಥಿಗಳು ಸೇರಿದಂತೆ ಇಲ್ಲಿಯವರೆಗೆ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ (ಏ.5) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯುವ ಅವಧಿ ಏ. 8ಕ್ಕೆ ಮುಕ್ತಾಯವಾಗಲಿದೆ.

ಮಾರ್ಚ್‌ 28ರಂದು ಅಧಿಸೂಚನೆ ಹೊರಬಿದ್ದಿದ್ದು, ಆರಂಭಿಕ ದಿನಗಳಲ್ಲಿ ನಾಮಪತ್ರದ ಭರಾಟೆ ಇರಲಿಲ್ಲ. ಕೊನೆಯ ನಾಲ್ಕುದಿನಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ತರಾತುರಿಗೆ ಬಿದ್ದರು. ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಭಾರಿ ಜನ ಸೇರಿಸಿದ ಅಭ್ಯರ್ಥಿಗಳು, ತಮ್ಮ ಬಲವನ್ನೂ ಪ್ರದರ್ಶಿಸಿದರು.  

ನಾಮಪತ್ರ ಸಲ್ಲಿಕೆ ಆರಂಭವಾಗುವ ದಿನಕ್ಕೂ ಮೊದಲೇ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದವು. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಸ್ಪರ್ಧಿಸುವ ಕ್ಷೇತ್ರಗಳ ಪೈಕಿ ಚಿತ್ರದುರ್ಗ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿ ಹೆಸರುಗಳು ಘೋಷಣೆಯಾಗಿರಲಿಲ್ಲ. ಕಾಂಗ್ರೆಸ್‌ ಕೂಡ ಮೈಸೂರು, ಚಾಮರಾಜಗರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಹೆಸರನ್ನು ಪ್ರಕಟಿಸಿರಲಿಲ್ಲ. ಕೊನೆಕ್ಷಣದವರೆಗೂ ಅಭ್ಯರ್ಥಿ ಯಾರೆಂಬುದು ನಿರ್ಧಾರ ಆಗಿರಲಿಲ್ಲ. ಹೀಗಾಗಿ, ದಿನಕ್ಕೊಂದು ಹೆಸರುಗಳನ್ನು ಹರಿಬಿಡಲಾಗುತ್ತಿತ್ತು. ಅವೆಲ್ಲಕ್ಕೂ, ಕೊನೆ ಬಿದ್ದಿದ್ದು, ಕಣ ಚಿತ್ರ ಸ್ಪಷ್ಟರೂಪ ಪಡೆದಿದೆ.

ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ 28 ಕ್ಷೇತ್ರಗಳಲ್ಲೂ ಗೆಲ್ಲುವ ಪಣಹೊತ್ತು ಅಖಾಡಕ್ಕೆ ಇಳಿದಿದೆ. ತಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಪ್ರದರ್ಶಿಸಲು ಮುಂದಾದ ನಾಯಕರು, ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವ ಜತೆ ನಿಂತು ಒಗ್ಗಟ್ಟು ಪ್ರದರ್ಶಿಸಿದರು. ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಬಿ.ಎಸ್. ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಜತೆಗಿದ್ದರು. ಹಾಸನದಲ್ಲಿ ಪ್ರಜ್ಚಲ್‌ ರೇವಣ್ಣ ನಾಮಪತ್ರ ಸಲ್ಲಿಸುವಾಗ ಬಿ.ವೈ. ವಿಜಯೇಂದ್ರ, ಎಚ್‌.ಡಿ. ದೇವೇಗೌಡ, ಡಿ.ವಿ. ಸದಾನಂದ ಗೌಡ ಹಾಜರಿದ್ದರು. ತುಮಕೂರಿನಲ್ಲಿ ವಿ. ಸೋಮಣ್ಣ ನಾಮಪತ್ರ ಸಲ್ಲಿಸುವಾಗ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಭಾಗಿಯಾಗಿದ್ದರು. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವಾಗ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್‌ ಉಪಸ್ಥಿತರಿದ್ದರು.

ಮೈತ್ರಿ ಒಗ್ಗಟ್ಟು ಪ್ರದರ್ಶಿಸಿದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹ ತಾವು ಒಗ್ಗೂಡಿ ಚುನಾವಣೆ ಕಣಕ್ಕೆ ಇಳಿದಿದ್ದೇವೆ ಎಂಬುದನ್ನು ಬಿಂಬಿಸಲು ಜತೆಯಾಗಿಯೇ ಹೋದರು.  ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧೆಡೆ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಹಾಜರಿದ್ದು, ಉತ್ಸಾಹ ತಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT